ಸೋಮವಾರಪೇಟೆ, ಮೇ 9: ಪಟ್ಟಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿರುವ ಘಟನೆ ತಾ. 6 ರ ರಾತ್ರಿ ನಡೆದಿದ್ದು, ಕೃತ್ಯ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಕೃಷ್ಣ ಮೆಡಿಕಲ್ ಮುಂಭಾಗದ ಬೇಕರಿಯ ಎದುರು ತಾ. 6 ರಂದು ರಾತ್ರಿ 10 ಗಂಟೆಗೆ ನಿಲುಗಡೆಯಾಗಿದ್ದ ಹೀರೋ ಹೋಂಡ ಸ್ಪ್ಲೆಂಡರ್ (ಕೆ.ಎ. 21 ಕೆ. 6467) ಬೈಕ್‍ನ್ನು ಕಳ್ಳತನ ಮಾಡಿದ್ದು, ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರಳ್ಳಿ ಗ್ರಾಮದ ಎನ್.ಪಿ. ದರ್ಶನ್ ಅವರು ತಮ್ಮ ಬೈಕ್‍ನಲ್ಲಿ ಸಹೋದರನನ್ನು ಕರೆತಂದು ಇಲ್ಲಿನ ಕ್ಲಬ್ ರಸ್ತೆಯಲ್ಲಿ ಬೈಕ್‍ನ್ನು ನಿಲ್ಲಿಸಿ ಸರ್ಕಾರಿ ಬಸ್ ನಿಲ್ದಾಣಕ್ಕೆ ತೆರಳಿ ವಾಪಸ್ ಆಗುವ ಸಂದರ್ಭ ಬೈಕ್ ಕಳ್ಳತನವಾಗಿರುವದು ಬೆಳಕಿಗೆ ಬಂದಿದೆ. ರಾತ್ರಿ 10.20ಕ್ಕೆ ಆಗಮಿಸುವ ವ್ಯಕ್ತಿ ಬೈಕ್‍ನಲ್ಲಿ ಕುಳಿತು ಕ್ಲಬ್ ರಸ್ತೆಯ ಮೂಲಕ ತೆರಳಿರುವದು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್ ಕಳ್ಳತನ ನಡೆದಿರುವ ಬಗ್ಗೆ ದರ್ಶನ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಳ್ಳನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.