ಮಡಿಕೇರಿ, ಮೇ 10: ಕೊಡಗು ಜಿಲ್ಲೆಯಾದ್ಯಂತ ಇಂದು ಮುಂಜಾನೆ 6 ಗಂಟೆಯಿಂದ ಎಲ್ಲಾ ಮದ್ಯದಂಗಡಿ, ಬಾರ್ಗಳು, ಮದ್ಯಮಾರಾಟ ಗೋದಾಮುಗಳು, ಕ್ಲಬ್ಗಳು ಬೀಗ ಜಡಿಯಲ್ಪಟ್ಟಿದ್ದು, ಚುನಾವಣೆ ಸಂಬಂಧ ಇಂದು ಸಂಜೆ 6 ಗಂಟೆಯಿಂದ ತಾ. 13 ರಂದು ಸಂಜೆ 6 ಗಂಟೆಯ ತನಕ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.ಜಿಲ್ಲೆಯಲ್ಲಿ ಪಾರದರ್ಶಕ, ಸುಗಮ ಹಾಗೂ ಶಾಂತಿಯುತ ಮತದಾನ ಸಲುವಾಗಿ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 126 ಅಡಿಯಲ್ಲಿ, ದಂಡ ಸಂಹಿತೆ ಪ್ರಕ್ರಿಯೆ 1973ರ ಸೆಕ್ಷನ್ 144 ಮತ್ತು ದಂಡ ಸಂಹಿತೆ ತಿದ್ದುಪಡಿ 2005ರ ಸೆಕ್ಷನ್ 144(ಎ) ಅಡಿಯಲ್ಲಿ ತಾ. 10ರ ಸಂಜೆ 6 ರಿಂದ ತಾ. 13 ಸಂಜೆ 6 ಗಂಟೆಯ ತನಕ ಕೊಡಗಿಗೆ ಅನ್ವಯಿಸುವಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿ, ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಪರ ಮತಯಾಚನೆ ನಡೆಸುವದನ್ನು ಹೊರತುಪಡಿಸಿ, ಉಳಿದಂತೆ ಯಾವದೇ ರಾಜಕೀಯ ಸಭೆ-ಸಮಾರಂಭ ನಡೆಸುವದು, ಪಟಾಕಿ ಸಿಡಿಸುವದು, ಮೆರವಣಿಗೆ ಇನ್ನಿತರೆ ಕಾರ್ಯಕ್ರಮ ನಡೆಸುವದು, ಛಾಯಾಗ್ರಹಣ, ದೂರದರ್ಶನ ಅಥವಾ ಇತರ ರೀತಿಯ ಉಪಕರಣಗಳ ಮೂಲಕ ಯಾವದೇ ಚುನಾವಣಾ ವಿಷಯವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವದನ್ನು ನಿಷೇಧಿಸಿದೆ. ಮಾರಕ ಆಯುಧಗಳನ್ನು ಹೊಂದಿರುವದು ಅಥವಾ ಹಿಡಿದು ಓಡಾಡುವದು, ಐದಕ್ಕಿಂತ ಹೆಚ್ಚಿಗೆ ಜನ ಗುಂಪು ಸೇರುವದು, ಸಂಚರಿಸುವದು ಮುಂತಾದವಗಳನ್ನು ಸಂಪೂರ್ಣ ವಾಗಿ ನಿಷೇಧಿಸಿದೆ.
