ಗೋಣಿಕೊಪ್ಪ ವರದಿ, ಮೇ 11 : ಕೋವಿ ಹಕ್ಕಿನ ವಿಚಾರವನ್ನು ಮತ್ತೆ ಪ್ರಸ್ತಾಪಿಸಿ ಕಿರಿಕಿರಿ ಉಂಟು ಮಾಡುತ್ತಿರುವ ನಿವೃತ್ತ ಸೈನ್ಯಾಧಿಕಾರಿ ಯಾಲದಾಳು ಕೆ. ಚೇತನ್ ಅವರ ನಡೆಯನ್ನು ಖಂಡಿಸಿರುವ ಗೋಣಿಕೊಪ್ಪ ಕೊಡವ ಸಮಾಜ ಇವರ ವಿರುದ್ದ ವ್ಯವಹರಿಸುತ್ತಿರುವ ಬೆಂಗಳೂರು ಕೊಡವ ಸಮಾಜ ಮತ್ತು ಅಖಿಲ ಕೊಡವ ಸಮಾಜಕ್ಕೆ ಬೆಂಬಲ ನೀಡುವ ನಿರ್ಧಾರ ತೆಗೆದುಕೊಂಡಿದೆ.
ಸಮಾಜದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು, 2 ವರ್ಷಗಳ ಹಿಂದೆ ಚೇತನ್ ಅವರು ಕೂರ್ಗ್ ಬೈರೇಸ್ ಮತ್ತು ಜಮ್ಮಾಹಿಡುವಳಿದಾರರಿಗೆ ನೀಡಿರುವ ಕೋವಿ ಹಕ್ಕಿನ ಬಗ್ಗೆ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ನ್ಯಾಯಾಲಯ ತನ್ನ ವ್ಯಾಪ್ತಿಗೆ ಬರುವದಿಲ್ಲ ಎಂದು ತೀರ್ಪು ನೀಡಿದ್ದರೂ ಇದೇ ವಿಚಾರವಾಗಿ ಮತ್ತೆ ಕೆದಕುವ ಮೂಲಕ ಕಿರಿಕಿರಿ ಉಂಟು ಮಾಡುತ್ತಿರುವದನ್ನು ಖಂಡಿಸಲಾಯಿತು.
ಈ ವಿಚಾರವನ್ನು ಕೇಂದ್ರ ಸರ್ಕಾರದ ಗೃಹ ಇಲಾಖೆಯಲ್ಲಿ ಪ್ರಸ್ತಾಪಿಸಿಯೂ ಅವರಿಗೆ ಸ್ಪಂದನ ದೊರೆತಿಲ್ಲ. ಆದರೂ ನ್ಯಾಯಾಲಯದ ತೀರ್ಪಿನ ವಿರುದ್ಧ ಮೊಕದ್ದಮೆ ಹೂಡುವದಾಗಿ ಹೇಳುತ್ತಿರುವದು ಖಂಡನೀಯ. ಕೋವಿ ಹಕ್ಕಿನ ವಿಚಾರವನ್ನು ವಿನಾ ಕಾರಣ ಪ್ರಸ್ತಾಪಿಸುತ್ತಿರುವದು ಸರಿಯಲ್ಲ. ಈ ವಿಚಾರವಾಗಿ ಅರ್ಜಿದಾರರ ವಿರುದ್ದ ಹೋರಾಟ ನಡೆಸುತ್ತಿರುವ ಬೆಂಗಳೂರು ಕೊಡವ ಸಮಾಜ ಮತ್ತು ಅಖಿಲ ಕೊಡವ ಸಮಾಜಕ್ಕೆ ಬೆಂಬಲ ಸೂಚಿಸುವದಾಗಿ ನಿರ್ಧರಿಸಲಾಯಿತು.
ಸಭೆಯಲ್ಲಿ ಸಮಾಜದ ಅಧ್ಯಕ್ಷ ಚೆಕ್ಕೇರ ಸೋಮಯ್ಯ, ಕಾರ್ಯದರ್ಶಿ ಸಿ.ಡಿ. ಮಾದಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.