ಮಡಿಕೇರಿ, ಮೇ 9: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪ್ರಮುಖ ರಾಜಕೀಯ ಪಕ್ಷಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರ ಅಂತಿಮ ಹಂತಕ್ಕೆ ತಲಪುತ್ತಿದ್ದು, ಈ ಸಂದರ್ಭ ಅಭ್ಯರ್ಥಿಗಳ ಅಭಿಪ್ರಾಯವನ್ನು ‘ಶಕ್ತಿ’ ಸಂಗ್ರಹಿಸಿದ್ದು, ವಿವರ ಇಂತಿದೆ.
ಜನರ ಒಲವು ಹೆಚ್ಚಿದೆ - ಕೆ.ಜಿ.ಬಿ.
ಕಳೆದ ಬಾರಿಯ ಚುನಾವಣೆಗಿಂತಲೂ ಈ ಬಾರಿ ಜನರ ಹೆಚ್ಚಿನ ಒಲವು ಬಿ.ಜೆ.ಪಿ. ಮೇಲಿದ್ದು, ತನ್ನ ಗೆಲವು ಖಚಿತ. ಕಾಂಗ್ರೆಸ್ ಅಭ್ಯರ್ಥಿ ತನಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಜೆ.ಡಿ.ಎಸ್. ಬಗ್ಗೆ ತನಗೆ ಆತಂಕವಿಲ್ಲ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಕೆ.ಜಿ. ಬೋಪಯ್ಯ ಹೇಳಿದ್ದಾರೆ. ವಕೀಲರೂ, ಬೆಳೆಗಾರರು ಆಗಿರುವ ಕೆ.ಜಿ.ಬಿ. ಮಡಿಕೇರಿಯಲ್ಲಿ ವಾಸವಾಗಿದ್ದು, ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.
ಯುವ ಪಡೆ ಇದೆ - ರಂಜನ್
ಬಿ.ಜೆ.ಪಿ. ಪರವಾಗಿ ಮೋದಿ ಅಲೆ ಹಾಗೂ ಯುವ ಪಡೆಯ ಬೆಂಬಲವಿದ್ದು, ಗೆಲವಿನ ವಿಶ್ವಾಸ ಹೆಚ್ಚಿದೆ. ಬಲಿಷ್ಟ ಪ್ರತಿಸ್ಪರ್ಧಿ ಎಂದು ಯಾರೂ ಇಲ್ಲ. ಬಹುಶಃ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆಯೊಡ್ಡಬಹುದು. ಆದರೆ ಜೆ.ಡಿ.ಎಸ್.ನಿಂದ ಏನೂ ಮಾಡಲಾಗದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದ್ದಾರೆ. ಬೆಳೆಗಾರರಾಗಿರುವ ರಂಜನ್ ಸೋಮವಾರಪೇಟೆ ವ್ಯಾಪ್ತಿಯ ಕುಂಬೂರಿನಲ್ಲಿ ವಾಸವಿದ್ದು, ಪತ್ನಿ, ಮೂವರು ಮಕ್ಕಳಿದ್ದಾರೆ.
