ಮಡಿಕೇರಿ, ಮೇ 10: ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಮೂರು ದಿನಗಳಿಂದ ಸಂಚರಿಸಿದ ವೇಳೆ ಬಿಜೆಪಿಗೆ ಮತದಾರರಿಂದ ವ್ಯಾಪಕ ಜನಬೆಂಬಲ ವ್ಯಕ್ತಗೊಂಡಿದೆ ಎಂದು ತೆಲಂಗಾಣ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಾಗಡಿ ತಿಳಿಸಿದರು. ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಇಂದು ಜಿಲ್ಲೆಯಿಂದ ನಿರ್ಗಮಿಸುವ ಮುನ್ನ ಅವರು ‘ಶಕ್ತಿ’ಯೊಂದಿಗೆ ಮಾತನಾಡಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ಜನಪರ ಯೋಜನೆಗಳು ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಜಿಲ್ಲಾ ಭೇಟಿಯಿಂದ ಗ್ರಾಮೀಣ ಯುವಕರ ಸಹಿತ ಹಿಂದುಳಿದ ಸಮುದಾಯ ಹಾಗೂ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರವಿದ್ದಾಗ, ಕೊಡಗಿನಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ಸ್ನಾತಕೋತ್ತರ ವೃತ್ತಿ ಶಿಕ್ಷಣಕ್ಕೆ ಸ್ಥಳೀಯವಾಗಿ ಅವಕಾಶ ನೀಡಿರುವದು, ಗ್ರಾಮೀಣ ರಸ್ತೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಎಲ್ಲಾ ವರ್ಗದ ಜನರ ಕುಂದುಕೊರತೆ ನೀಗಿಸಲು ಆದ್ಯತೆ ನೀಡಿರುವದು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು. ಜಿಲ್ಲಾ ಎಸಿ ಮೋರ್ಚಾ ಅಧ್ಯಕ್ಷ ಸತೀಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ ಹಾಜರಿದ್ದರು.