ಮಡಿಕೇರಿ, ಮೇ 9: ರಾಜ್ಯದಲ್ಲಿ ಕಳೆದ 5 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವಿದ್ದರು ಕೊಡಗಿನ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಯಾವುದೇ ಸ್ಪಂದನ ದೊರೆತಿಲ್ಲವೆಂದು ಆರೋಪಿಸಿರುವ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಸಾಕ್ ಖಾನ್, ಈ ಬಾರಿ ಅಲ್ಪಸಂಖ್ಯಾತರು ಜೆಡಿಎಸ್ ಪರ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಲ್ಲಿ ಗೊಂದಲ ಸೃಷ್ಟಿಸುವ ಯತ್ನ ಮಾಡುತ್ತಿದ್ದು, ಆಧಾರ ರಹಿತ ಹೇಳಿಕೆಗಳಿಗೆ ಅಲ್ಪಸಂಖ್ಯಾತರು ಕಿವಿಗೊಡಬಾರದೆಂದು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷ ಜಮಾಅತ್ ಒಕ್ಕೂಟವೊಂದನ್ನು ಸೃಷ್ಟಿಸಿ ಎಲ್ಲಾ ಮುಸಲ್ಮಾನರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದರೆ ಗೆಲುವು ನಿಶ್ಚಿತವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‍ಗೆ ಗೆಲ್ಲಲೆಬೇಕೆಂದಿದ್ದರೆ ಪ್ರತಿ ಧರ್ಮದ ಒಕ್ಕೂಟ ರಚನೆ ಮಾಡಿ ಗೆಲ್ಲಿಸಬಹುದಾಗಿತ್ತೆಂದು ಇಸಾಕ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು. ವಕೀಲ ಕುಂಞÂ ಅಬ್ದುಲ್ಲ ಅವರು ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಇವರು ನೈಜ ಪ್ರಗತಿಪರರೇ ಆಗಿದ್ದರೆ ಸೋಲುವ ಅಭ್ಯರ್ಥಿಯ ಪರ ಯಾಕೆ ನಿಲ್ಲುತ್ತಿದ್ದರೆಂದು ಪ್ರಶ್ನಿಸಿದರು. ಪ್ರಗತಿಪರರು ಬಿಜೆಪಿಯ ಬಿ ಟೀಂ ಎನ್ನುವ ಸಂಶಯ ಇದೀಗ ವ್ಯಕ್ತವಾಗುತ್ತಿದ್ದು, ಅಲ್ಪಸಂಖ್ಯಾತರ ಮತ ವಿಭಜನೆಗೆ ಅವಕಾಶ ನೀಡಬಾರದೆಂದು ಇಸಾಕ್ ಖಾನ್ ಮನವಿ ಮಾಡಿದರು.
ರಾಜ್ಯ ಕಾರ್ಯದರ್ಶಿ ಮನ್ಸೂರ್ ಆಲಿ ಮಾತನಾಡಿ, ಬಿಜೆಪಿಯ ಫಂಡಿಂಗ್ ನೆರವಿನಿಂದ ಕಾಂಗ್ರೆಸ್ ಚುನಾವಣೆಯನ್ನು ಎದುರಿಸುತ್ತಿದೆಯೆಂದು ಆರೋಪಿಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಬಗ್ಗೆ ಸಂಶಯಗಳು ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಇಬ್ರಾಹಿಂ, ಜಕ್ರಿಯಾ, ರಷೀದ್ ಹಾಗೂ ಉಸ್ಮಾನ್ ಉಪಸ್ಥಿತರಿದ್ದರು.