ಗೋಣಿಕೊಪ್ಪಲು, ಮೇ 8: ಜಿಲ್ಲೆಯ ಶನಿವಾರಸಂತೆ, ಹಾತೂರು, ಬಿಟ್ಟಂಗಾಲ, ಪಾಲಿಬೆಟ್ಟ, ಗೋಣಿಕೊಪ್ಪಲಿನಲ್ಲಿ ಬಲಿಜ ಸಮಾಜ ಗಣತಿ ಕಾರ್ಯ ಪ್ರಗತಿಯಲ್ಲಿದ್ದು ಮಡಿಕೇರಿಯಲ್ಲಿ ಗಣತಿ ಕಾರ್ಯಕ್ಕೆ ಸುದರ್ಶನ ಅತಿಥಿ ಗೃಹದ ಸಮೀಪ ಎಸ್ಬಿಐ ನೌಕರ ದಯಾನಂದ್ ಅವರ ಮನೆಯಿಂದ ಜಿಲ್ಲಾ ಬಲಿಜ ಸಮಾಜ ನಿರ್ದೇಶಕ ರಮೇಶ್ ಚಾಲನೆ ನೀಡಿದರು.
ಕೊಡಗು ಬಲಿಜ ಕ್ರೀಡೋತ್ಸವ ಹಾತೂರು ಶಾಲಾ ಮೈದಾನದಲ್ಲಿ ತಾ. 26 ಹಾಗೂ ತಾ. 27 ರಂದು ಜರುಗಲಿದ್ದು, ರಾಜ್ಯದ ಬಲಿಜ ಪ್ರಮುಖರಾದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ಬೆಂಗಳೂರು ಸಂಸದ ಪಿ.ಸಿ. ಮೋಹನ್, ಬೆಂಗಳೂರು ಮಾಜಿ ಮೇಯರ್ ಜಿ. ಪದ್ಮಾವತಿ, ಚಿಕ್ಕಪೇಟೆ ಶಾಸಕ ಆರ್.ವಿ. ದೇವರಾಜ್, ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ, ಸುಪ್ರೀಂ ಕೋರ್ಟ್ ವಕೀಲ ದ್ವಾರಕಾನಾಥ್, ಚಿಕ್ಕಬಳ್ಳಾಪುರದ ನವೀನ್ ಕಿರಣ್, ಬಾಗೇಪಲ್ಲಿ ಚಿತ್ರ ನಿರ್ಮಾಪಕ ಹಾಗೂ ಜೆಡಿಎಸ್ ಅಭ್ಯರ್ಥಿ ಸಿ.ಆರ್. ಮನೋಹರ್, ರೋಗ್ ಚಿತ್ರನಟ ಇಶಾನ್, ಮೈಸೂರು, ಬೆಂಗಳೂರು, ಶಿವಮೊಗ್ಗ, ಭದ್ರಾವತಿ, ಚಾಮರಾಜನಗರ, ಕೊಳ್ಳೆಗಾಲ, ಚಿಕ್ಕಬಳ್ಳಾಪುರ, ಕೋಲಾರ ಮುಂತಾದ ಜಿಲ್ಲೆಗಳಿಂದ ಬಲಿಜ ಪ್ರಮುಖರು ಆಗಮಿಸಲಿದ್ದಾರೆ ಎಂದು ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ತಿಳಿಸಿದ್ದಾರೆ.
