*ಗೋಣಿಕೊಪ್ಪಲು, ಮೇ 9: ಕೇರಳದಿಂದ ಕೊಡಗಿಗೆ ವ್ಯಾಪಾರಕ್ಕೆ ಬಂದವರು ಕೇರಳ ಹಾಗೂ ಕೊಡಗಿನಲ್ಲೂ ಮತದಾನದ ಹಕ್ಕನ್ನು ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಎರಡು ರಾಜ್ಯಗಳಲ್ಲಿ ಮತದಾನ ಮಾಡುವದು ಕಾನೂನು ಬಾಹಿರವಾಗಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವಾಗಿ ಮತದಾನ ಮಾಡಿದರೆ 6 ತಿಂಗಳುಗಳ ಕಾಲ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಈಗಾಗಲೇ ಕೇರಳದ ಮತದಾನದ ಪಟ್ಟಿಯನ್ನು ಪರಿಶೀಲನೆ ನಡೆಸಲಾಗಿದ್ದು, ಕೇರಳದಲ್ಲಿ ಮತದಾನ ಹಕ್ಕು ಪಡೆದವರು ಇಲ್ಲಿನ ಚುನಾವಣೆಯಲ್ಲಿ ಮತದಾನ ಮಾಡುವದು ಕಂಡುಬಂದರೆ ಕಾನೂನಿನ ಮೊರೆ ಹೋಗಲಾಗುವದು.
ಕೊಡಗಿನ ಹಾಗೂ ಕೇರಳದ ಮತದಾನದ ಪಟ್ಟಿಯನ್ನು ಈಗಾಗಲೇ ಪರಿಶೀಲನೆ ನಡೆಸಿ ಅಕ್ರಮ ಮತದಾನ ಹೊಂದಿದ್ದವರ ಬಗ್ಗೆ ಗುರುತು ಮಾಡಿಕೊಳ್ಳಲಾಗಿದೆ ಎಂದು ಬಿ.ಜೆ.ಪಿ. ಸ್ಥಾನೀಯ ಸಮಿತಿ ನಗರ ಅಧ್ಯಕ್ಷ ಗಾಂಧಿ ದೇವಯ್ಯ ಹಾಗೂ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಕೇರಳದಿಂದ ವ್ಯಾಪಾರಕ್ಕೆ ಬಂದ ಬಹಳಷ್ಟು ವ್ಯಾಪಾರಿಗಳು ಎರಡು ರಾಜ್ಯಗಳಲ್ಲೂ ಮತದಾನದ ಹಕ್ಕನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಚುನಾವಣೆಯ ಸಂದರ್ಭವೇ ಕೇರಳ ರಾಜ್ಯದಿಂದ ಕೊಡಗಿಗೆ ವಲಸೆ ಬರುತ್ತಿದ್ದಾರೆ. ಇವರು ಮತದಾನ ಮಾಡಲು ಜಿಲ್ಲೆಗೆ ಬರುತ್ತಿದ್ದು, ಇವರ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಪೆÇನ್ನಂಪೇಟೆ, ಗೋಣಿಕೊಪ್ಪಲು, ಸಿದ್ದಾಪುರ, ಕುಟ್ಟ, ವೀರಾಜಪೇಟೆ ಭಾಗಗಳಲ್ಲಿ ಚುನಾವಣೆ ಸಂದರ್ಭವೇ ಅತೀ ಹೆಚ್ಚು ಕೇರಳಿಗರು ಜಿಲ್ಲೆಯಲ್ಲಿ ಪ್ರತ್ಯಕ್ಷ ಆಗುತ್ತಿರುವದು ಅಕ್ರಮ ಮತದಾನ ಮಾಡುವ ಉದ್ದೇಶವೇ ಆಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವದು ಎಂದು ಈ ಸಂದರ್ಭ ಹೇಳಿದರು.
ಗೋಷ್ಠಿಯಲ್ಲಿ ಬಿ.ಜೆ.ಪಿ. ಪ್ರಮುಖ ವಿನೋದ್ ಮತ್ತು ಬಿ.ಜೆ.ಪಿ. ನಗರ ಪ್ರಮುಖ ಗಣೇಶ್ ಉಪಸ್ಥಿತರಿದ್ದರು.