ಮಡಿಕೇರಿ, ಮೇ 9: ಕೂರ್ಗ್ ಬೈರೇಸ್ ಹಾಗೂ ಜಮ್ಮಾ ವಿನಾಯಿತಿಯಂತೆ ಕೋವಿ ಪರವಾನಗಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಯಾಲದಾಳು ಕೆ. ಚೇತನ್ ಅವರ ಅರ್ಜಿಗೆ ಸಂಬಂಧಿಸಿದಂತೆ ತಮ್ಮನ್ನು ಪ್ರತಿವಾದಿಗಳಾಗಿ ಪರಿಗಣಿಸುವಂತೆ ಹಿರಿಯ ವಕೀಲರುಗಳ ಮೂಲಕ ವಕಾಲತ್ತು ವಹಿಸಲು ವಿವಿಧ ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ. ಖ್ಯಾತ ವಕೀಲ ಸಜನ್ ಪೂವಯ್ಯ ಅವರ ಮುಂದಾಳತ್ವದಲ್ಲಿ ವಕೀಲ ಐಚೆಟ್ಟಿರ ಲಾಲಿ ಮುದ್ದಪ್ಪ ವಕಾಲತ್ತು ಸಲ್ಲಿಸಲಿದ್ದಾರೆ.

ಅಖಿಲ ಕೊಡವ ಸಮಾಜ, ಅಮ್ಮತ್ತಿ ಕೊಡವ ಸಮಾಜ ಹಾಗೂ ಸಿದ್ದಾಪುರ ಸಣ್ಣ ಬೆಳೆಗಾರರ ಸಂಘ ವಕೀಲರ ಮೂಲಕ ವಕಾಲತ್ತು ಸಲ್ಲಿಸಿವೆ. ಇದರೊಂದಿಗೆ ಕೊಡವ - ಮುಸ್ಲಿಂ ಅಸೋಸಿಯೇಷನ್‍ನಿಂದಲೂ ಪ್ರತ್ಯೇಕವಾಗಿ ವಕಾಲತ್ತು ಸಲ್ಲಿಸಲಾಗಿದೆ. ಈ ಸಂಸ್ಥೆಯ ಪರ ವಕೀಲ ಇದಾಯತ್ ವಕಾಲತ್ತು ಸಲ್ಲಿಸಿರುವದಾಗಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರು ಮಾಹಿತಿ ನೀಡಿದ್ದಾರೆ.