ಸುಂಟಿಕೊಪ್ಪ, ಮೇ 10: ಈ ದೇಶ ಮಾನವೀಯತೆಯ ಧರ್ಮದಿಂದ ಉಳಿದಿದೆ. ಯಾರೂ ಏನೇ ಕೆಲಸ ಮಾಡಿದರೂ ಸಮಾಜಮುಖಿ ಕಾರ್ಯದಿಂದ ದೇಶದ ಅಭಿವೃದ್ಧಿಯಾಗುತ್ತಿದೆ ಎಂದು ನಿವೃತ್ತ ಶಿಕ್ಷಕಿ ಸಿಸ್ಟರ್ ಐರಿನ್ ಹೇಳಿದರು.

ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 1986-87ನೇ ಸಾಲಿನ 7ನೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರ ಬದುಕು ನಿಂತ ನೀರಲ್ಲ. ಯಾರು ಎಲ್ಲಿ ಬದುಕಿದರೂ ಈ ಸಮಾಜಕ್ಕಾಗಿ ಕೊಡುಗೆ ನೀಡಬೇಕು. ಮಾನವರು ಜೀವಿಸಿರುವ ಕಾಲಘಟ್ಟದಲ್ಲಿ ಉತ್ತಮ ಕಾರ್ಯಗಳನ್ನು ನಿರ್ವಹಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಆದರ್ಶ ಕಾರ್ಯಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದರು.

ಬಾಳೆಹೊನ್ನೂರು ನಿರ್ಮಲ ಕಾನ್ವೆಂಟ್ ಶಾಲೆಯ ಶಿಕ್ಷಕಿ ಶಾಂತಕುಮಾರಿ ಮಾತನಾಡಿ, ಮಕ್ಕಳು ಎಷ್ಟೇ ಬೆಳೆದರೂ ತಾಯಿಗೆ ಮಗುವೇ ಆಗಿರುತ್ತಾರೆ. ತಾಯಿ ಮಕ್ಕಳ ಭವಿಷ್ಯದ ಬಗ್ಗೆ ಯಾವಾಗಲೂ ಹಿತಚಿಂತನೆ ಮಾಡುತ್ತಾರೆ ಎಂದು ಹೇಳಿದರು.

ಹಳೆ ವಿದ್ಯಾರ್ಥಿ ಪ್ರದೀಪ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನಸು ಎಲ್ಲರೂ ಕಾಣುತ್ತಾರೆ. ಆ ಕನಸು ನನಸು ಮಾಡುವದು ಅಷ್ಟು ಸುಲಭವಲ್ಲ. ಸಹಪಾಠಿಗಳನ್ನು ಒಗ್ಗೂಡಿಸಿ ಎಲ್ಲರನ್ನೂ ಕರೆತಂದು ಒಂದುಗೂಡಿಸುವ ಮೂಲಕ ಉತ್ತಮ ಕಾರ್ಯಕ್ರಮ ಮಾಡಿರುವದು ಸುತ್ಯಾರ್ಹವಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯಿನಿ ವಿರಾ ಡಿಸೋಜ ಮಾತನಾಡಿ, ಹಿಂದಿನ ಶಿಕ್ಷಕರು ವಿದ್ಯಾರ್ಥಿ ಜೀವನವನ್ನು ಹಸನುಗೊಳಿಸಲು ಶ್ರಮವಹಿಸಿದ್ದರು. ಅವರನ್ನು ಸ್ಮರಿಸುವ ದೊಡ್ಡತನವನ್ನು ಈ ಬಳಗವು ಮನಗಂಡಿರುವದು ಅವಿಸ್ಮರಣೀಯ ಎಂದರು. ವೇದಿಕೆಯಲ್ಲಿ ಸಿಸ್ಟರ್ ವೈಲೆಟ್, ಸಿಸ್ಟರ್ ಮಿಲ್‍ಡ್ರೇಡ್, ನಿವೃತ್ತ ಶಿಕ್ಷಕಿಯರಾದ ಮೇರಿ ವಿಲಿಯಂ ಮೆನೆಜೇಸ್, ಡೇಸಿ, ಸಂತ ಕ್ಲಾರ ವಿದ್ಯಾಸಂಸ್ಥೆಯ ಸೂಪಿರಿಯರ್ ವೈಲೆಟ್ ಉಪಸ್ಥಿತರಿದ್ದರು.

ಸನ್ಮಾನ: ತಮ್ಮಗೆ ಶಿಕ್ಷಣವನ್ನು ನೀಡಿದ ಶಿಕ್ಷಕರಿಗೆ ಸಮಾರಂಭದ ವೇದಿಕೆಯಲ್ಲಿ ವಿದ್ಯಾರ್ಥಿಗಳೇ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ, ಗೌರವಿಸಿದರು. ಬ್ಯಾಚ್ ವತಿಯಿಂದ ಶಾಲೆಗೆ ಕುರ್ಚಿಯನ್ನು ನೀಡಲಾಯಿತು. ಅಗಲಿದ ಸಹಪಾಠಿಗಳಿಗೆ ಸಂತಾಪ ಸೂಚಿಸಲಾಯಿತು. ಜ್ಯೋತಿ ಮತ್ತು ತಂಡದವರು ಪ್ರಾರ್ಥಿಸಿ, ಸಲ್ಮಾಬೊಂಬಿನ ಪಾಯಸ್ ಸ್ವಾಗತಿಸಿ, ಲವಿನ ಸಬಾಸ್ಟಿನ್ ನಿರ್ವಹಿಸಿ, ವಿಜುಕುಮಾರ್ ವಂದಿಸಿದರು.