ಮಡಿಕೇರಿ, ಮೇ 10: ಚುನಾವಣಾ ಪ್ರಚಾರ ಸಂದರ್ಭ ಅಲ್ಲಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ದೊರಕುತ್ತಿರುವ ಉತ್ಸಾಹಪೂರ್ವಕ ಬೆಂಬಲದಿಂದ ತನಗೆ ಗೆಲುವಿನ ಸ್ಫೂರ್ತಿ ಲಭಿಸಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ನುಡಿದರು.
ಇಂದು ನಗರದ ಎ.ವಿ. ಶಾಲೆ ಬಳಿಯಿಂದ ಮುಖ್ಯರಸ್ತೆಗಳಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದ ಅವರು, ಬಳಿಕ ಹೊಸ ಬಡಾವಣೆಯ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಆ ಮುನ್ನ ಎ.ವಿ. ಶಾಲೆ ಬಳಿಯಿಂದ ಮಾರುಕಟ್ಟೆ, ಮಹದೇವಪೇಟೆ, ಖಾಸಗಿ ಬಸ್ ನಿಲ್ದಾಣ ಮುಖಾಂತರ ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ಪಕ್ಷದ ಕಚೇರಿ ತನಕ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಕೇರಳದ ಶಾಸಕ ವರ್ಕಲ್ಲಕಹಾರ್, ಸಿನಿಮಾ ನಟ ಜೈ ಜಗದೀಶ್, ಪಕ್ಷದ ಪ್ರಮುಖ ಚಂದ್ರಮೌಳಿ ಮೊದಲಾದವರು ಅಭ್ಯರ್ಥಿಯೊಂದಿಗೆ ತೆರೆದ ವಾಹನದಲ್ಲಿ ಕಾಣಿಸಿಕೊಂಡರು.
ಕಾಂಗ್ರೆಸ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಜೈಕಾರ ಮೊಳಗಿಸುತ್ತಾ, ಮೆರವಣಿಗೆ ಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ವೆಂಕಪ್ಪಗೌಡ, ಕೊಲ್ಯದ ಗಿರೀಶ್, ವಿ.ಪಿ. ಸುರೇಶ್, ಅಬ್ದುಲ್ರಜಾಕ್, ಸುಜು ತಿಮ್ಮಯ್ಯ, ಅಪ್ರು ರವೀಂದ್ರ, ಕೆ.ಎ. ಯಾಕೂಬ್, ನವೀನ್ ಅಂಬೆಕಲ್, ಮುನೀರ್ ಅಹ್ಮದ್, ತೆನ್ನೀರ ಮೈನಾ, ಉದಯಕುಮಾರ್, ಯತೀಶ್, ಸುರಯ್ಯಾ ಅಬ್ರಾರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಸಭೆಯಲ್ಲಿ ಟಿ.ಪಿ. ರಮೇಶ್ ಹಾಗೂ ಇನ್ನಿತರ ಪ್ರಮುಖರು ಚಂದ್ರಕಲಾ ಗೆಲುವಿಗೆ ಸಲಹೆ ನೀಡಿದರು.