ಸೋಮವಾರಪೇಟೆ, ಮೇ 9: ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಚುನಾವಣಾ ಪ್ರಚಾರ ಕಾರ್ಯವನ್ನು ಬಿರುಸುಗೊಳಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ ಪಕ್ಷದ ಹಿರಿಯ-ಕಿರಿಯ ಮುಖಂಡರು, ಕಾರ್ಯಕರ್ತರು ಇದೀಗ ಮನೆಮನೆಗೆ ಎಡತಾಕುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.
ಬಿಜೆಪಿ ಪಕ್ಷದ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್, ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ, ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಅವರುಗಳ ಪರವಾಗಿ ಪಕ್ಷದ ಕಾರ್ಯಕರ್ತರು ಮತದಾರರ ಮನವೊಲಿಸುವ ಯತ್ನ ನಡೆಸುತ್ತಿದ್ದಾರೆ.
ಬಿಜೆಪಿ ಮಹಿಳಾ ಘಟಕದ ಪ್ರಮುಖರು ತಮ್ಮ ಅಂಗೈ ಮೇಲೆ ಪಕ್ಷದ ಕಮಲ ಗುರುತನ್ನು ಅಚ್ಚು ಹಾಕಿಸಿಕೊಂಡು ಪಕ್ಷ ಪ್ರೇಮ ಮೆರೆಯುತ್ತಿದ್ದಾರೆ. ಅಭ್ಯರ್ಥಿಗಳಂತೂ ಪಾದರಸದ ಓಡಾಟದಲ್ಲಿ ತೊಡಗಿಕೊಂಡಿದ್ದು, ಮತದಾರರನ್ನು ಸೆಳೆಯುವ ಯತ್ನ ರಾತ್ರಿಯೂ ನಡೆಯುತ್ತಲೇ ಇದೆ.
ಬಿಜೆಪಿಯ ಅಪ್ಪಚ್ಚು ರಂಜನ್ ಅವರ ಪುತ್ರರಾದ ಉಜ್ವಲ್ ಕಾರ್ಯಪ್ಪ, ವಿಕ್ರಂ ಪೂವಯ್ಯ, ಜೀವಿಜಯ ಅವರ ಪರ ಪುತ್ರ ಸಂಜಯ್ ಜೀವಿಜಯ, ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರ ಪರ ಸಹೋದರ ಜೈಜಗದೀಶ್ ಅವರುಗಳು ಬಿರುಸಿನ ಪ್ರಚಾರ ಕೈಗೊಂಡು ಕ್ಷೇತ್ರ ಸಂಚಾರ ನಡೆಸುತ್ತಿದ್ದಾರೆ.