ಸಿದ್ದಾಪುರ, ಮೇ 11: ಕಾಡಾನೆ ಧಾಳಿಗೆ ಸಿಲುಕಿ ಕಾರ್ಮಿಕ ನೋರ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ಹುಂಡಿಯ ಪಟ್ಟಮಾಡ ಬೆಳ್ಯಪ್ಪ ಎಂಬವರು ಕಾಫಿ ತೋಟದೊಳಗೆ ಕಾರ್ಮಿಕ ಕುಮಾರ (55) ಎಂಬವರು ಕೆಲಸದಲ್ಲಿ ಮಗ್ನರಾಗಿದ್ದ ಸಂದರ್ಭ ಕಾಫಿ ತೋಟದೊಳಗಿದ್ದ ಕಾಡಾನೆಗಳ ಹಿಂಡಿನ ಪೈಕಿ ಕಾಡಾನೆಯೊಂದು ಏಕಾಏಕಿ ಕುಮಾರನ ಬಳಿ ಬಂದು ಆತನನ್ನು ಸೊಂಡಿಲಿನಿಂದ

(ಮೊದಲ ಪುಟದಿಂದ) ಎಳೆದು ಕೆಳಗೆ ಬೀಳಿಸಿ ಕಾಲಿನಿಂದ ಬೆನ್ನಿನ ಭಾಗಕ್ಕೆ ತುಳಿದಿದೆ. ಪರಿಣಾಮ ಬೆನ್ನಿನ ಹಿಂಬಾಗದ ಮೂಳೆ ಮುರಿದಿದೆ. ಅಲ್ಲದೆ ಕಾಲಿಗೂ ಗಾಯವಾಗಿದೆ.ಈ ಸಂದರ್ಭದಲ್ಲಿ ಕುಮಾರ ಕಿರುಚಿಕೊಂಡಾಗ ಸಮೀಪದಲ್ಲಿದ್ದ ಕಾರ್ಮಿಕರು ಬೊಬ್ಬೆ ಇಟ್ಟರು. ಕಾರ್ಮಿಕರ ಕೂಗಾಡುತ್ತಿರುವ ಶಬ್ಧವನ್ನು ಕೇಳಿದ ಕಾಡಾನೆಯು ಕುಮಾರನನ್ನು ಉರುಳಿಸಿ ತೋಟದಲ್ಲೇ ಬಿಟ್ಟು ತನ್ನ ಮರಿಯೊಂದಿಗೆ ತೋಟದಿಂದ ಇನ್ನೊಂದು ತೋಟಕ್ಕೆ ಓಡಿತೆಂದು ಪ್ರತ್ಯಕ್ಷದರ್ಶಿಗಳು ‘ಶಕ್ತಿ’ಗೆ ತಿಳಿಸಿದರು.ಬೆನ್ನಿನ ಮೂಳೆ ಮುರಿದಿರುವ ಕಾರ್ಮಿಕ ಕುಮಾರನನ್ನು ಅವರ ಪತ್ನಿ ಹಾಗೂ ಇತರ ಕಾರ್ಮಿಕರು ಸೇರಿ ಎತ್ತಿಕೊಂಡು ಬಂದು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿದರು. ಸಮುದಾಯ ಆರೋಗ್ಯ ಕೇಂದ್ರ ವೈದ್ಯರು ಪರಿಶೀಲಿಸಿ ಗಂಭೀರ ಗಾಯಗೊಂಡಿರುವ ಕುಮಾರನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಸ್ಥಳಕ್ಕೆ ಆರ್‍ಎಫ್‍ಓ ಅಶೋಕ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಗಣಪತಿ, ದೇವಯ್ಯ ಭೇಟಿ ನೀಡಿ ಪರಿಶೀಲಿಸಿದರು.

-ವಾಸು