ಗೋಣಿಕೊಪ್ಪಲು. ಮೇ 10: ಚುನಾವಣೆಗೆ ಇನ್ನು 2 ದಿನ ಬಾಕಿ ಇರುವಾಗಲೇ ಗೋಣಿಕೊಪ್ಪಲುವಿನಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಇದು ವಿಕೋಪಕ್ಕೆ ತಿರುಗಿದೆ. ಪರಿಣಾಮ ಎರಡು ಗುಂಪುಗಳ ನಡುವೆ ನಡೆದ ಗಲಾಟೆ, ಮಾರಣಾಂತಿಕ ಹಲ್ಲೆವರೆಗೂ ತಲುಪಿದೆ. ಸುದ್ದಿ ತಿಳಿದ ಪೊಲೀಸರು ಎರಡು ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಗೋಣಿಕೊಪ್ಪಲುವಿನಲ್ಲಿ ಬಿಗುವಿನ ವಾತಾವರಣ ಕಂಡುಬಂದಿದ್ದು ಪೊಲೀಸರು ಹಾಗೂ ಅರೆ ಸೇನಾ ಸಿಬ್ಬಂದಿಗಳು ಸ್ಥಳದಲ್ಲಿ ಮೊಕಾಂ ಹೂಡಿದ್ದಾರೆ.

ಗೋಣಿಕೊಪ್ಪಲುವಿನ ಮೂರನೇ ವಿಭಾಗದಲ್ಲಿ ಬುಧವಾರ ರಾತ್ರಿ 8.30ರ ಸುಮಾರಿಗೆ ಕಾಂಗ್ರೆಸ್‍ನ ಯುವ ಮುಖಂಡ ಗ್ರಾಮ ಪಂಚಾಯ್ತಿಯ ಸದಸ್ಯ ಮುರುಗ ಹಾಗೂ ತಂಡ ಮತ ಯಾಚನೆ ನಡೆಸುತ್ತಿದ್ದರು. ಈ ಸಂದರ್ಭ ಮತ್ತೊಂದು ಕಡೆಯಿಂದ ಬಿಜೆಪಿಯ ಮಾಜಿ ಗ್ರಾ.ಪಂ.ಸದಸ್ಯರಾದ ರಾಜೇಶ್ ಹಾಗೂ ತಂಡ ಬಿಜೆಪಿ ಪರವಾಗಿ ಮತ ಯಾಚನೆ ನಡೆಸುತ್ತಿದ್ದರು. ಎರಡು ಗುಂಪುಗಳು ಎದುರು ಬದುರು ಆದಾಗ ಪರಸ್ಪರ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದ್ದು, ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಗಳವಾಗಿದೆ. ಈ ಸಂದರ್ಭ ಸ್ಥಳದಲ್ಲಿದ್ದ ಹಂಚಿನ ಚೂರುಗಳು, ಕಲ್ಲಿನಿಂದ ಹೊಡೆದಾಡಿ ಕೊಂಡಿದ್ದಾರೆ. ಎರಡು ಗುಂಪುಗಳ ನಡೆದ ಗಲಾಟೆಯಲ್ಲಿ ಗಾಯಗೊಂಡ ವರು ತಕ್ಷಣ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಒಳಗಾದರು.ಸುದ್ದಿ ತಿಳಿದ ಗೋಣಿಕೊಪ್ಪ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಲ್ಲಿದ್ದ ಗುಂಪನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಸುದ್ದಿ ತಿಳಿದ ತಕ್ಷಣ ಎರಡು ಕಡೆಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಯತ್ತ ಧಾವಿಸಿದರು. ಕೆಲ ಹೊತ್ತಿನಲ್ಲಿ ಅಲ್ಲಿದ್ದ ಬಿಜೆಪಿ ಹಾಗೂ ಕಾಂಗ್ರೆಸ್‍ನ ಗುಂಪಿನ ನಡುವೆ ಆಸ್ಪತ್ರೆಯಲ್ಲಿಯೇ ದೊಡ್ಡ ಮಟ್ಟದ ಗಲಾಟೆ ನಡೆದಿದೆ.

(ಮೊದಲ ಪುಟದಿಂದ) ಈ ಸಂದರ್ಭ ಉಭಯ ಕಡೆ ಯುವಕರು ಆಸ್ಪತ್ರೆ ಎಂಬುದನ್ನು ಲೆಕ್ಕಿಸದೆ ಅಲ್ಲಿದ್ದ ಆ್ಯಕ್ಸಿಜನ್ ಸಿಲಿಂಡರ್,ಕುರ್ಚಿ ಇತರ ವಸ್ತುಗಳಿಂದ ಹಲ್ಲೆಗೆ ಮುಂದಾಗಿದ್ದಾರೆ.