ಬಲಿಜ ಕಣ್ಮರೆ!: ಕೊಡಗು ಜಿಲ್ಲಾ ಮತದಾರರ ಪಟ್ಟಿಯಲ್ಲಿ ಕೊಡವ, ಗೌಡ, ಲಿಂಗಾಯಿತ, ಮಲೆಯಾಳಿ, ಎಸ್.ಸಿ., ಎಸ್.ಟಿ. ಮತದಾರರ ಒಟ್ಟು ಸಂಖ್ಯೆಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದು ಬಲಿಜ ಜನಾಂಗವನ್ನು ‘ಇತರ’ ಎಂದು ತೋರಿಸಲಾಗಿದ್ದು ನಿಜಕ್ಕೂ ವಿಷಾದನೀಯ. ಇದೀಗ ಕೊಡಗು ಬಲಿಜ ಗಣತಿ ಜಿಲ್ಲಾದ್ಯಂತ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಶೇ. 100 ಗಣತಿ ಪೂರ್ಣಗೊಂಡ ನಂತರ ಜಿಲ್ಲಾಧಿಕಾರಿಗಳಲ್ಲಿಗೆ ನಿಯೋಗ ತೆರಳಿ ಕೊಡಗು ಬಲಿಜ ಜನಾಂಗದ ಸಮಗ್ರ ಅಂಕಿ ಅಂಶ ನೀಡಲಾಗುವದು. ತಾಲೂಕುವಾರು ಬಲಿಜರ ಜನಸಂಖ್ಯೆಯನ್ನು ಮೂರು ತಾಲೂಕು ತಹಶೀಲ್ದಾರರಿಗೂ ನೀಡಿ ಮುಂದಿನ ದಿನಗಳಲ್ಲಿ ಬಲಿಜ ಸಮುದಾಯದ ಸ್ಪಷ್ಟ ಜನಸಂಖ್ಯೆ ದಾಖಲೀಕರಣಕ್ಕೆ ಒತ್ತಾಯಿಸ ಲಾಗುವದು ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಹಾತೂರು ಕ್ರೀಡೋತ್ಸವ ಸಂದರ್ಭ ವಸ್ತು ಪ್ರದರ್ಶನ ಮಳಿಗೆ, ಬೆಂಗಳೂರು ಲಯನ್ಸ್ ಕ್ಲಬ್ ತಂಡದ ಉಚಿತ ಮೊಬೈಲ್ ನೇತ್ರ ಚಿಕಿತ್ಸಾ ಶಿಬಿರ ಮತ್ತು ಕನ್ನಡಕ ವಿತರಣೆ, ಕೊಡಗು ಜಿಲ್ಲಾ ಪತ್ರಕರ್ತರ ತಂಡ ಮತ್ತು ಜಿಲ್ಲಾ ಬಲಿಜ ಸಮಾಜ ತಂಡಗಳ ನಡುವೆ ಪ್ರದರ್ಶನ ಕ್ರಿಕೆಟ್ ಪಂದ್ಯಾಟ, ಕಾಫಿ ಹುಡಿ ಹಾಗೂ ಡಿಕಾಕ್ಷನ್ನಿಂದ ತಯಾರಿಸಿದ ಚಿತ್ರಗಳ ಪ್ರದರ್ಶನ ಮಾರಾಟ ಮಳಿಗೆಯೂ ಇದ್ದು, ಕಲಾವಿದೆ ಹಿಮಬಿಂದು ಆಗಮಿಸಲಿದ್ದಾರೆ. ನಾಣ್ಯ ಮತ್ತು ನೋಟುಗಳ ಪ್ರದರ್ಶನ, ಚಿತ್ರ ಕಲಾವಿದ ವೀರಾಜಪೇಟೆಯ ಸತೀಶ್ ಅವರ ತೈಲ ವರ್ಣದ ಚಿತ್ರ ಪ್ರದರ್ಶನ, ಬೆಂಗಳೂರು ಬಲಿಜ ಬಿಂಬ ದ್ವಿಮಾಸಿಕ ಪತ್ರಿಕಾ ಮಳಿಗೆ, ಸಾಂಸ್ಕøತಿಕ ತಂಡಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ.
ಮಡಿಕೇರಿಯಲ್ಲಿ ಜರುಗಿದ ಗಣತಿ ಕಾರ್ಯದಲ್ಲಿ ಪ್ರಧಾನ ಕಾರ್ಯದರ್ಶಿ ಗೀತಾ ನಾಯ್ಡು, ಕ್ರೀಡೋತ್ಸವ ಗೌರವ ಕಾರ್ಯದರ್ಶಿ ಟಿ.ಆರ್. ಗಣೇಶ್, ಕೊಡಗು ಬಲಿಜ ಸಮಾಜ ಜಿಲ್ಲಾ ಉಪಾಧ್ಯಕ್ಷ ಟಿ.ವಿ. ಲೋಕೇಶ್, ಜಿಲ್ಲಾ ಕ್ರೀಡೋತ್ಸವ ಸಂಚಾಲಕ ಮದನ್ ಕುಮಾರ್, ನಿರ್ದೇಶಕಿ ಪದ್ಮಾ ಮಡಿಕೇರಿ, ಶಿಕ್ಷಕ ಸುಬ್ರಮಣಿ, ತಿತಿಮತಿಯ ಅಮರ್ ಮುಂತಾದವರು ಪಾಲ್ಗೊಂಡಿದ್ದರು.