ಮಡಿಕೇರಿ, ಮೇ 11: ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾನಕ್ಕೆ ಮುನ್ನ ದಿನವಾದ ಶುಕ್ರವಾರ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಮಸ್ಟರಿಂಗ್ ಕಾರ್ಯ ನಡೆಯಿತು.ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ 538 ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳು ತಲುಪಿದ್ದು, ಮೇ 12 ರಂದು ನಡೆಯುವ ಮತದಾನಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ನಗರದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾದ ಉಪ ವಿಭಾಗಾಧಿಕಾರಿ ರಮೇಶ್ ಪಿ.ಕೋನರೆಡ್ಡಿ ಅವರ ಮೇಲ್ವಿಚಾರಣೆಯಲ್ಲಿ ಹಾಗೂ ವೀರಾಜಪೇಟೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ರಾಜು ಅವರ ಮೇಲ್ವಿಚಾರಣೆಯಲ್ಲಿ ಚುನಾವಣಾ ಸಾಮಾನ್ಯ ವೀಕ್ಷP ಟಿ. ಶ್ರೀಕಾಂತ್ ಉಪಸ್ಥಿತಿಯಲ್ಲಿ ಮಸ್ಟರಿಂಗ್ ಕಾರ್ಯವು ಸುಗಮವಾಗಿ ನಡೆಯಿತು.
ನಗರದ ಸಂತ ಜೋಸೆಫರ ಕಾಲೇಜು ಮತ್ತು ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಚುನಾವಣಾ ಕಾರ್ಯದಲ್ಲಿ ನಿಯೋಜಿತರಾಗಿರುವ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು, ಪೋಲಿಂಗ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಮಾವಣೆಗೊಂಡು ಅತ್ಯಂತ ಅಚ್ಚುಕಟ್ಟಾಗಿ
(ಮೊದಲ ಪುಟದಿಂದ) ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾರೋಪಾದಿಯಲ್ಲಿ ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಿಸಿದರು. ಮತಗಟ್ಟೆಗಳಿಗೆ ತೆರಳುವ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು, ಪೋಲಿಂಗ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಲು ಪ್ರತ್ಯೇಕವಾಗಿ ಕೌಂಟರ್‍ಗಳನ್ನು ತೆರೆಯಲಾಗಿತ್ತು. ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸುಗಮವಾಗಿ ತಮ್ಮ ತಮ್ಮ ಮತಗಟ್ಟೆಗಳಿಗೆ ತಂಡಗಳೊಂದಿಗೆ ತೆರಳಲು ಅನುಕೂಲವಾಗುವಂತೆ ನಾಮಫಲಕಗಳಲ್ಲಿ ವಿವರಗಳನ್ನು ಪ್ರಕಟಿಸಲಾಗಿತ್ತು. ಅಲ್ಲದೆ ಪ್ರತ್ಯೇಕ ಕೌಂಟರ್‍ಗಳನ್ನು ತೆರೆದು ಪಿ.ಆರ್.ಓ, ಎ.ಪಿ.ಆರ್.ಓ ಮತ್ತು ಪೋಲಿಂಗ್ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು.
ಮಡಿಕೇರಿಯ ಸಂತ ಜೋಸೆಫರ ಕಾಲೇಜು ಮತ್ತು ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿಂದು ನಡೆದ ಮಸ್ಟರಿಂಗ್ ಕಾರ್ಯದಲ್ಲಿ ಎಲ್ಲಿ ನೋಡಿದರೂ ಅಧಿಕಾರಿ ಮತ್ತು ಸಿಬ್ಬಂದಿ, ಮತಯಂತ್ರ ಹಾಗೂ ಚುನಾವಣಾ ಸಾಮಗ್ರಿಗಳನ್ನು ಹಿಡಿದು ವಾಹನಗಳತ್ತ ಸಾಗುವ ದೃಶ್ಯ ಕಂಡುಬಂದಿತು.
ಮಸ್ಟರಿಂಗ್ ಕಾರ್ಯದಲ್ಲಿ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ ಯಾವದೇ ಕೊರತೆ ಬರದಂತೆ ನೋಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದರು.
ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ವ್ಯೂವಿಂಗ್, ವಿಡಿಯೋ ಸರ್ವಿಲೆನ್ಸ್, ಚೆಕ್‍ಪೋಸ್ಟ್, ಸೆಕ್ಟರ್ ಅಧಿಕಾರಿಗಳು, ಮೈಕ್ರೋ ವೀಕ್ಷಕರು, ಮತಗಟ್ಟೆ ಅಧಿಕಾರಿಗಳು, ಸಂಚಾರಿ ಅಧಿಕಾರಿಗಳ ತಂಡಗಳನ್ನು ನಿಯೋಜಿಸಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ನಿರಂತರವಾಗಿ ಶ್ರಮ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಿ ಮತದಾರರು ನಿರ್ಭೀತಿಯಿಂದ ಮತ ಹಕ್ಕು ಚಲಾಯಿಸಲು ಕ್ರಮವಹಿಸಲಾಗಿದೆ. ಇದಲ್ಲದೆ ಜಿಲ್ಲಾ ಶಸಸ್ತ್ರ ಪಡೆ, ಪ್ರತಿ ಮತಗಟ್ಟೆಗಳಲ್ಲಿ ಪೊಲೀಸ್ ಅಥವಾ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಶಾಂತಿಯುತ ಮತದಾನಕ್ಕೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಹೇಳಿದರು.
ವಿಧಾನಸಭಾ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಒಟ್ಟು 84 ಕೆ.ಎಸ್.ಅರ್.ಟಿ.ಸಿ ಬಸ್, 39 ಮಿನಿ ಬಸ್, 33 ಮ್ಯಾಕ್ಸಿ ಕ್ಯಾಬ್, 88 ಜೀಪು ವ್ಯವಸ್ಥೆ ಮಾಡಲಾಗಿದೆ ಒಟ್ಟು 207 ಮಾರ್ಗಗಳನ್ನು ಒಳಗೊಂಡಿದೆ.
ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 538 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಮತಗಟ್ಟೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು 538 ಪಿಆರ್‍ಒ, 538 ಎಪಿಆರ್‍ಒ ಹಾಗೂ 1614 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹಾಗೆಯೇ ಹೆಚ್ಚುವರಿಯಾಗಿ ಶೇ.20 ರಷ್ಟು ಸಿಬ್ಬಂದಿ ಕಾಯ್ದಿರಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ 4,33,846 ಮಂದಿ ಮತದಾರರು ಇದ್ದಾರೆ. ಇವರಲ್ಲಿ 2,16,112 ಮಂದಿ ಪುರುಷರು ಮತ್ತು 2,17,717 ಮಂದಿ ಮಹಿಳಾ ಮತದಾರರು, ಹಾಗೆಯೇ 17 ಮಂದಿ ಇತರೆ ಮತದಾರರು ಇದ್ದಾರೆ. ಹೊಸ ಮತದಾರರು 8,823 ಮಂದಿ ಸೇರ್ಪಡೆಗೊಂಡಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,16,937 ಮಂದಿ ಮತದಾರರು ಇದ್ದು, ಇವರಲ್ಲಿ 1,07,532 ಮಂದಿ ಪುರುಷ ಮತದಾರರು ಹಾಗೂ 1,09,399 ಮಂದಿ ಮಹಿಳಾ ಮತದಾರರು, ಹಾಗೆಯೇ 6 ಮಂದಿ ಇತರೆ ಮತದಾರರು ಇದ್ದಾರೆ.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,16,909 ಮಂದಿ ಮತದಾರರು ಇದ್ದು, 1,08,580 ಮಂದಿ ಪುರುಷ ಮತ್ತು 1,08,318 ಮಹಿಳಾ ಮತದಾರರು, ಹಾಗೆಯೇ 11 ಮಂದಿ ಇತರೆ ಮತದಾರರು ಇದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಗುರುತಿನ ಚೀಟಿ ಇಲ್ಲದೇ ಇದ್ದರೆ, ಮಾನ್ಯತೆ ಪಡೆದ 12 ಬಗೆಯ ಯಾವದಾರೂ ಒಂದು ಗುರುತಿನ ಚೀಟಿ ಹಾಜರುಪಡಿಸಿ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ.
ನಗರದ ಸಂತ ಜೋಸೆಫರ ಶಾಲೆಯಲ್ಲಿಂದು ನಡೆದ ಮಸ್ಟರಿಂಗ್ ಕಾರ್ಯದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಚುನಾವಣಾ ವೀಕ್ಷಕ ಟಿ. ಶ್ರೀಕಾಂತ್, ಪೊಲೀಸ್ ವೀಕ್ಷಕ ಸತ್ಯಜಿತ್ ನಾಯ್ಕ್, ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಪ್ರೊಬೆಷನರಿ ಡಿ.ಸಿ. ಯತೀಶ್, ಡಿವೈಎಸ್‍ಪಿ ಸುಂದರರಾಜ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ರಮೇಶ್ ಪಿ.ಕೊನರೆಡ್ಡಿ, ತಹಶೀಲ್ದಾರ್ ಶಾರದಾಂಭ, ತರಬೇತಿದಾರರಾದ ಷಂಶುದ್ದೀನ್ ಇತರರು ಇದ್ದರು.