ಸ್ಥಳದಲ್ಲಿದ್ದ ಆಸ್ಪತ್ರೆ ಸಿಬ್ಬಂದಿಗಳು, ವೈದ್ಯರು, ಗಾಬರಿಗೊಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮೂರನೇ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಆಸ್ಪತ್ರೆಯ ಆವರಣಕ್ಕೆ ಬರುವಷ್ಟರಲ್ಲಿ ಗಲಾಟೆ ಉಲ್ಬಣಗೊಂಡಿತ್ತು.ಆಸ್ಪತ್ರೆಯ ಕೆಲವು ವಸ್ತುಗಳಿಗೆ ಹಾಗೂ ಕಿಟಕಿ ಗಾಜುಗಳು ಇವರ ಆಕ್ರೋಶಕ್ಕೆ ಪುಡಿಪುಡಿಯಾದವು. ಪೊಲೀಸರು ಬಂದ ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲು ಕೆಲ ಕಾಲ ಲಾಠಿ ಚಾರ್ಜ್ ನಡೆಸಿ ಆಸ್ಪತ್ರೆಯಲ್ಲಿದ್ದವರನ್ನು ಚದುರಿಸಲಾಯಿತು.ತೀವ್ರ ಹಲ್ಲೆಗೊಳಗಾದ ಇಬ್ಬರನ್ನು ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಯಿತು.

ಘರ್ಷಣೆಯಲ್ಲಿ ಕಾವೇರಿ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿ ಪುನೀತ್ ಹಾಗೂ ಅವರ ಕುಟುಂಬದ ಮೇಲೆಯೂ ಹಲ್ಲೆ ನಡೆಸಲಾಗಿದೆ. ಪುನೀತ್ ಆರ್.ಎಸ್.ಎಸ್ ನ ಸಂಘದ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಶಾಖೆ ಮುಗಿಸಿ ಮನೆಗೆ ಬರುತ್ತಿದ್ದ ಸಂದರ್ಭ ಈತನ ಮೇಲೆ ಹಲ್ಲೆ ನಡೆಸಲಾಗಿದೆ. ಪುನೀತನ ಕುತ್ತಿಗೆ ಭಾಗ, ಕೆನ್ನೆಯ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ತಾಲೂಕು ಯುವ ಕಾಂಗ್ರೆಸ್ ಜಮ್ಮಡ ಸೋಮಣ್ಣ ಹಾಗೂ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಕರ್ತಂಡ ಸೋಮಣ್ಣ ಅವರುಗಳಿಗೂ ಗಂಭೀರ ಗಾಯಗಳಾಗಿದ್ದು, ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಯಿತು. ಪೊಲೀಸರಿಗೆ ಉಭಯ ಕಡೆಯಿಂದ ದೂರು ನೀಡಲಾಗಿದೆ. ಕಾಂಗ್ರೆಸ್‍ನ ಪರವಾಗಿ ಕಾಟಿ ಮುರುಗ ಹಾಗೂ ಬಿಜೆಪಿಯ ಪರವಾಗಿ ಪುನೀತ್ ದೂರುದಾರರಾಗಿದ್ದಾರೆ. ಉಭಯ ಕಡೆಯ 40ಕ್ಕೂ ಅಧಿಕ ಯುವಕರ ಮೇಲೆ ಪ್ರಕರಣ ಇರುವದರಿಂದ ಮೇ.12 ರಂದು ನಡೆಯುವ ಚುನಾವಣೆಯಲ್ಲಿ ಈ ಯುವಕರು ಪಾಲ್ಗೊಳ್ಳುವ ಸಾಧ್ಯತೆ ಇಲ್ಲದಂತಾಗಿದೆ.

