ಮಡಿಕೇರಿ: ರಾಷ್ಟ್ರೀಯ ಮಟ್ಟದ ರಾಜಕೀಯ ನಾಯಕರು ಸಣ್ಣ ಜಿಲ್ಲೆಯಾದ ಕೊಡಗಿಗೆ ಬಂದಾಗ ಸಾಮಾನ್ಯವಾಗಿ ಮಾಧ್ಯಮಗಳಿಗೆ ಲಭ್ಯವಾಗುವದಾಗಲಿ, ಸಂದರ್ಶನ ಕೊಡುವದಾಗಲಿ ಅತಿ ವಿರಳ. ಇದಕ್ಕೆ ಕಾರಣವಿದೆ. ಒಂದೆಡೆ ಇಂತಹ ಚುನಾವಣಾ “ಬಿಸಿ”ಯ ಸಂದರ್ಭ ಅವರಿಗೆ ಅತ್ಯಲ್ಪ ಸಮಯಾವ ಕಾಶವಿರುತ್ತದೆ. ಇನ್ನೊಂದೆಡೆ, ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಮಾಧ್ಯಮ ಪ್ರಮುಖರು ಇಂತಹವರೊಂದಿಗೆ ಹಲವು ಬಾರಿ ಸಂದರ್ಶನಗಳನ್ನು ಮಾಡಿ ಪ್ರಸಾರಗೊಂಡಿರುತ್ತದೆ. ಇದರಿಂದ ಜಿಲ್ಲಾ ಮಟ್ಟಗಳಲ್ಲಿ ಅದರಲ್ಲು ಕೊಡಗಿನಂತಹ ಕೇವಲ ಎರಡು ವಿಧಾನಸಭಾ ಕ್ಷೇತ್ರಗಳಿರುವ ಜಿಲ್ಲೆಯಲ್ಲಿ ಮತ್ತೆ ಹಳೆಯ ಹೇಳಿಕೆಗಳನ್ನೇ ಪುನರುಚ್ಚರಿಸಲು ರಾಷ್ಟ್ರೀಯ ನಾಯಕರಿಗೆ ಅಷ್ಟೊಂದು ಆಸಕ್ತಿಯಿರುವದಿಲ್ಲ.
ಇಂದು ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಡಿಕೇರಿಗೆ ಬಂದಾಗ ಹೆಲಿಪ್ಯಾಡ್ನಲ್ಲಿ ಝೆಡ್+ ಭದ್ರತೆ ಎದ್ದು ಕಾಣುತ್ತಿತ್ತು. ಮಾಧ್ಯಮ ಮಿತ್ರರು ಅವರ ಬರವಿಗಾಗಿ ಒಂದು ಗಂಟೆ ಕಾಯುತ್ತಿದ್ದು, ಅವರ ಭದ್ರತಾ ಸಿಬ್ಬಂದಿ ಬಳಿ ಮಾಧ್ಯಮಗಳಿಗೆ ಕಿರು ಸಂದರ್ಶನದ ಕುರಿತು ಪ್ರಸ್ತಾಪಿಸಿದಾಗ ಅದು ಅಸಾಧ್ಯ ಎಂಬದು ಗೊತ್ತಾಯಿತು. ಅಮಿತ್ ಅವರು ಪೂರ್ವ ಸಿದ್ಧತೆಯಿಲ್ಲದೆ, ಪೂರ್ವ ನಿಯೋಜಿತ ಕಾರ್ಯಕ್ರಮವಿಲ್ಲದೆ ಯಾವದೇ ಸಂದರ್ಶನಗಳಲ್ಲಿಯಾಗಲೀ, ದಿಢೀರ್ ಕಾರ್ಯಕ್ರಮಗಳಲ್ಲಿಯಾಗಲೀ ಪಾಲ್ಗೊಳ್ಳುವದಿಲ್ಲ ಎಂಬದು ಖಾತರಿಯಾಯಿತು.
