ಗೋಣಿಕೊಪ್ಪ, ಮೇ 10: ಒಕ್ಕಲಿಗರ ಯುವ ವೇದಿಕೆ, ವೀರಾಜಪೇಟೆ ವತಿಯಿಂದ ಕಳೆದ ಎರಡು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕ್ರೀಡಾಕೂಟ ಇದೀಗ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಕುರಿತಾಗಿ ಸುದ್ದಿಗೋಷ್ಠಿ ಏರ್ಪಡಿಸಿತ್ತು.
ಈ ಸಂದರ್ಭ ಮಾತನಾಡಿ, ಕೊಡಗು ಜಿಲ್ಲಾದ್ಯಂತ ಇರುವ ಒಕ್ಕಲಿಗ ಬಾಂಧವರನ್ನು ಒಟ್ಟುಗೂಡಿಸಿ ಕ್ರೀಡೆಯೊಂದಿಗೆ ಬಾಂಧವ್ಯ ಬೆಳೆಸುವ ಸದುದ್ದೇಶದೊಂದಿಗೆ ತಾ. 19 ಹಾಗೂ 20 ರಂದು ಹಾತೂರುವಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದೆ ಎಂದರು.
ಕಳೆದ ಎರಡು ವರ್ಷಗಳಿಂದ ಕ್ರೀಡಾಕೂಟ ಹಾತೂರು, ಕೈಕೇರಿ, ಕೋತೂರು, ಕಾರ್ಮಾಡು, ಕೊಟ್ಟಗೇರಿ ಗ್ರಾಮಗಳ ಸಹಕಾರದೊಂದಿಗೆ ನಡೆದಿತ್ತು. ಪ್ರಸ್ತುತ ವರ್ಷ ವೀರಾಜಪೇಟೆ ತಾಲೂಕಿನ ಸರ್ವರ ಸಹಕಾರದಿಂದ ನಡೆಸಲು ಯುವ ವೇದಿಕೆಯು ನಿರ್ಧರಿಸಿದೆ ಎಂದರು. ಪುರುಷರಿಗೆ (11 ಮಂದಿಯ ತಂಡ) ಹಾಗೂ 15 ವರ್ಷದ ಒಳಗಿನ ಮಕ್ಕಳಿಗೆ (11 ಮಂದಿಯ ತಂಡ) ಕ್ರಿಕೆಟ್ ಪಂದ್ಯಾಟದ ಜೊತೆ ಮಹಿಳೆಯರಿಗೆ ಹಗ್ಗಜಗ್ಗಾಟವನ್ನು (9 ಮಂದಿಯ ತಂಡ) ಏರ್ಪಡಿಸಲಾಗಿದೆ. ತಂಡಗಳು ತಾ. 12 ರೊಳಗಾಗಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ (9483598480, 8861411875, 8970412442) ಕರೆ ಮಾಡಿ ತಮ್ಮ ತಂಡದ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಯುವ ವೇದಿಕೆಯ ಕ್ರೀಡಾ ಸಂಚಾಲಕರು ತಿಳಿಸಿದ್ದಾರೆ. ಈ ಸಂದರ್ಭ ಯುವ ವೇದಿಕೆ ಅಧ್ಯಕ್ಷ ವಿ.ಎನ್. ಮಹೇಶ್, ಉಪಾಧ್ಯಕ್ಷ ಮಂಜುನಾಥ್, ಸಹ ಕಾರ್ಯದರ್ಶಿ ಸುದೀಪ್ ವಿ.ಸಿ., ಮಧುಸೂಧನ್ ವಿ.ಜಿ., ಕಿಲನ್ ವಿ.ಡಿ. ಹಾಜರಿದ್ದರು.