(ಮೊದಲ ಪುಟದಿಂದ) ನಿರ್ಬಂಧ
ಎಲ್ಲಾ ಮತಗಟ್ಟೆಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿವರ್ಧಕ ಬಳಕೆ ಮುಂತಾದವುಗಳನ್ನು ನಿಷೇಧಿಸಿದೆ ಹಾಗೂ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಪಕ್ಷದ ಪ್ರಚಾರ, ಮತದಾರರ ಓಲೈಕೆ ಮುಂತಾದವ ಗಳನ್ನು ಮಾಡುವಂತಿಲ್ಲ. ಮತದಾನದ ದಿನವಾದ ತಾ. 12 ರಂದು ಜಿಲ್ಲೆಯಾದ್ಯಂತ ಎಲ್ಲಾ ಸಂತೆ-ಜಾತ್ರೆಗಳನ್ನು ನಿಷೇಧಿಸಿದೆ. ಈ ಆದೇಶವು ಸರ್ಕಾರಿ ಕರ್ತವ್ಯದ ನಿಮಿತ್ತ, ಬ್ಯಾಂಕ್, ಎ.ಟಿ.ಎಂ. ಭದ್ರತಾ ಸಿಬ್ಬಂದಿಗಳು ಹಾಗೂ ಮತಗಟ್ಟೆಗಳ ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳು ಆಯುಧ, ಬಂದೂಕುಗಳನ್ನು ಹೊಂದಿರುವದಕ್ಕೆ ಅಥವಾ ಬಳಸುವದಕ್ಕೆ ಅನ್ವಯಿಸುವದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವೇತನ ಸಹಿತ ರಜೆ
ಎಲ್ಲಾ ಮತದಾರರು ಅವರ ಹಕ್ಕಿನಂತೆ ಮುಕ್ತವಾಗಿ ಮತದಾನ ಮಾಡಬೇಕೆಂಬ ಸದುದ್ದೇಶದಿಂದ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 135(ಬಿ)(1)ರಂತೆ ಎಲ್ಲಾ ಖಾಸಗಿ ರಂಗದ ಉದ್ದಿಮೆದಾರರು, ಪ್ಲಾಂಟೇಶನ್ ಮಾಲೀಕರು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಮಾಲೀಕರು, ಕಾರ್ಖಾನೆ ಮಾಲೀಕರು, ಹೊಟೇಲ್, ರೆಸ್ಟೋರೆಂಟ್ ಮತ್ತು ರೆಸಾರ್ಟ್ ಮಾಲೀಕರು ಹಾಗೂ ಇನ್ನಿತರೆ ಸಂಸ್ಥೆಗಳ ಮಾಲೀಕರು/ ಉದ್ಯೋಗದಾತರು ಅವರ ಬಳಿ ಕೆಲಸ ಮಾಡುತ್ತಿರುವ ಕಾರ್ಮಿಕ ಮತದಾರರಿಗೆ ತಾ. 12 ರಂದು ವೇತನ ಸಹಿತ ರಜೆ ನೀಡಲು ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 135(ಬಿ)(1)ರಲ್ಲಿನ ನಿರ್ದೇಶನದ ಉಲ್ಲಂಘನೆಯು ಕಾಯ್ದೆಯ ಕಲಂ 135(ಬಿ)(3)ರಂತೆ ದಂಡನೀಯವಾಗಿರುತ್ತದೆ ಎಂದು ಅವರು ಆದೇಶ ಹೊರಡಿಸಿದ್ದಾರೆ.
