ವೀರಾಜಪೇಟೆ, ಮೆ 8: ಶ್ರೀ ದಕ್ಷಿಣ ಮಾರಿಯಮ್ಮ ಕರಗ ಮಹೋತ್ಸವ ಹಲವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶನಿವಾರ ಮಧ್ಯರಾತ್ರಿ ತೆರೆ ಕಂಡಿತು.
ವೀರರಾಜೇಂದ್ರಪೇಟೆಯ ರಾಜಬೀದಿಯಾದ ತೆಲುಗರ ಬೀದಿಯಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿರುವ ಶ್ರೀ ದಕ್ಷಿಣ ಮಾರಿಯಮ್ಮ ದೇವಾಲಯದ ವಾರ್ಷಿಕ ಕರಗ ಮಹೋತ್ಸವ ಹಲವು ಧಾರ್ಮಿಕ ಪೂಜಾ ಕೈಂಕರ್ಯಗ ಳೊಂದಿಗೆ ಸಂಪನ್ನಗೊಂಡಿತು. ಮೇ ತಿಂಗಳ ಮೊದಲ ಮಂಗಳವಾರ ಆರಂಭವಾಗುವ ಕರಗ ಮಹೋತ್ಸವ ದೇವಿಯನ್ನು ಜಲದಲ್ಲಿ ಆವಾಹನ ಮಾಡಿ ದೇವರ ಸಂಕಲ್ಪದೊಂದಿಗೆ ಹೂವಿನ ಕರಗದಲ್ಲಿ ತಾಯಿಯ ಮುಖವಾಡ ಧರಿಸಿ ಕನಕ ಆಭರಣಗಳಿಂದ ಶೃಂಗರಿಸಿ ಮುಖ್ಯ ಬೀದಿಗಳಲ್ಲಿ ಭಕ್ತರಿಂದ ಪೂಜೆಗಳನ್ನು ಸ್ವೀಕರಿಸಿ ದೇವಾಲಯಕ್ಕೆ ಆಗಮಿಸುತ್ತದೆ. ಬುಧವಾರ ತಂಬಿಟ್ಟು ಆರತಿ, ಗುರುವಾರ ದಿನದಂದು ದೇವಿಗೆ ಮಹಾಪೂಜೆ ಶುಕ್ರವಾರ ದಿನದಂದು ಭಕ್ತ ಜನಕ್ಕೆ ಅನ್ನಸಂತರ್ಪಣೆ ನಡೆಯಿತು. ಶನಿವಾರ ಶ್ರೀ ದೇವಿಯ ಕರಗ ದೇವಾಲಯದಿಂದ ಹೊರಟು ಮುಖ್ಯ ರಸ್ತೆಯಿಂದ ಜೈನರ ಬೀದಿ, ದೇವಾಂಗ ಬೀದಿ, ತೆಲುಗರ ಬೀದಿ ದಖ್ಖನಿ ಮೊಹಲ್ಲಾ ಸಿದ್ದಾಪುರ ರಸ್ತೆಯಲ್ಲಿ ಸಂಚರಿಸಿ ರಾತ್ರಿ ದೇವಾಲಯಕ್ಕೆ ಆಗಮಿಸಿತು. ದೇವಾಲಯದಲ್ಲಿ ದೇವರ ದರ್ಶನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಶ್ರೀ ದೇವಿಗೆ ಮಹಾಪೂಜೆ ಸಲ್ಲಿಸಲಾಗಿ ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಪ್ರಸಾದ ವಿನಿಯೊಗ ನಡೆಯಿತು. ದೇವಾಲಯದ ಆಡಳಿತ ಮಂಡಳಿಯ ಟಿ.ಕೆ. ಶ್ರೀನಿವಾಸ್ ಶೆಟ್ಟಿ ಶಂಕರ್ ಶೆಟ್ಟಿ, ರವಿಕುಮಾರ್ ಲಕ್ಷ್ಮಣ ಶೆಟ್ಟಿ ಮತ್ತು ದೇವಲಾಯದ ಅರ್ಚಕ ಸಮೂಹ ಕುಲಭಾಂದವರು ನಗರ ನಿವಾಸಿಗಳು ಶ್ರೀ ದೇವಿಯ ಕರಗ ಮಹೋತ್ಸವಕ್ಕೆ ಸಾಕ್ಷಿಗಳಾದರು.