ಮಡಿಕೇರಿ, ಮೇ 10: ಚುನಾವಣೆ ಸನ್ನಿಹಿತವಾಗುತ್ತಿರುವಂತೆ ವೀರಾಜಪೇಟೆ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರ ವಿರುದ್ಧ ವೀರಾಜಪೇಟೆ ತಾಲೂಕಿನಲ್ಲಿ ಭಿತ್ತಿಪತ್ರಗಳು ಸೇರಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಈ ರೀತಿ ಅಪಪ್ರಚಾರ ಮಾಡುತ್ತಿರುವವರು ಇದನ್ನು ಶ್ರೀ ಕ್ಷೇತ್ರ ತಲಕಾವೇರಿಗೆ ಬಂದು ಬೋಪಯ್ಯ ಅವರ ಸಮ್ಮುಖದಲ್ಲಿ ಪ್ರಮಾಣ ಮಾಡಲಿ ಎಂದು ರಾಜ್ಯ ಬಿ.ಜೆ.ಪಿ. ಕಾರ್ಯದರ್ಶಿ ಮನು ಮುತ್ತಪ್ಪ ಅವರು ಸವಾಲೆಸೆದಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಕೆ.ಜಿ.ಬಿ. ಅವರ ಜನಪ್ರಿಯತೆಯನ್ನು ಸಹಿಸದೆ ಅವರನ್ನು ತೇಜೋವಧೆ ಮಾಡುವ ಪ್ರಯತ್ನ ತೆರೆಮರೆಯಲ್ಲಿ ಹಲವರಿಂದ ನಡೆಯುತ್ತಿದ್ದು, ಇದನ್ನು ಖಂಡಿಸುವದಾಗಿ ಹೇಳಿದ್ದಾರೆ.