ಜನತೆ ಕಾಂಗ್ರೆಸ್ ಪರವಿದ್ದಾರೆ - ಅರುಣ್
ಈ ಬಾರಿ ತನ್ನ ಕ್ಷೇತ್ರದಲ್ಲಿ ಜನರ ಒಲವು ಕಾಂಗ್ರೆಸ್ ಪರವಾಗಿದ್ದು, ಮತದಾರರು ನನ್ನೊಂದಿಗಿದ್ದಾರೆ. ತನ್ನ ಗೆಲವು ಖಂಡಿತ. ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಪೈಪೋಟಿ ನೀಡಲು ಸಮರ್ಥನಾಗಿದ್ದೇನೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ಸ್ಪಷ್ಟಪಡಿಸಿದ್ದಾರೆ. ಹಿರಿಯ ಕರಾಟೆ ಪಟು ಹಾಗೂ ಬೆಳೆಗಾರರೂ ಆಗಿರುವ ಅರುಣ್ ಮಾಚಯ್ಯ ಪೊನ್ನಂಪೇಟೆ ವ್ಯಾಪ್ತಿಯ ಕೋಣನಕಟ್ಟೆಯಲ್ಲಿ ವಾಸವಿದ್ದು, ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಜನ ಬದಲಾವಣೆ ಬಯಸಿದ್ದಾರೆ - ಚಂದ್ರಕಲಾ
ತನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಜನತೆ ಬದಲಾವಣೆ ಬಯಸಿದ್ದಾರೆ. ತನ್ನ ಗೆಲವಿಗೆ ಪೂರಕ ವಾತಾವರಣವಿದೆ. ಬಿ.ಜೆ.ಪಿ. ಅಭ್ಯರ್ಥಿಯೆ ತನಗೆ ಪ್ರತಿಸ್ಪರ್ಧಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ತಿಳಿಸಿದ್ದಾರೆ. ಮುಳ್ಳುಸೋಗೆ ಗುಮ್ಮನಕೊಲ್ಲಿಯ ನಿವಾಸಿಯಾಗಿರುವ ಚಂದ್ರಕಲಾಗೆ ಪತಿ, ಓರ್ವ ಪುತ್ರಿ ಇದ್ದಾರೆ.
ಮತದಾರ ಆಶೀರ್ವದಿಸಲಿದ್ದಾನೆ - ಸಂಕೇತ್
ತಾನು ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡುತ್ತಾ ಬಂದಿದ್ದೇನೆ. ತನ್ನ ನಿಸ್ವಾರ್ಥ ಸೇವೆಯನ್ನು ಗುರುತಿಸಿ ದೀನ ದಲಿತರ ಧ್ವನಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ತನಗೆ ಈ ಬಾರಿ ಕ್ಷೇತ್ರದ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂಬ ದೃಢ ವಿಶ್ವಾಸವಿದೆ. ತನ್ನ ಗೆಲುವು ಜನಸಾಮಾನ್ಯರ ಗೆಲುವಾಗಲಿದೆ ಎಂದು ವೀರಾಜಪೇಟೆ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಸಂಕೇತ್ ಪೂವಯ್ಯ ಹೇಳಿದ್ದಾರೆ. ವಕೀಲರು, ಬೆಳೆಗಾರರಾಗಿರುವ ಸಂಕೇತ್ ಪೂವಯ್ಯ ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯ ನಿವಾಸಿಯಾಗಿದ್ದು, ಪತ್ನಿ ಹಾಗೂ ಓರ್ವ ಪುತ್ರನಿದ್ದಾರೆ.
ಸವಾಲು ಎದುರಿಸಬಲ್ಲೆ - ಜೀವಿಜಯ
ತಾನೂ ಯಾರನ್ನೂ ಕೂಡ ಪ್ರತಿಸ್ಪರ್ಧಿ ಎಂದು ಹೇಳಲಾರೆ. ಜೆ.ಡಿ.ಎಸ್.ಗೆ ಪೂರಕವಾದ ವಾತಾವರಣ ತನ್ನ ಕ್ಷೇತ್ರದಲ್ಲಿದ್ದು, ಗೆಲವಿನ ವಿಚಾರದಲ್ಲಿ ಯಾವದೇ ಸವಾಲನ್ನಾದರೂ ಎದುರಿಸಬಲ್ಲೆ. ನನ್ನೊಂದಿಗೆ ಕ್ಷೇತ್ರದ ಜನರಿದ್ದಾರೆ. ಜೊತೆಗೆ ಸಮರ್ಥ ಕಾರ್ಯಕರ್ತರಿದ್ದಾರೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಬಿ.ಎ. ಜೀವಿಜಯ ಹೇಳಿದ್ದಾರೆ. ಬೆಳೆಗಾರರಾಗಿರುವ ಜೀವಿಜಯ ಸೋಮವಾರಪೇಟೆ ವ್ಯಾಪ್ತಿಯ ಬಿಳಿಗೇರಿಯಲ್ಲಿ ವಾಸವಿದ್ದು, ಪತ್ನಿ, ನಾಲ್ವರು ಮಕ್ಕಳಿದ್ದಾರೆ.
