ವೀರಾಜಪೇಟೆ, ಮೇ 9: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ. ಜನತಾದಳ ಪಕ್ಷಗಳ ನಡುವೆ ನೇರ ಸ್ಪರ್ಧೆ ಸಂಭವಿಸಿದ್ದು ಜಾತ್ಯತೀತವಾಗಿ ಸಮಾನತೆಯನ್ನು ಕಾಯ್ದುಕೊಂಡು ಬಡವರ ಕಣ್ಣೀರು ಒರೆಸುವ ಜನತಾದಳ ಅಧಿಕಾರದ ಗದ್ದುಗೆ ಏರಲಿದೆ; ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಜನತಾದಳದ ಜಾತ್ಯತೀತವಾಗಿ ಸಮಾಜ ಸೇವೆಯನ್ನು ಮುಡುಪಾಗಿಟ್ಟುಕೊಂಡು ಚುನಾವಣಾ ಸ್ಫರ್ಧೆಯಲ್ಲಿರುವ ಮೇರಿಯಂಡ ಸಂಕೇತ್ ಪೂವಯ್ಯ ಅವರ ಪರ ಅಲ್ಪಸಂಖ್ಯಾತರು ಸೇರಿದಂತೆ ಮತದಾರರು ಒಲವು ತೋರಿದ್ದಾರೆ ಎಂದು ಜನತಾದಳದ ಪಕ್ಷದ ರಾಜ್ಯ ಮುಖಂಡ ಬಿ.ಎಂ.ಫಾರೂಖ್ ಹೇಳಿದರು.

ಇಲ್ಲಿನ ಡಿಎಚ್‍ಎಸ್ ಎನ್‍ಕ್ಲೇವ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಫಾರೂಖ್ ಅವರು ಜನತಾದಳದ ಚುನಾವಣೆಯ ಪ್ರಣಾಳಿಕೆಯನ್ನು ಇತರ ಪಕ್ಷಗಳು ಅನುಕರಣೆ ಮಾಡುತ್ತಿದ್ದು ಜನತಾದಳ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರು ಸೇರಿದಂತೆ ರೈತರ, ಬೆಳೆಗಾರರ, ಸ್ತ್ರೀಶಕ್ತಿ ಗುಂಪುಗಳ ಸಾಲ ಮನ್ನಾ ಮಾಡಲಾಗುವದು; ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುವದು, ಕ್ಷೇತ್ರದ ಅಭ್ಯರ್ಥಿ ಹಾಗೂ ಸಮಾಜ ಸೇವಕ ಸಂಕೇತ್ ಪೂವಯ್ಯ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರು ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಜನತಾದಳಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ರಾಜ್ಯ ಹಾಗೂ ಕ್ಷೇತ್ರದ ಜನತೆ ರಾಜ್ಯದಲ್ಲಿ ಬದಲಾವಣೆಯನ್ನು ಬಯಸಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ ಎಂದರು.

ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಂಗೇರ ಪದ್ಮಿನಿ ಪೊನ್ನಪ್ಪ, ರಾಜ್ಯ ಸಮಿತಿಯ ಮನ್ಸೂರ್ ಆಲಿ, ಹೊಸೂರು ಜೋಯಪ್ಪ, ಪಾಣತ್ತಲೆ ವಿಶ್ವನಾಥ್, ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್, ಎಂ.ಎಂ. ಷರೀಫ್, ಎಸ್.ಎಚ್. ಮೈನುದ್ದೀನ್, ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಮತ್ತಿತರರು ಹಾಜರಿದ್ದರು.