ಮಡಿಕೇರಿ, ಮೇ 10: ನಾಪೋಕ್ಲು ಸರಕಾರಿ ಕಾಲೇಜು, ಮಡಿಕೇರಿ ಕೇಂದ್ರೀಯ ಗ್ರಂಥಾಲಯಕ್ಕೆ ಹೆಸರಾಂತ ಕವಿ ಅಪ್ಪಚ್ಚಕವಿ ಹೆಸರಿಡುವದು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕವಿಯ ಅಧ್ಯಯನ ಪೀಠ ಪ್ರಾರಂಭದೊಂದಿಗೆ ಕವಿಯ ಜನ್ಮೋತ್ಸವವನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುವಂತೆ ಬಿರುನಾಣಿ ಸನಿಹದ ಪೂಕೊಳದಲ್ಲಿ ನಡೆದ ಕವಿಯ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಆಗ್ರಹಿಸಲು ನಿರ್ಣಯ ಕೈಗೊಳ್ಳಲಾಯಿತು.

ಅಖಿಲ ಕೊಡವ ಸಮಾಜ ವೀರಾಜಪೇಟೆ ಹಾಗೂ ಪಾಕೇರಿ ನಾಡು ಪೂಕೊಳ ಶ್ರೀ ಧಾರಾಮಾದೇಶ್ವರ ದೇವಸ್ಥಾನ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 150ನೇ ಜನ್ಮೋತ್ಸವವನ್ನು ಪೂಕೊಳ ಶ್ರೀ ಧಾರಾಮಾದೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಕಾಳಿಮಾಡ ಯಂ. ಮೋಟಯ್ಯ ಅವರು ವಹಿಸಿದ್ದರು. ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷ ಇಟ್ಟೀರ ಕೆ. ಬಿದ್ದಪ್ಪ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಕಾಳಿಮಾಡ ಕೆ. ಶಿವಪ್ಪ ಅವರು ಕವಿಯ ಹಾಡನ್ನು ಹಾಡಿದರು. ಜನ್ಮೋತ್ಸವ ಸಮಿತಿ ಸಂಚಾಲಕ ಅಡ್ಡಂಡ ಸಿ. ಕಾರ್ಯಪ್ಪ ಅವರು ಕವಿಯ ಸೇವೆ, ಸಾಧನೆಯ ಬಗ್ಗೆ ಮಾತನಾಡಿದರು.

ಪುತ್ತು ಭಗವತಿ ದೇವಸ್ಥಾನದ ಅಧ್ಯಕ್ಷ ಕಾಳಿಮಾಡ ಎ. ಮುತ್ತಣ್ಣ ಸ್ವಾಗತಿಸಿದರು. ಮಡಿಕೇರಿ ಜನರಲ್ ತಿಮ್ಮಯ್ಯ ಶಾಲೆಯ ಶಿಕ್ಷಕಿ ಕಾಳಿಮಾಡ ಇಂದಿರಾ ಅಪ್ಪಯ್ಯ ವಂದಿಸಿದರು. ಪೊನ್ನಂಪೇಟೆ ಸೈಂಟ್ ಆಂಟೋನಿ ಶಾಲಾ ಶಿಕ್ಷಕಿ ಬಲ್ಲಡಿಚಂಡ ಕಸ್ತೂರಿ ನಿರೂಪಿಸಿದರು. ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಗೌರವ ಕಾರ್ಯದರ್ಶಿ ಅಮ್ಮುಣಿಚಂಡ ರಾಜಾ ನಂಜಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.