ಸ್ಪಂದನವಿದೆ - ತಿಮ್ಮಯ್ಯ
ಪ್ರಚಾರದ ವೇಳೆ ಜನರ ಉತ್ತಮ ಸ್ಪಂದನ ದೊರೆತಿದೆ. ಅಭಿವೃದ್ಧಿಗೆ ಜನತೆ ತನಗೆ ಮತ ನೀಡಲಿದ್ದಾರೆ ಎಂದು ಮಡಿಕೇರಿ ಪಕ್ಷೇತರ ಅಭ್ಯರ್ಥಿ ಬಿ.ಎಂ. ತಿಮ್ಮಯ್ಯ ಹೇಳಿದ್ದಾರೆ. ರೈತರಾಗಿರುವ ತಿಮ್ಮಯ್ಯ ಮುತ್ತಾರ್ಮುಡಿಯಲ್ಲಿ ಪತ್ನಿ, ಪುತ್ರಿಯೊಂದಿಗೆ ವಾಸವಿದ್ದಾರೆ.
ಬೆಂಬಲವಿದೆ - ಖಲೀಲ್
ಜನಪರ ಕೆಲಸ ಮಾಡುವ ಬಯಕೆ ಹೊಂದಿರುವ ತನಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಮಡಿಕೇರಿ ಪಕ್ಷೇತರ ಅಭ್ಯರ್ಥಿ ಖಲೀಲ್ ತಿಳಿಸಿದ್ದಾರೆ. ಟೈಲರ್ - ವ್ಯಾಪಾರಿಯಾಗಿರುವ ಖಲೀಲ್ ಮಡಿಕೇರಿ ಸಂಪಿಗೆಕಟ್ಟೆಯಲ್ಲಿ ಪತ್ನಿ, ಮೂವರು ಮಕ್ಕಳೊಂದಿಗೆ ವಾಸವಾಗಿದ್ದಾರೆ.
ಭರವಸೆಯಿದೆ - ಹನೀಫ್
ಜನರ ಒಳಿತಿಗಾಗಿ ಕೆಲಸ ಮಾಡುವ ಗುರಿ ಹೊಂದಿರುವ ತನಗೆ ಚುನಾವಣೆಯಲ್ಲಿ ಜನತೆ ಬೆಂಬಲ ನೀಡುವ ಭರವಸೆಯಿದೆ ಎಂದು ಮಡಿಕೇರಿ ಪಕ್ಷೇತರ ಅಭ್ಯರ್ಥಿ ಎಂ. ಮೊಹಮ್ಮದ್ ಹನೀಫ್ ಹೇಳಿದ್ದಾರೆ. ಹೊಟೇಲ್ ಉದ್ಯಮಿಯಾಗಿರುವ ಹನೀಫ್ ಪತ್ನಿ, ಇಬ್ಬರು ಮಕ್ಕಳೊಂದಿಗೆ ಮಡಿಕೇರಿ ಚಾಮುಂಡೇಶ್ವರಿ ನಗರದಲ್ಲಿ ವಾಸವಿದ್ದಾರೆ.
