ಸಿದ್ದಾಪುರ, ಮೇ 9: ಚುನಾವಣೆ ಬಹಿಷ್ಕಾರ ಹಾಕಿದ ಕರಡಿಗೋಡು ಗ್ರಾಮಕ್ಕೆ ವೀರಾಜಪೇಟೆ ತಹಶೀಲ್ದಾರ್ ಗೋವಿಂದ ರಾಜು ಭೇಟಿ ನೀಡಿ ಗ್ರಾಮಸ್ಥರಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದರು.ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆ ಕರಡಿಗೋಡು ಗ್ರಾಮದ ನಿವಾಸಿಗಳು ಸೇರಿ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಮಾಡುವ ನಿರ್ಧಾರ ತೆಗೆದು ಕೊಂಡಿದ್ದರಿಂದ ತಹಶೀಲ್ದಾರ್ ಸ್ಥಳಕ್ಕೆ ಖುದ್ದಾಗಿ ತೆರಳಿ ಚುನಾವಣೆಯಲ್ಲಿ ಮತದಾನ ಮಾಡುವಂತೆ ಮನವೊಲಿಸಿದರು.
ಇಲ್ಲಿ ಯಾವದೇ ಸೌಕರ್ಯಗಳು ಇಲ್ಲ. ರಸ್ತೆ, ಕುಡಿಯುವ ನೀರು ಮುಂತಾದ ಸಮಸ್ಯೆಗಳು ಇದ್ದು ಎಷ್ಟೇ ಮನವಿ ಮಾಡಿದರು ಸ್ಪಂದಿಸಲಿಲ್ಲ. ಈಗ ಏಕೆ ಬಂದಿದ್ದಿರಾ ಎಂದು ಖಾರಾವಾಗಿಯೇ ನಿವಾಸಿಗಳು ಪ್ರಶ್ನಿಸಿದರು. ಮೂಲಭೂತ ಸೌಕರ್ಯ ನೀಡುವವರೆಗೂ ಯಾವದೇ ಕಾರಣಕ್ಕೂ ಮತ ಚಲಾಯಿಸುವದಿಲ್ಲವೆಂದು ಪಟ್ಟು ಹಿಡಿದು ತಹಶೀಲ್ದಾರ್ ಅವರನ್ನು ವಾಪಾಸ್ ಕಳುಹಿಸಿದರು ಹಾಗೂ ಜಿಲ್ಲಾಧಿಕಾರಿ ಗ್ರಾಮಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡುವವರೆಗೂ ಯಾವದೇ ಚುನಾವಣೆಯಲ್ಲಿ ಮತದಾನ ಮಾಡುವದಿಲ್ಲ ಎಂದು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಸಿದ್ದಾಪುರ ಪಿ.ಡಿ.ಓ. ವಿಶ್ವನಾಥ್, ಗ್ರಾಮಸ್ಥರಾದ ಬೈಜು, ಕೃಷ್ಣ ಸೇರಿದಂತೆ ಗ್ರಾಮಸ್ಥರು ಇದ್ದರು.