ಮಡಿಕೇರಿ, ಮೇ 9: ಚುನಾವಣೆಗೆ ಇನ್ನು ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿವೆ. ಮೂರನೇ ದಿನದಲ್ಲಿ ಚುನಾವಣೆ ನಡೆಯಲಿದೆ. ಎಲ್ಲಾ ಕಡೆಗಳಲ್ಲೂ ಅಭ್ಯರ್ಥಿಗಳಿಂದ ಬಿರುಸಿನ ಮತ ಪ್ರಚಾರ ಕಾರ್ಯದೊಂದಿಗೆ ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನ ಸಾಗುತ್ತಿದ್ದರೆ, ಇತ್ತ ಆಡಳಿತ ವರ್ಗದಿಂದಲೂ ಪ್ರತಿಯೋರ್ವರೂ ಮತ ಚಲಾಯಿಸುವಂತೆ, ಮತದಾನದ ಹಕ್ಕಿನಿಂದ ವಂಚಿತ ರಾಗದಂತೆ ಜಾಗೃತಿ ಮೂಡಿಸುವ ಸಲುವಾಗಿ ಎಲ್ಲಾ ರೀತಿಯ ಪ್ರಯತ್ನಗಳಾಗುತ್ತಿವೆ.

ಸಭೆ, ಜಾಗೃತಿ ಕಾರ್ಯ ಕ್ರಮಗಳೊಂದಿಗೆ ಜಾಹೀರಾತುಗಳ ಮೂಲಕವೂ ಜಾಗೃತಿ ಮೂಡಿಸ ಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆಯಿಂದ ಕಸ ಸಂಗ್ರಹಿಸುವ

(ಮೊದಲ ಪುಟದಿಂದ) ವಾಹನಗಳಲ್ಲಿ ಇದುವರೆಗೆ ‘ಕಸ., ಕಸ., ತನ್ನಿ ಕಸ.., ಕಸ...’ ಎಂಬ ಹಾಡು ಎಲ್ಲರನ್ನೂ ಬಡಿದೆಬ್ಬಿಸುತ್ತಿತ್ತು. ಇದೀಗ ‘ಮಾಡಿ..., ಮಾಡಿ... ಮತದಾನ, ಇರಲಿ ದೇಶದ ಮೇಲೆ ಅಭಿಮಾನ...’ ಎಂಬ ಜಾಗೃತಿ ಗೀತೆ ಮೊಳಗುತ್ತಿದೆ. ಇದರೊಂದಿಗೆ ಅಂಚೆ ಕಚೇರಿ ಮೂಲಕ ಬಟವಾಡೆ ಯಾಗುವ ಪತ್ರಗಳ ಲಕೋಟೆ ಮೇಲೂ ಮತದಾನದ ದಿನಾಂಕ ಮುದ್ರಿಸಿ ಎಚ್ಚರಿಸಲಾಗುತ್ತಿದೆ. ಇನ್ನು ಪ್ರತಿನಿತ್ಯ ಮನೆಗೆ ಬರುವ ಹಾಲಿನ ಪ್ಯಾಕೆಟ್‍ಗಳಲ್ಲೂ ಚುನಾವಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ ಮಟ್ಟಿಗೆ ಶೇ.100ರಷ್ಟು ಪ್ರಗತಿ ಸಾಧಿಸಬೇಕೆಂಬ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಪ್ರಯತ್ನದಲ್ಲಿದೆ. ಇನ್ನು ಮತದಾರ ಜಾಗೃತನಾಗಬೇಕಷ್ಟೇ. ಮತದಾನ ನಮ್ಮ ಹಕ್ಕು ಎಂದು ತಿಳಿದು ಪ್ರಜ್ಞಾವಂತರಾಗಿ ಅರ್ಹ ಅಭ್ಯರ್ಥಿಗಳಿಗೆ ಮತ ಚಲಾಯಿಸಿದಲ್ಲಿ ಭವ್ಯ ಭಾರತ ನಿರ್ಮಾಣ ಸಾಧ್ಯ.

-ಸಂತೋಷ್.