ಮಡಿಕೇರಿ, ಮೇ 11 : ಬೆಳಿಗ್ಗೆಯಿಂದ ಅಪರಾಹ್ನದ ತನಕ ಬಿಸಿಲಿನ ವಾತಾವರಣದೊಂದಿಗೆ ಬೇಸಿಗೆಯ ಸಹಜತೆ ಕಂಡು ಬರುತ್ತಿದೆಯಾದರೂ, ಅಪರಾಹ್ನದ ನಂತರ ಅಥವಾ ಸಂಜೆ ವೇಳೆಯಲ್ಲಿ ಉಂಟಾಗುತ್ತಿರುವ ವಾತಾವರಣದ ಏರು-ಪೇರು ಜಿಲ್ಲೆಯ ವಿವಿಧೆಡೆಗಳಲ್ಲಿ ಜನತೆಯನ್ನು ಕಂಗೆÀಡೆಸುತ್ತಿದೆ. ಕಳೆದ ಹಲವು ದಿನಗಳಿಂದ ಜಿಲ್ಲೆಯ ಒಂದಲ್ಲಾ ಒಂದು ಕಡೆಯಲ್ಲಿ ಅಪರಾಹ್ನದ ನಂತರ ಇದ್ದಕ್ಕಿದ್ದಂತೆ ಮೋಡ ಕವಿದ ವಾತಾವರಣ ದೊಂದಿಗೆ ಕತ್ತಲೆಯ ಛಾಯೆ ಸೃಷ್ಟಿಯಾಗುತ್ತದೆ, ಮಾತ್ರವಲ್ಲದೆ ಗುಡುಗು - ಮಿಂಚಿನ ಸಹಿತ ಸುರಿಯುತ್ತಿರುವ ಭಾರೀ ಮಳೆ ಜನತೆಯಲ್ಲಿ ಆತಂಕ ಮೂಡಿಸುತ್ತಿದೆ. ರಾಜ್ಯ ವಿಧಾನಸಭೆಯ ಚುನಾವಣೆ ತಾ. 12ರಂದು (ಇಂದು) ನಡೆಯಲಿದ್ದು, ಇದಕ್ಕೆ ಮುನ್ನ ಕೆಲವು ದಿನಗಳಿಂದ ಉಂಟಾಗಿದ್ದ ಬದಲಾವಣೆ ವಿವಿಧ ರಾಜಕೀಯ ಪಕ್ಷಗಳು, ಸ್ಪರ್ಧಿಗಳು ಸೇರಿದಂತೆ ಅಭ್ಯರ್ಥಿಗಳಿಗೆ ಮತ ಪ್ರಚಾರಕ್ಕೆ ತೀರಾ ಅಡಚಣೆಯುಂಟು ಮಾಡಿದೆ. (ಮೊದಲ ಪುಟದಿಂದ) ವಿಶಾಲವಾದ ಎರಡು ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲು ವಾತಾವರಣದ ಅಸಹಜತೆ ಅಡ್ಡಿಪಡಿಸಿದೆ. ಚುನಾವಣೆಯ ವಿಚಾರ ಒಂದೆಡೆಯಾದರೆ, ಬೇಸಿಗೆಯ ಈ ಪರ್ವಕಾಲದಲ್ಲಿ ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವ ಕ್ರೀಡಾಕೂಟಗಳ ಸಂಭ್ರಮಕ್ಕೂ ಮಳೆಯಿಂದ ತೊಂದರೆಯಾಗಿದೆ. ಅದರಲ್ಲೂ ಪ್ರಸ್ತುತ ಜಿಲ್ಲೆಯ ಪ್ರತಿಷ್ಠಿತ ಕ್ರೀಡಾಕೂಟವಾದ ಕೊಡವ ಕೌಟುಂಬಿಕ ಹಾಕಿ ಉತ್ಸವ ನಾಪೋಕ್ಲುವಿನಲ್ಲಿ ಹಾಗೂ ಕ್ರಿಕೆಟ್ ಉತ್ಸವ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯುತ್ತಿದ್ದು, ಈ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ದೂರ ದೂರದ ಊರುಗಳಿಂದ ಆಗಮಿಸುತ್ತಿರುವ ಕುಟುಂಬದವರು ಪರದಾಡುವಂತಾಗಿದೆ. ಸಂಘಟಿಕರಿಗೂ ಪಂದ್ಯಾವಳಿಯನ್ನು ಪೂರೈಸುವದು ಪ್ರಯಾಸಕರವಾಗುತ್ತಿದೆ. ಅದರಲ್ಲೂ ಅಪರಾಹ್ನದ ನಂತರ ಯಾವದೇ ಪಂದ್ಯಗಳನ್ನು ನಡೆಸುವದು ದುಸ್ತರವೆನಿಸಿದೆ.