ನಂಬಿಕೆಯಿದೆ - ರಾಜು
ಜನರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಚುನಾವಣೆಗಿಳಿದಿರುವ ತನಗೆ ಜನ ಆಶೀರ್ವದಿಸಲಿದ್ದಾರೆ ಎಂಬ ನಂಬಿಕೆಯಿದೆ ಎಂದು ಮಡಿಕೇರಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ಕೆ.ಬಿ. ರಾಜು ತಿಳಿಸಿದ್ದಾರೆ. ವ್ಯಾಪಾರಿಯಾಗಿರುವ ರಾಜು - ಕುಶಾಲನಗರದಲ್ಲಿ ಪತ್ನಿ, ಮೂವರು ಮಕ್ಕಳೊಂದಿಗೆ ವಾಸವಿದ್ದಾರೆ.
ವಿಶ್ವಾಸವಿದೆ - ಯಡೂರಪ್ಪ
ರೈತಪರ ಕೆಲಸ ಮಾಡುವ ನಿಟ್ಟಿನಲ್ಲಿ ಜನತೆ ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಮಡಿಕೇರಿ ಪಕ್ಷೇತರ ಅಭ್ಯರ್ಥಿ ಯಡೂರಪ್ಪ ಹೇಳಿದ್ದಾರೆ. ರೈತರಾಗಿರುವ ಯಡೂರಪ್ಪ ಪಿರಿಯಾಪಟ್ಟಣದಲ್ಲಿ ವಾಸವಿದ್ದು, ಪತ್ನಿ, ಮೂವರು ಮಕ್ಕಳಿದ್ದಾರೆ.
ವಿಶ್ವಾಸ ಹೆಚ್ಚಾಗುತ್ತಿದೆ - ಬಸವರಾಜು
ಎಲ್ಲರನ್ನೂ ಸಮಾನವಾಗಿ ಅಭಿವೃದ್ಧಿಗೊಳಿಸಬೇಕೆಂದು ಗುರಿ ಹೊಂದಿರುವ ತಾನು ಈ ಬಾರಿ ಚುನಾವಣೆಯಲ್ಲಿ ಜಯಗಳಿಸಲಿದ್ದೇನೆ ಎಂಬ ವಿಶ್ವಾಸ ದಿನೇ ದಿನೇ ಹೆಚ್ಚಾಗುತ್ತಿದೆ. ತನಗೆ ಪ್ರತಿಸ್ಪರ್ಧಿಗಳಿಲ್ಲ. ಜನರ ಬೆಂಬಲ ನನಗಿದೆ ಎಂದು ವೀರಾಜಪೇಟೆಯ ಎಂ.ಇ.ಪಿ. ಪಾರ್ಟಿಯ ಅಭ್ಯರ್ಥಿ ಹೆಚ್.ಡಿ. ಬಸವರಾಜು ಹೇಳಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿ ವಾಸವಿರುವ ಬಸವರಾಜು ಅವರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ.
ಆತ್ಮವಿಶ್ವಾಸವಿದೆ - ರಶೀದಾ
ಪ್ರಚಾರದ ವೇಳೆ ಉತ್ತಮ ಸ್ಪಂದನವಿದೆ. ಗೆಲವಿನ ಆತ್ಮವಿಶ್ವಾಸವಿದೆ ಎಂದು ಎಂ.ಇ.ಪಿ. ಮಡಿಕೇರಿ ಅಭ್ಯರ್ಥಿ ರಶೀದಾ ಬೇಗಂ ಹೇಳಿದ್ದಾರೆ. ಪೀಠೋಪಕರಣ ವ್ಯಾಪಾರಿಯಾಗಿರುವ ರಶೀದಾ ಕುಶಾಲನಗರದ ಬಸವೇಶ್ವರ ಬಡಾವಣೆಯಲ್ಲಿ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಿದ್ದಾರೆ.
