ಗೋಣಿಕೊಪ್ಪಲು, ಮೇ 9: ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮತದಾರರ ಭಾವನೆಗಳು ಜೆಡಿಎಸ್‍ಗೆ ಮತವಾಗಿ ಪರಿವರ್ತನೆ ಆಗಲಿದೆ. 20 ತಿಂಗಳ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಡಿರುವ ಗ್ರಾಮ ವಾತ್ಸವ್ಯ ಜನಪರ ಕೆಲಸಗಳು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‍ಗೆ ಅನುಕೂಲವಾಗಲಿದೆ ಕಾಫಿ ಬೆಳೆಗಾರರ ರೈತರ, ಸಂಪೂರ್ಣ ಕೃಷಿ ಸಾಲ ಮನ್ನಾದೊಂದಿಗೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ, ಪೊನ್ನಂಪೇಟೆ ತಾಲೂಕು ರಚನೆ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರದ ಭರವಸೆ ಈ ಬಾರಿ ನನ್ನ ಗೆಲುವಿಗೆ ಅನುಕೂಲವಾಗಲಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಮುಕ್ತ ನುಡಿಯಾಡಿದರು.

‘ಶಕ್ತಿ’ಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‍ನಿಂದ ಆರಿಸಿ ಬಂದಿದ್ದ ಜನಪ್ರತಿನಿಧಿಗಳು ಕ್ಷೇತ್ರಕ್ಕೆ ನಿರೀಕ್ಷೆಯಂತೆ ಕೆಲಸ ಮಾಡಲಿಲ್ಲ. ಕೇವಲ ಚುನಾವಣಾ ಕೇಂದ್ರೀಕೃತವಾಗಿ ಕೆಲಸ ಮಾಡಿದ್ದಾರೆ. ಇದರಿಂದ ಮತದಾರ ಬದಲಾವಣೆ ಬಯಸಿದ್ದು ಜೆಡಿಎಸ್‍ಗೆ ಈ ಬಾರಿ ನಿರೀಕ್ಷೇಗೂ ಮೀರಿ ಬೆಂಬಲ ದೊರೆತಿದೆ.ಕ್ಷೇತ್ರದ ಸಮಸ್ಯೆಗಳ ಮೂಟೆಯನ್ನು ಹೊತ್ತು ವಿಧಾನ ಸೌಧಕ್ಕೆ ತೆರಳುತ್ತೇನೆ. ಕ್ಷೇತ್ರದಲ್ಲಿ ಬದಲಾವಣೆ ತರಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಮತದಾರರು ನೀಡುವ ಮತಕ್ಕೆ ಗೌರವ ನೀಡುವದರೊಂದಿಗೆ ಕ್ಷೇತ್ರದಲ್ಲಿ ಗೆದ್ದರೂ, ಸೋತರು ಜನತೆಯೊಂದಿಗೆ ಸದಾ ಬೆರೆಯುತ್ತೇನೆ. ಸಮಸ್ಯೆಗಳು ಎದುರಾದಾಗ ಹೋರಾಟದ ಮೂಲಕ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಕ್ಷೇತ್ರದಲ್ಲಿ ಈಗಾಗಲೇ ಮೂರು ಸುತ್ತಿನ ಪ್ರಚಾರ ನಡೆಸಲಾಗಿದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಪ್ರಕರಣವನ್ನು ತಾರ್ಕಿಕ ಅಂತ್ಯದ ವರೆಗೆ ಹೋರಾಟ ನಡೆಸಲು ಜೆಡಿಎಸ್ ಮುಂಚೂಣಿ ವಹಿಸಿತ್ತು. ಮುಂದೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಸಂದೇಶ ರವಾನಿಸಿದ್ದೇವೆ.

(ಮೊದಲ ಪುಟದಿಂದ) ಗ್ರಾಮೀಣ ಜನರ ಕಷ್ಟಗಳನ್ನು ಸರಿಪಡಿಸಲು ಪೊನ್ನಂಪೇಟೆಯನ್ನು ಹೊಸ ತಾಲೂಕಾಗಿ ರಚನೆ ಮಾಡಲು ಈಗಾಗಲೇ ರಾಜ್ಯಾಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ತಾಲೂಕು ರಚನೆಯ ಬಗ್ಗೆ ಕ್ರಮ ಕೈಗೊಳ್ಳಲಾಗುವದು.

ಆನೆ ಮಾನವ ಸಂಘರ್ಷದಲ್ಲಿ ಆದ ಸಾವು ನೋವುಗಳ ಬಗ್ಗೆ ಅರಿತ್ತಿದ್ದೇನೆ. ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾಡಿನ ಹಿರಿಯರ, ಸಂಘ ಸಂಸ್ಥೆಯ ಪ್ರತಿನಿಧಿಗಳ ಸಲಹೆ ಪಡೆದು ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕಲ್ಪಿಸುವ ಪ್ರಯತ್ನಕ್ಕೆ ಆದ್ಯತೆ ನೀಡುತ್ತೇನೆ.

ಅಧಿಕಾರ ಇಲ್ಲದಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ನೊಂದವರ ಮನೆ ಬಾಗಿಲಿಗೆ ತಲಪಿದ್ದೇನೆ. ಮುಂದೆ ಅಧಿಕಾರಕ್ಕೆ ಸಿಕ್ಕಿದ ದಿನದಲ್ಲಿ ವಿಧಾನ ಸೌಧದಲ್ಲಿ ನಡೆಯುವ ಅದಿವೇಶನ ಹೊರತು ಪಡಿಸಿದ್ದಲ್ಲಿ ಇನ್ನುಳಿದ ದಿನಗಳನ್ನು ಕುಗ್ರಾಮಗಳಿಗೆ ತೆರಳಿ ಅಲ್ಲಿಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವದರಿಂದ ಸಮಸ್ಯೆಗಳ ಪರಿಹಾರಕ್ಕೆ ನಾವು ಯಾರನ್ನು ಕೇಳಬೇಕಾಗಿಲ್ಲ. ನಮ್ಮ ವರಿಷ್ಠರಾದ ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ. ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತ್ರಿಕೋಣ ಸ್ಪರ್ಧೆ ಕಂಡು ಬಂದಿದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷವನ್ನು ಕ್ಷೇತ್ರದಲ್ಲಿ ಇಲ್ಲಿಯ ತನಕ ತಾತ್ಸಾರದ ಮನೋಭಾವದಿಂದ ನೋಡುತ್ತಿದ್ದರು ಇದೀಗ ಇವರಿಗೆ ಪ್ರಾದೇಶಿಕ ಪಕ್ಷದ ಶಕ್ತಿ ಏನೆಂಬವದು ಅರಿವಾಗಿದೆ. ಪ್ರಜ್ಞಾವಂತ ಮತದಾರರು ಜಾತಿ,ಧರ್ಮದ ವಿಚಾರದಲ್ಲಿ ಇಲ್ಲಿಯ ತನಕ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ ಉದಾಹರಣೆಗಳಿಲ್ಲ. ಕ್ಷೇತ್ರದಲ್ಲಿ ಉತ್ತಮ ಕೆಲಸಗಾರನಿಗೆ ಮತದಾರ ಆಶೀರ್ವಾದ ಮಾಡಲಿದ್ದಾನೆ ಎಂದು ಸಂಕೇತ್ ಪೂವಯ್ಯ ಮುಕ್ತ ಅಭಿಪ್ರಾಯ ಹಂಚಿಕೊಂಡರು.

- ಹೆಚ್.ಕೆ. ಜಗದೀಶ್