ಮಡಿಕೇರಿ, ಮೇ 10: ವೀರಾಜಪೇಟೆ ಪಟ್ಟಣ ಪಂಚಾಯಿತಿ ತನ್ನ ಒಡೆತನದಲ್ಲಿರುವ ಮಳಿಗೆಗಳಲ್ಲಿ 35 ಮಳಿಗೆಗಳನ್ನು ಇತ್ತೀಚೆಗೆ ಹರಾಜು ಮಾಡಿದ್ದು, ಪಾರದರ್ಶಕವಾಗಿ ನಡೆದಿಲ್ಲ ಎಂದು ನಾಗರಿಕ ಸಮಿತಿಯ ದುರ್ಗಾ ಪ್ರಸಾದ್ ಆರೋಪಿಸಿದ್ದಾರೆ. 6.7.12 ರಲ್ಲಿ ನಡೆದ ಪಟ್ಟಣ ಪಂಚಾಯಿತಿ ಕೌನ್ಸಿಲ್‍ನ ಸಭೆಯಲ್ಲಿ ಹಾಲಿ ಇರುವ ಹಳೆಯ ವಾಣಿಜ್ಯ ಸಂಕೀರ್ಣದಲ್ಲಿ ಬಾಡಿಗೆದಾರರು ವಾಸ್ತವ್ಯವಿದ್ದು, ಕರಾರು ಪತ್ರದನ್ವಯ ಅವರ ಬಾಡಿಗೆ ಅವಧಿ ಮುಕ್ತಾಯ ಗೊಂಡಿರುವದರಿಂದ ಗುತ್ತಿಗೆ ಅವಧಿಯನ್ನು 12 ವರ್ಷಕ್ಕೆ ಮುಂದು ವರಿಸುವಂತೆ ತೀರ್ಮಾನವಾಗಿತ್ತು.

ಈಗ 2018 ರಲ್ಲಿ ಪಂಚಾಯಿತಿ ತನ್ನ ಒಡೆತನದಲ್ಲಿರುವ 107 ಮಳಿಗೆಗಳಲ್ಲಿ 35 ಮಳಿಗೆಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿದೆ. ತನ್ನ ಒಡೆತನದಲ್ಲಿ 113 ಮಳಿಗೆಗಳಿದ್ದು ಅವುಗಳಲ್ಲಿ 5 ಮಳಿಗೆಗಳು ಪಂಚಾಯಿತಿಯ ಅಗತ್ಯಕ್ಕೆ ಇದ್ದು ಉಳಿದ 107 ಮಳಿಗೆಗಳಲ್ಲಿ 47 ಮಳಿಗೆಗಳನ್ನು ಈಗಾಗಲೇ ಹರಾಜು ಮಾಡಲಾಗಿದೆ ಎಂದೂ, 25 ಮಳಿಗೆಗಳು ಶಿಥಿಲಾವಸ್ಥೆಯಲ್ಲಿವೆ ಎಂದೂ ಆದಕಾರಣ ಹರಾಜು ಯೋಗ್ಯವಲ್ಲವೆಂದೂ ಬಾಕಿ ಇರುವ 35 ಮಳಿಗೆಗಳನ್ನು ಹರಾಜು ಮಾಡುತ್ತಿರುವದಾಗಿಯೂ ಪಂಚಾಯಿತಿ ಹೇಳಿಕೊಂಡಿದೆ. ದಾಖಲೆಗಳನ್ನು ಅವಲೋಕಿಸಿದಾಗ 2012 ರಿಂದ 2015 ರ ಜೂನ್ ತಿಂಗಳ ಮಧ್ಯದ ಕಾಲಾವಧಿಯಲ್ಲಿ ಒಂದಷ್ಟು ಮಳಿಗೆಗಳನ್ನು ಕರಾರು ಮೂಲಕ ಕೊಟ್ಟದ್ದು ಕಂಡುಬರುತ್ತದೆ. ಈ ಅವಧಿಯಲ್ಲಿ ನಮ್ಮ ಮಳಿಗೆಯನ್ನು 12 ವರ್ಷಗಳಿಗೆ ನವೀಕರಿಸಿಕೊಡಿ ಎಂದು ಕೊಟ್ಟ ಒಂದಷ್ಟು ಅರ್ಜಿಗಳು ತಿರಸ್ಕರಿಸಲ್ಪಟ್ಟಿರುವದು, ಉತ್ತರ ಸಿಗದೆ ಅವಗಣಿಸಲ್ಪಟ್ಟಿರುವದು ಕಂಡು ಬರುತ್ತದೆ. ಈ ಅವಧಿಯಲ್ಲಿ ಮಳಿಗೆಗಳ ವ್ಯವಹಾರವನ್ನು ಗಮನಿಸುವಾಗ ಅವ್ಯವಹಾರ, ಪಕ್ಷಪಾತ ನಡೆದಿರುವಂತೆ ಹೊರನೋಟಕ್ಕೆ ಕಂಡುಬರುತ್ತದೆ. ಈ ಅವಧಿಯ ವ್ಯವಹಾರದ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ತನ್ನ ಒಡೆತನ ದಲ್ಲಿರುವ ಮಳಿಗೆಗಳಲ್ಲಿ 47 ಮಳಿಗೆಗಳನ್ನು ಈಗಾಗಲೇ ಹರಾಜು ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಮಳಿಗೆಗಳ ಹರಾಜು ಪ್ರಕ್ರಿಯೆ ಯಾವಾಗ ಹೇಗೆ ನಡೆಯಿತು ಎನ್ನುವ ವಿವರ ಜನಸಮಕ್ಷ ಮಂಡನೆಯಾಗಬೇಕು. 25 ಮಳಿಗೆಗಳು ಶಿಥಿಲವಾಗಿವೆ ಎಂದು ಅವುಗಳನ್ನು ಹರಾಜು ಪ್ರಕ್ರಿಯೆಯಿಂದ ಹೊರಗಿಡ ಲಾಗಿದೆ. ಇವು ಶಿಥಿಲವಾಗಿರುವದೆಂದರೆ ವಾಸ ಯೋಗ್ಯವಲ್ಲ. ಯಾವದೇ ಸಮಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡಗಳಲ್ಲಿ ಯಾವದೇ ರೀತಿಯ ಅಪಘಾತ ಸಂಭವಿಸಬಹುದು ಮತ್ತು ಜೀವಹಾನಿಯನ್ನೊಳಗೊಂಡು ಯಾವ ರೀತಿಯ ಹಾನಿಯೂ ಸಂಭವಿಸ ಬಹುದು. ಈ ಮಳಿಗೆಗಳನ್ನು ತಕ್ಷಣವೇ ಖಾಲಿ ಮಾಡಿಸಿ ಒಡೆದು ಹಾಕಬೇಕು. ಈ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲು ನಾಗರಿಕ ಸಮಿತಿ ತೀರ್ಮಾನಿಸಿದೆ ಎಂದು ಅವರು ತಿಳಿಸಿದ್ದಾರೆ.