ಗೆಲ್ಲುವ ಅವಕಾಶವಿದೆ - ದೊಡ್ಡಯ್ಯ
ಜನಪರ ಕೆಲಸ ಮಾಡುವ ಆಸೆ ಹೊಂದಿರುವ ತನಗೆ ಈ ಬಾರಿ ಗೆಲ್ಲುವ ಅವಕಾಶವಿದೆ ಎಂದು ವೀರಾಜಪೇಟೆ ಪಕ್ಷೇತರ ಅಭ್ಯರ್ಥಿ ಹೆಚ್.ಡಿ. ದೊಡ್ಡಯ್ಯ ಹೇಳಿದ್ದಾರೆ. ರೈತರಾಗಿರುವ ದೊಡ್ಡಯ್ಯ ತಿತಿಮತಿ ಭದ್ರಗೋಳ ಗ್ರಾಮದಲ್ಲಿ ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾಸವಿದ್ದಾರೆ.
ಬೆಂಬಲ ಉತ್ತಮವಿದೆ - ನಂಜಪ್ಪ
ಜನರಿಗೆ ಒಳ್ಳೆಯ ಸೇವೆ ಮಾಡಬೇಕೆಂಬ ಬಯಕೆ ಹೊಂದಿರುವ ತನಗೆ ಜನರಿಂದ ಉತ್ತಮ ಬೆಂಬಲ ದೊರೆಯುತ್ತಿದೆ ಎಂದು ವೀರಾಜಪೇಟೆ ಪಕ್ಷೇತರ ಅಭ್ಯರ್ಥಿ ಎಂ.ಕೆ. ನಂಜಪ್ಪ ಹೇಳಿದ್ದಾರೆ. ಬೆಳೆಗಾರರಾದ ನಂಜಪ್ಪ ಬಿಳುಗುಂದ ನಿವಾಸಿಯಾಗಿದ್ದು, ಅವಿವಾಹಿತರಾಗಿದ್ದಾರೆ.
ಹಿಂದುತ್ವಕ್ಕಾಗಿ ಚುನಾವಣೆ - ಭಾರ್ಗವ
ತಾನು ಹಿಂದುತ್ವಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಈ ಬಾರಿ ಯುವ ಜನತೆ ಮತ ನೀಡುವ ವಿಶ್ವಾಸ ಹೊಂದಿರುವದಾಗಿ ಮಡಿಕೇರಿ ಕ್ಷೇತ್ರದ ಹಿಂದೂ ಮಹಾಸಭಾ ಅಭ್ಯರ್ಥಿ ಭಾರ್ಗವ ಹೇಳಿದ್ದಾರೆ. ಅವಿವಾಹಿತರಾಗಿರುವ ಇವರು ಮರಗೋಡುವಿನಲ್ಲಿ ವಾಸವಿದ್ದಾರೆ.
ಸ್ಪರ್ಧೆಯಿಂದ ಹಿಂದಕ್ಕೆ - ಕಿಶನ್ ಉತ್ತಪ್ಪ
ಸಮಾಜವಾದಿ ಪಕ್ಷದ ಜಿಲ್ಲಾ ಅಧ್ಯಕ್ಷ ಚೀಯಂಡಿ ಕಿಶನ್ ಉತ್ತಪ್ಪ ಪಕ್ಷದ ಪರವಾಗಿ ಮಡಿಕೇರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಎ ಫಾರ್ಮ್‍ಗೆ ಸಹಿ ಇಲ್ಲದ ಕಾರಣ ಪಕ್ಷೇತರ ಅಭ್ಯರ್ಥಿ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದ್ದರು. ಸಮಾಜವಾದಿ ಪಕ್ಷವು ಸಂಪೂರ್ಣ ಸಹಕಾರ ನೀಡುತ್ತೇವೆಂದು ಭರವಸೆ ನೀಡಿದ್ದರೂ, ಈವರೆಗೆ ಯಾವದೇ ಸಹಕಾರ ನೀಡದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಾಧ್ಯವಾಗದ ಕಾರಣ ಚುನಾವಣಾ ಕಣದಿಂದ ಹಿಂದೆ ಸರಿದಿರುವದಾಗಿ ಕಿಶನ್ ಉತ್ತಪ್ಪ ತಿಳಿಸಿದ್ದಾರೆ. - ಉಜ್ವಲ್ ರಂಜಿತ್