ಪ್ರಕರಣದಲ್ಲಿ ಗೋಣಿಕೊಪ್ಪ ನಗರಕ್ಕೆ ಸೀಮಿತಗೊಳ್ಳದ ಇತರ ಗ್ರಾಮದ ಯುವಕರು ಪಾಲ್ಗೊಂಡಿದ್ದಾರೆಂಬ ಮಾಹಿತಿ ಪೊಲೀಸರಿಗೆ ದೃಢಪಟ್ಟಿದೆ. ಹೆಚ್ಚಿನ ಮಾಹಿತಿಯನ್ನು ಸಿಸಿ ಕ್ಯಾಮೆರಾ ಸಹಾಯದಿಂದ ಘಟನೆಯ ಸಂಪೂರ್ಣ ವಿವರವನ್ನು ಪಡೆಯುತ್ತಿದ್ದು ಗಲಾಟೆಯಲ್ಲಿ ತೊಡಗಿದ್ದವರ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಳಿದವರನ್ನು ಬಂಧಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಡಿವೈಎಸ್ಪಿ ನಾಗಪ್ಪ, ಸಿಪಿಐ ಹರಿಶ್ಚಂದ್ರ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದು ಮುಂಜಾಗೃತ ಕ್ರಮವಾಗಿ ಹೆಚ್ಚಿನ ಸಿಬ್ಬಂದಿಗಳನ್ನು ನಗರದಲ್ಲಿ ನಿಯೋಜಿಸಲಾಗಿದೆ. ನಗರದ ಬೀದಿಗಳಲ್ಲಿ ಅರೆ ಸೇನಾಪಡೆ ಹಾಗೂ ಪೊಲೀಸರಿಂದ ಪಥ ಸಂಚಲನ ನಡೆಸಲಾಯಿತು. ಸಕಾಲದಲ್ಲಿ ಪೊಲೀಸರು ಕ್ರಮವಹಿಸಿದ ಹಿನ್ನಲೆಯಲ್ಲಿ ಹೆಚ್ಚಿನ ಅಹಿತಕರ ಘಟನೆಗಳು ಸಂಭವಿಸಲಿಲ್ಲ.

ಇಬ್ಬರ ದೂರನ್ನು ಸ್ವೀಕರಿಸಿದ ಪೊಲೀಸರು ಕೊಲೆ ಪ್ರಯತ್ನದ 307 ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡು ಮಧ್ಯರಾತ್ರಿಯ ವೇಳೆಯಲ್ಲಿ ಘಟನೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್‍ನ 10ಕ್ಕೂ ಹೆಚ್ಚಿನ ಯುವಕರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.ರಾತ್ರಿ 10ರ ಸಮಯದಲ್ಲಿ ಬಿಜೆಪಿಯ ಕೆಲ ಮುಖಂಡರು ಗೋಣಿಕೊಪ್ಪ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು.

ಕಾಂಗ್ರೆಸ್‍ನ ಮುರುಗ, ಸೋಮಣ್ಣ, ಗಣಪತಿ, ಬಿಜೆಪಿಯ ಮಂಜುರೈ, ರಾಜೇಶ್, ರತೀಶ್, ಸೇರಿದಂತೆ 20 ಕ್ಕೂ ಅಧಿಕ ಯುವಕರ ಮೇಲೆ ಪ್ರಕರಣ ದಾಖಲಾಗಿದ್ದು ಹಲವು ಯುವಕರು ತಲೆ ಮರೆಸಿಕೊಂಡಿದ್ದಾರೆ. ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆಯಿಂದ ಸಾರ್ವಜನಿಕರು ಆಕ್ರೋಶಗೊಂಡಿ ದ್ದಾರೆ. ಕಳೆದ ಎರಡು ದಿನಗಳ ಹಿಂದೆ ಇದೇ ಎರಡು ಗುಂಪಿನ ನಡುವೆ ಮಾತಿನ ಚಕಾಮಕಿ ನಡೆದಿತ್ತು. ಎರಡು ಪಕ್ಷಗಳ ಮುಖಂಡರು ಮದ್ಯೆ ಪ್ರವೇಶಿಸಿದ ಕಾರಣ ಪರಿಸ್ಥಿತಿ ಶಾಂತವಾಗಿತ್ತು ಎಂದು ತಿಳಿದು ಬಂದಿದೆ.

ಡಿವೈಎಸ್‍ಪಿ ನಾಗಪ್ಪ, ವೃತ್ತ ನಿರೀಕ್ಷಕ ಹರೀಶ್ಚಂದ್ರ ಸೇರಿದಂತೆ ತಹಶೀಲ್ದಾರ್ ಮಹದೇವಸ್ವಾಮಿ ಅವರು ಭೇಟಿ ನೀಡಿ ಪರಿಶೀಲಿಸಿದರು.

-ಹೆಚ್.ಕೆ. ಜಗದೀಶ್, ಎನ್.ಎನ್. ದಿನೇಶ್.