ವೀರಾಜಪೇಟೆ ವರದಿ
ತಾ. 12ರಂದು (ಇಂದು) ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಮಸ್ಟರಿಂಗ್ ರೋಲ್, ಚುನಾವಣಾಧಿಕಾರಿ ಕೆ.ರಾಜು ಅವರ ನೇತೃತ್ವದಲ್ಲಿ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ಹಮ್ಮಿಕೊಳ್ಳಲಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ಪರಿಷ್ಕøತ ಮತದಾರರ ಪಟ್ಟಿ ಸೇರಿದಂತೆ ಒಟ್ಟು 2,12,746 ಮತದಾರರಿದ್ದು ಕ್ಷೇತ್ರದಲ್ಲಿ 269 ಮತಗಟಗಟ್ಟೆಗಳಿವೆ. ಈ ಪೈಕಿ 47 ಸೂಕ್ಷ್ಮ ಮತಗಟ್ಟೆಗಳು ಹಾಗೂ 11ಮತಗಟ್ಟೆಗಳು ನಕ್ಸಲ್ ಪೀಡಿತ ಮತಗಟ್ಟೆಗಳೆಂದು ಗುರುತಿಸಲಾಗಿದೆ. 269 ಮತಗಟ್ಟೆಗಳಿಗೆ ತಲಾ ಒಂದು ಮತಗಟ್ಟೆಗೆ, ಮತಗಟ್ಟೆ ಚುನಾವಣಾಧಿಕಾರಿ ಸೇರಿ 5 ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ನಾಳೆಯ ಮತದಾನದಲ್ಲಿ ಒಟ್ಟು 1500 ಸಿಬ್ಬಂದಿಗಳು ಸೇವೆ ಸಲ್ಲಿಸಲಿದ್ದಾರೆ ಎಂದು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಆರ್.ಗೋವಿಂದರಾಜು ತಿಳಿಸಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಸಂಪಾಜೆಯ ಮುನ್ರೋಟ್‍ನಿಂದ ಕುಟ್ಟದವರೆಗೆ, ಆನೆಚೌಕೂರು ನೆಲ್ಲಿಹುದಿಕೇರಿ ಸಿದ್ದಾಪುರ ಮಾಲ್ದಾರೆ ಒಳಗೊಂಡಂತೆ ಮಾಕುಟ್ಟದವರೆಗೆ ಕ್ಷೇತ್ರ 130 ಕಿ.ಮಿ. ವಿಸ್ತೀರ್ಣವನ್ನು ಹೊಂದಿದೆ. ಒಟ್ಟು 269 ಮತಗಟ್ಟೆಗೆ ಶೇಕಡ 20ರಷ್ಟು ಅಧಿಕ ಸಿಬ್ಬಂದಿಗಳಿದ್ದು, ವಿ.ವಿ.ಪ್ಯಾಟ್, ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್‍ಗಳನ್ನು ತಲಾ ಒಂದರಂತೆ ವಿತರಿಸಲಾಗಿದೆ. ಮತಯಂತ್ರಗಳಲ್ಲಿ ದೋಷ ಕಂಡು ಬಂದರೆ ತಕ್ಷಣ ಬದಲಾವಣೆಗೂ ಅವಕಾಶ ಮಾಡಿಕೊಡಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ6ರವರೆಗೆ ಶಾಂತಿಯುತ ಮತದಾನಕ್ಕೆ ಸಿದ್ದತೆ ಮಾಡಲಾಗಿದೆ ಎಂದು ಗೋವಿಂದರಾಜ್ ತಿಳಿಸಿದರು.
ಚುನಾವಣೆ ಸಿದ್ಧತೆಗಾಗಿ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಸೇರಿದಂತೆ ಒಟ್ಟು 150 ವಾಹನಗಳನ್ನು ಬಳಸಲಾಗಿದೆ. ಮತಯಂತ್ರಗಳನ್ನು ಪಡೆಯಲು ಬೆಳಗಿನಿಂದಲೇ ನೂಕು ನುಗ್ಗಲು ಇದ್ದುದರಿಂದ ಸಿಬ್ಬಂದಿಗಳು ಸರದಿ ಪ್ರಕಾರ ಮತಯಂತ್ರಗಳನ್ನು ಪಡೆಯಬೇಕಾಯಿತು. ಚುನಾವಣಾ ಎಲ್ಲ ಸಿಬ್ಬಂದಿಗಳಿಗೂ ಮೈದಾನದ ಒಂದು ಭಾಗದಲ್ಲಿ ಊಟ ಉಪಹಾರವನ್ನು ವ್ಯವಸ್ಥೆಗೊಳಿಸಲಾಗಿತ್ತು.