ಅವರು ಹೆಲಿಪ್ಯಾಡ್ನಲ್ಲಿ ಬಂದಿಳಿದಾಗ “ಒಂದು ನಿಮಿಷ ವಾದರೂ ಮಾಧ್ಯಮಗಳಿಗೆ ಸಂದರ್ಶನ ಕೊಡಿ” ಎಂದು “ಶಕ್ತಿ” ಪ್ರಶ್ನಿಸಿದಾಗ “ಅದು ಸಾಧ್ಯವಿಲ್ಲ” ಎಂದು ಅಮಿತ್ ಶಾ ನಗು ಮುಖದಿಂದಲೇ ಉತ್ತರಿಸಿದಾಗ ಅರ್ಥವಾಯಿತು ಅವರು ಮಾತನಾಡುವದಿಲ್ಲ ಎಂಬದು. ಅಂತೂ ಅವರು ಕೆಲ ಕಾಲ ವಿರಮಿಸಿಕೊಳ್ಳಲು ತೆರಳಿದ್ದ “ಕೂರ್ಗ್ ಇಂಟರ್ ನ್ಯಾಷನಲ್” ರೆಸಾರ್ಟ್ಗೆ ತೆರಳಿ ಮತ್ತೆ ಪ್ರಯತ್ನಿಸಲಾಯಿತು. ಸಂಸದ ಪ್ರತಾಪ್ ಸಿಂಹ ಅವರ ಸಹಕಾರದಿಂದ ಅವರು ವಿಶ್ರಾಂತಿ ಪಡೆಯುತ್ತಿದ್ದ ಕೋಣೆಗೆ “ಶಕ್ತಿ” ಪರವಾಗಿ ತೆರಳಲಾಯಿತು. ನಗು ಮುಖದಿಂದಲೇ ನಮ್ಮನ್ನು ಬರ ಮಾಡಿಕೊಂಡ ಅಮಿತ್ ಶಾ ಕಾಫಿ ಕುಡಿಯುವಂತೆ ತಿಳಿಸಿದರು. ಸುಸಂದರ್ಭ ಒದಗಿತಲ್ಲ ಎನ್ನುವ ಆಲೋಚನೆಯಲ್ಲಿ ಇಂದಿನ ರಾಜಕೀಯ ವಿದ್ಯಮಾನ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಮಾನನಷ್ಟ ನೋಟೀಸ್ ಕಳುಹಿಸಿರುವ ಕುರಿತು ಪ್ರಶ್ನಿಸಿದಾಗ ಅಮಿತ್ ಶಾ ಪ್ರತಿಕ್ರಿಯಿಸಲು ಇಚ್ಚಿಸಲಿಲ್ಲ . “ನಾನು ಈಗ ಬಂದಿರುವದು ಮಡಿಕೇರಿಯಲ್ಲಿ ರೋಡ್ ಶೋದಲ್ಲಿ ಪಾಲ್ಗೊಳ್ಳಲು ಮಾತ್ರ, ಪತ್ರಿಕಾ ಸಂದರ್ಶನ ಬೇಡ” ಎಂದು ಖಡಾಖಂಡಿತ ನುಡಿಯಾಡಿದರು. ಆದರೆ, ನಗು ಮುಖದಿಂದ ಸರಳತೆಯಿಂದಲೇ ಮಾತನಾಡಿದ ಅವರು ಗೌರವ ಪೂರ್ವಕವಾಗಿಯೇ ನಡೆದು ಕೊಂಡುದು ವಿಶೇಷವೆನಿಸಿತ್ತು. ಅಂತೂ ಕೊಡಗಿನ ಮಹತ್ವದ ಕಾವೇರಿ ನದಿ, ಕಾಫಿಯ ನಾಡು ಕುರಿತು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಇವರುಗಳ ಬಗ್ಗೆ “ಶಕ್ತಿÀ” ಪರವಾಗಿ ಅವರ ಗಮನಕ್ಕೆ ತರಲು ನಾವು ಮರೆಯಲಿಲ್ಲ. ಆಸಕ್ತಿಯಿಂದಲೇ ಅವರು ಕೇಳಿದುದು ಸಂತೃಪ್ತಿ ಉಂಟು ಮಾಡಿತು.