ಶನಿವಾರಸಂತೆ, ಮೇ 8: ಯಾವದೇ ದೇಶ, ರಾಜ್ಯ ಅಥವಾ ಜಿಲ್ಲೆಯೇ ಆಗಲಿ ಶಿಕ್ಷಣಕ್ಕೆ ಒತ್ತು ನೀಡಿದರೆ ಮಾತ್ರ ಆ ಪ್ರದೇಶ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಶಾಸಕ ಹಾಗೂ ಮಡಿಕೇರಿ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.
ಸಮೀಪದ ಕೊಡ್ಲಿಪೇಟೆಯ ಬಸ್ ನಿಲ್ದಾಣದಲ್ಲಿ ನಡೆದ ಬಿ.ಜೆ.ಪಿ. ಪರ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು. 5 ವರ್ಷದ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ದ್ದಾಗ ಕೊಡ್ಲಿಪೇಟೆಗೆ ಕಾವೇರಿ ನೀರಾವರಿ ನಿಗಮದಿಂದ ರೂ. 152 ಕೋಟಿಯ ಕೆಲಸ ಮಾಡಲಾಗಿದ್ದು, ಜನಾರ್ಧನ ಹಳ್ಳಿ ಸೇತುವೆ ಮತ್ತು ಕಿರಿಕೊಡ್ಲಿ - ಕೆಳಕೊಡ್ಲಿ ಸೇತುವೆಗೆ ರೂ. 30 ಕೋಟಿ ಅನುದಾನ ಕೊಡಿಸಿ ನೀರಿನ ಸಮಸ್ಯೆ ಬಗೆಹರಿಸಿದ್ದನ್ನು ಇಲ್ಲಿನ ಮತದಾರರು ಸ್ಮರಿಸಿ ಬಿ.ಜೆ.ಪಿ.ಗೆ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಶಿಕ್ಷಣಕ್ಕೆ ಒತ್ತು ನೀಡಿ ವೈದ್ಯಕೀಯ ಕಾಲೇಜು, ಸೈನಿಕ ಶಾಲೆ, ಸ್ನಾತಕೋತ್ತರ ಕೇಂದ್ರ ನಿರ್ಮಾಣಕ್ಕೆ ಅನುದಾನ, ರಸ್ತೆ ಅಭಿವೃದ್ಧಿ ಇತ್ಯಾದಿ ಕೆಲಸಗಳನ್ನು ಮಾಡಿದ್ದರೂ ವಿರೋಧ ಪಕ್ಷದವರು ಶಾಸಕರು ಏನೂ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗಳಿಗೆಲ್ಲ ತಾ. 12 ರ ಚುನಾವಣೆ ಉತ್ತರ ನೀಡಲಿದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.
ತಾ.ಪಂ. ಸದಸ್ಯ ಅಭಿಮನ್ಯು ಕುಮಾರ್ ಮಾತನಾಡಿ, ರಾಜ್ಯದಲ್ಲಿ ದುರಹಂಕಾರಿ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯನವರಾಗಿದ್ದು, ವಿಶ್ವ ಮಾನ್ಯತೆ ಪಡೆದಿರುವ ಪ್ರಧಾನಿ ಮೋದಿ ಬಗ್ಗೆ ಕೀಳು ಭಾವನೆಯಿಂದ ಮಾತನಾಡುತ್ತಾರೆ. ರೈತರ ಆತ್ಮಹತ್ಯೆ, ಹಿಂದೂ ಕಾರ್ಯಕರ್ತರ ಹತ್ಯೆ, ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆಗೆ ಕಾರಣಕರ್ತರಾಗಿದ್ದು, ಲೋಕಾ ಯುಕ್ತರಿಗೆ ರಕ್ಷಣೆ ಕೊಡಲಾಗದ ಸರಕಾರ ಅನಾಚಾರ, ಹಗರಣಗಳಿಂದ ಜನತೆಯ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ದೂರಿದರು.
ಪ್ರಮುಖರಾದ ಜಲಜಾ ಶೇಖರ್ ಮಾತನಾಡಿ, ಕೊಡಗು ಜಿಲ್ಲೆಯನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿದ ಏಕೈಕ ಶಾಸಕರ ಕೊಡುಗೆ ಹಾಗೂ ಸಾಧನೆಯೇ ಅವರ ಗೆಲುವಿಗೆ ಮೆಟ್ಟಿಲಾಗುತ್ತದೆ ಎಂದರು. ಮುಖಂಡರಾದ ತೇಜಸ್, ಭಗವಾನ್, ಜೆ.ಸಿ. ಶೇಖರ್, ಉಷಾ ತೇಜಸ್ವಿ, ಪ್ರಸಾದ್ ಸೋಮಯ್ಯ, ಶರತ್, ಬಾಬುರಾಜೇಂದ್ರ ಪ್ರಸಾದ್, ರೇಣುಕಪ್ಪ, ಕೆಂಚೇಶ್ವರ, ಕೆ.ಎಸ್. ನಾಗರಾಜ್ ಇತರರು ಉಪಸ್ಥಿತರಿದ್ದರು.
ಬಹಿರಂಗ ಸಭೆಗೆ ಮೊದಲು ಅಭ್ಯರ್ಥಿ ಅಪ್ಪಚ್ಚು ರಂಜನ್, ಬಿ.ಜೆ.ಪಿ. ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕೊಡ್ಲಿಪೇಟೆ ಪಟ್ಟಣದ ಮುಖ್ಯರಸ್ತೆಯಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.