ಕುಶಾಲನಗರ, ಮೇ 10: ಚುನಾವಣಾ ವೀಕ್ಷಣಾ ತಂಡದ ಸದಸ್ಯರು ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆಯ ಗೋದಾಮುಗಳನ್ನು ಪರಿಶೀಲನೆ ನಡೆಸಿದರು. ಮಾರುಕಟ್ಟೆ ಆವರಣದಲ್ಲಿ ನಿರ್ಮಾಣಗೊಂಡಿರುವ 11 ಗೋದಾಮುಗಳ ಬೀಗ ತೆರೆದು ಪರಿಶೀಲನೆ ನಡೆಸಿದ ತಂಡ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವ ಪರಿಕರಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಕಳೆದ ಬಾರಿ ವಿಧಾನಸಭಾ ಚುನಾವಣಾ ಸಂದರ್ಭ ಗೋಣಿಕೊಪ್ಪ ಮಾರುಕಟ್ಟೆಯಲ್ಲಿ ಅಕ್ರಮ ನಗದು ಪತ್ತೆಯಾದ ಹಿನ್ನಲೆಯಲ್ಲಿ ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಚುನಾವಣಾ ಅಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲಾ ಗೋದಾಮುಗಳ ಪರಿಶೀಲನೆ ನಡೆಸಲಾಗುತ್ತಿದೆ. ಚುನಾವಣಾ ಪರಿಶೀಲನಾ ತಂಡದ ಅಧಿಕಾರಿಗಳಾದ ದೊಡ್ಡಮನಿ, ಕುಶಾಲನಗರ ಠಾಣಾಧಿಕಾರಿ ಜಗದೀಶ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿ ಅನಿಲ್, ಸಿಬ್ಬಂದಿಗಳಾದ ಚೆಲುವರಾಜು ಮತ್ತಿತರರು ಇದ್ದರು.