ಮಡಿಕೇರಿ, ಮೇ 10: ರಾಜ್ಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತಾ. 10ರಂದು ಸಂಜೆ ತೆರೆಬಿದ್ದಿದೆ. ಪ್ರಚಾರಕ್ಕೆ ದೊರೆತಿದ್ದ ಅಲ್ಪಾವಧಿಯ ನಡುವೆ ಚುನಾವಣೆಯ ಆಸಕ್ತಿ ಇಲ್ಲದಂತಿದ್ದ ಜನರನ್ನು ಸಂಘಟಿಸುತ್ತಾ, ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದ ರಾಜಕೀಯ ಪಕ್ಷಗಳು, ಕಣದಲ್ಲಿರುವ ಅಭ್ಯರ್ಥಿಗಳು ಕೊನೆ ಹಂತದಲ್ಲಿ ಬಿರುಸಿನ ಓಡಾಟ ನಡೆಸುತ್ತಿದ್ದರು. ಬಹಿರಂಗ ಪ್ರಚಾರ ಮುಕ್ತಾಯವಾದ ದಿನವಾದ ಇಂದೂ ಈ ಓಡಾಟ ಅಲ್ಲಲ್ಲಿ ಕ್ರಿಪ್ರಗತಿಯಿಂದ ಮುಂದುವರಿದಿತ್ತು. ಕಳೆದ ಕೆಲವು ದಿನಗಳಿಂದ ಅಪರಾಹ್ನದ ನಂತರ ಗುಡುಗು- ಮಿಂಚಿನ ಸಹಿತ ಧಾರಾಕಾರವಾಗಿ ಮಳೆ ಸುರಿದು ಈ ಬಾರಿಯ ಚುನಾವಣೆಯ ಪ್ರಚಾರಕ್ಕೆ ಒಂದಷ್ಟು ಅಡಚಣೆಯಾಗಿತ್ತು. ಇದರೊಂದಿಗೆ ಪ್ರಚಾರಕ್ಕೆ ಕೆಲವೆಡೆಗಳಲ್ಲಿ ಕಾಡಾನೆಗಳಿಂದಲೂ ಅಡ್ಡಿಯಾಗಿತ್ತು. ಬಹಿರಂಗ ಪ್ರಚಾರದ ಮುಕ್ತಾಯದ ದಿನವಾದರೂ ಮತ್ತೆ ವರುಣ ಮುನಿಸಿಕೊಂಡಿದ್ದು, ಸ್ಪರ್ಧೆಯಲ್ಲಿರುವವರಿಗೆ ಒಂದಷ್ಟು ‘ಬಿಸಿತುಪ್ಪ’ದಂತಾಗಿದೆ.

ಜಿಲ್ಲೆಯಲ್ಲಿ ಚುನಾವಣೆಯ ಬಿರುಸಿನ ನಡುವೆಯೂ ಅಲ್ಲಲ್ಲಿ ವಿವಿಧ ಕ್ರೀಡಾಕೂಟಗಳು ಮುಂದುವರಿದಿದ್ದು, ಕ್ರೀಡಾ ಸಂಭ್ರಮಕ್ಕೂ ಈ ವಾತಾವರಣ ತೊಡಕಾಗಿದೆ. ತಾ. 12ರಂದು ರಾಜ್ಯಾದ್ಯಂದ 2018ರ ಮತ ಸಮರ ನಡೆಯಲಿದ್ದು, ಕೊಡಗು ಜಿಲ್ಲೆಯಲ್ಲಿ ಈ ನಿರ್ಣಾಯಕ ದಿನದ ವಾತಾವಣರ ಹೇಗಿರಬಹುದು ಎಂಬ ಆತಂಕ ಸಹಜವಾಗಿ ಸ್ಪರ್ಧಿಗಳಲ್ಲಿ ಮಾತ್ರವಲ್ಲದೆ ಮತದಾರರು, ಆಯಾ ಪಕ್ಷಗಳ ಬೆಂಬಲಿಗರನ್ನು ಚಿಂತೆಗೀಡುಮಾಡಿದೆ. ವಾತಾವರಣದ ಏರು-ಪೇರು ಫಲಿತಾಂಶದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇರುವದರಿಂದ ಮೇ 12ರಂದು ಜಿಲ್ಲೆಯಲ್ಲಿನ ವಾತಾವರಣ ಸಹಜತೆಯಿಂದ ಕೂಡಿರಲಿ ಎಂಬದು ಎಲ್ಲರ ಅಭಿಲಾಷೆಯಾಗಿದೆ.

ತಾ. 10ರಂದು ಜಿಲ್ಲಾ ಕೇಂದ್ರ ಮಡಿಕೇರಿ, ಕುಲ್ಲೇಟಿರ ಕಪ್ ಕೌಟುಂಬಿಕ ಹಾಕಿ ಉತ್ಸವ ನಡೆಯುತ್ತಿರುವ ನಾಪೋಕ್ಲು ಸೇರಿದಂತೆ ಹಲವೆಡೆ ಅಪರಾಹ್ನದ ಬಳಿಕ ಮಳೆಯಾಗಿರುವ ಕುರಿತು ವರದಿಯಾಗಿದೆ.