213 ಕಡೆ ಮದ್ಯ ಬಂದ್ : ಚುನಾವಣೆ ಸಂಬಂಧ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಒಟ್ಟು 213 ಮದ್ಯ ವಹಿವಾಟು ಕೇಂದ್ರಗಳಿಗೆ ಬೀಗ ಜಡಿಯುವ ಮೂಲಕ ಸಂಪೂರ್ಣ ಮದ್ಯ ವಹಿವಾಟು ನಿರ್ಬಂಧಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಬೀಗ ಜಡಿದ ಕೇಂದ್ರಗಳು: ಜಿಲ್ಲೆಯಲ್ಲಿ ಸಗಡು ಮದ್ಯ ವಿತರಣಾ ಕೇಂದ್ರಗಳಾದ (ಸಿ.ಎಲ್. -11) ಗೋದಾಮುಗಳನ್ನು ಕುಶಾಲನಗರ ಹಾಗೂ ವೀರಾಜಪೇಟೆಯಲ್ಲಿ ಮುಚ್ಚಲಾಗಿದೆ. ಸಿಎಲ್ 11 ‘ಅ’ ಅಡಿ ಎಂಎಸ್ಐಎಲ್ನ 11 ಶಾಖೆಗಳನ್ನು ಬಂದ್ ಮಾಡಲಾಗಿದೆ. ವಿವಿಧೆಡೆಗಳಲ್ಲಿ ಮದ್ಯ ಮಾರಾಟ ಮಳಿಗೆಗಳು (ಸಿಎಲ್ 2) 86 ಕಡೆ ಮುಚ್ಚಲ್ಪಟ್ಟಿವೆ. ಉಳಿದಂತೆ 19 ಕ್ಲಬ್ಗಳು (ಸಿಎಲ್ 4) ಸ್ಟಾರ್ ಹೊಟೇಲ್ಗಳು (ಸಿಎಲ್ 6 ‘ಎ’) 3, ಬೋರ್ಡಿಂಗ್ ಮತ್ತು ಲಾಡ್ಜಿಂಗ್ 29 (ಸಿಎಲ್-7) ಒಂದು ಮಿಲಿಟರಿ ಕ್ಯಾಂಟೀನ್ (ಸಿಎಲ್ -8) ಹಾಗೂ 62 ಬಾರ್ ಮತ್ತು ರೆಸ್ಟೋರೆಂಟ್ಗಳು (ಸಿಎಲ್-9) ಮುಚ್ಚಲಾಗಿವೆ.
ಇನ್ನು ಪ್ರವಾಸೋದ್ಯಮ ಹೊಟೇಲ್ ವ್ಯಾಲಿವ್ಯೂ (ಸಿಎಲ್ -14) ಸೇರಿದಂತೆ ಆರ್ವಿಬಿ 6 ಕೇಂದ್ರ ಬೀಗ ಜಡಿಯಲ್ಪಟ್ಟಿದೆ. ಹೀಗೆ ಜಿಲ್ಲೆಯಲ್ಲಿ ಸಂಪೂರ್ಣ ಮದ್ಯ ವಹಿವಾಟು ನಿಷೇಧಿಸಿ 213 ಕಡೆ ಈಗಾಗಲೇ ಬೀಗ ಹಾಕಿರುವದು ಗೋಚರಿಸಿದೆ.
ವಶಪಡಿಸಿಕೊಂಡಿದ್ದು, ಇದರ ಮೌಲ್ಯ ರೂ. 28,65,861 ಲಕ್ಷವೆಂದು ಇಲಾಖೆಯ ಮೂಲಗಳಿಂದ ಗೊತ್ತಾಗಿದೆ. ವಶಪಡಿಸಿಕೊಂಡಿರುವ ವಾಹನಗಳ ಮೌಲ್ಯ ರೂ. 31.10 ಲಕ್ಷದಾಗಿದ್ದು, ಗಡಿಗಳಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಗಡಿಗಳಲ್ಲಿ ಪೊಲೀಸ್ ಇಲಾಖೆ, ಲೋಕೋಪಯೋಗಿ, ಕಂದಾಯ, ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಜಂಟಿ ಕಾರ್ಯಾಚರಣೆಯೊಂದಿಗೆ ಜಿಲ್ಲೆಯ ಮೂರು ಅಂತರರಾಜ್ಯ ಗಡಿಗೇಟ್ಗಳ ಸಹಿತ 14 ಚೆಕ್ಪೋಸ್ಟ್ಗಳಲ್ಲಿ ವ್ಯಾಪಕ ಕಣ್ಗಾವಲು ಇರಿಸಲಾಗಿದೆ. ಈ ಮೂಲಕ ಕೊಡಗಿನೊಳಗೆ ಬರುವ ಮತ್ತು ಹೊರ ಹೋಗುವ ಎಲ್ಲಾ ವಾಹನಗಳ ತಪಾಸಣೆಯಲ್ಲಿ ತೊಡಗಿರುವದು ಕಂಡು ಬಂದಿದೆ.