ನಾಪೋಕ್ಲುವಿಗೆ 11.24 ಇಂಚು
ನಾಪೋಕ್ಲು ಪಟ್ಟಣ ಹಾಗೂ ಸುತ್ತಮುತ್ತಲಿನಲ್ಲಿ ಅಧಿಕ ಮಳೆಯಾಗಿರುವ ಕುರಿತು ವರದಿಯಾಗಿದೆ. ಇಲ್ಲಿಗೆ ಬಹುತೇಕ ದಿನಂಪ್ರತಿ ಮಳೆಯಾಗುತ್ತಿದೆ. ಈ ತನಕ ನಾಪೋಕ್ಲುವಿಗೆ ಒಟ್ಟು 11.24 ಇಂಚಿನಷ್ಟು ಮಳೆಯಾಗಿದೆ.
ಜಿಲ್ಲಾ ಕೇಂದ್ರ : ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಕಳೆದ ಹಲವು ದಿನಗಳಿಂದ ವಾಯು ವರುಣನ ಅಬ್ಬರ ಮಾತ್ರವಲ್ಲದೆ ಗುಡುಗು ಮಿಂಚಿನ ರಭಸ ಜನತೆಯನ್ನು ಬೆಚ್ಚಿ ಬೀಳಿಸುತ್ತಿದೆ. ನಿನ್ನೆ ಅಪರಾಹ್ನ ಸಾಧಾರಣ ಮಟ್ಟಿಗೆ ಮಳೆಯಾಗಿ ಬಳಿಕ ವಿರಾಮ ಕಂಡುಬಂದಿತಾದರೂ, ರಾತ್ರಿ 8.30ರ ವೇಳೆಗೆ ಇದ್ದಕ್ಕಿದ್ದಂತೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಾರಂಭಿಸಿತು. ಇದರೊಂದಿಗೆ ಗುಡುಗು - ಮಿಂಚಿನ ಆರ್ಭಟದಿಂದಾಗಿ ನಗರದಲ್ಲಿದ್ದವರು ಮನೆ ಸೇರಿಕೊಳ್ಳಲು ಆತಂಕ ಪಡುವಂತಾಗಿತ್ತು.
ಮಳೆಯಿಂದಾಗಿ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಇದಲ್ಲದೆ, ಯು.ಜಿ.ಡಿ. ಕಾಮಗಾರಿಯ ಪರಿಣಾಮದಿಂದಾಗಿ ಮೊದಲೇ ಹಾಳಾಗಿರುವ ರಸ್ತೆಗಳು, ಚರಂಡಿಗಳಲ್ಲಿ ನೀರು ನಿಂತು ಜನ ಹಾಗೂ ವಾಹನ ಓಡಾಟಕ್ಕೆ ತೀರಾ ಅಡಚಣೆಯಾಗಿತ್ತು.
ವಿದ್ಯುತ್ ಉಪಕರಣಗಳಿಗೆ ಹಾನಿ ಸಿಡಿಲು - ಮಿಂಚಿನಿಂದಾಗಿ ಮಡಿಕೇರಿ ನಗರದ ಹಲವೆಡೆ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿರುವ ಕುರಿತು ತಿಳಿದು ಬಂದಿದೆ. ದೇಚೂರು, ಗೌಳಿಬೀದಿ ವಿಭಾಗದಲ್ಲಿ ಎಲ್.ಇ.ಡಿ., ಸಿ.ಸಿ. ಟಿ.ವಿ. ಕೆಮರಾ, ಫ್ರಿಡ್ಜ್ ಸೇರಿದಂತೆ ಹಲವು ಉಪಕರಣಗಳಿಗೆ ಹಾನಿಯಾಗಿದೆ. ಇನ್ನು ಕೆಲವೆಡೆಗಳಲ್ಲಿ ಈ ಸಂದರ್ಭ ವಿದ್ಯುತ್ ಕಡಿತಗೊಂಡಿದ್ದರಿಂದ ಉಂಟಾಗಿರುವ ಹಾನಿಯ ಕುರಿತು ಖಚಿತ ಪಟ್ಟಿಲ್ಲ. ತಾ. 11ರಂದು ಅಪರಾಹ್ನದ ತನಕ ವಿದ್ಯುತ್ ಉಪಕರಣಗಳು ಹಾನಿಗೀಡಾಗಿರುವ 12ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿರುವದಾಗಿ ನಗರದ ಉದ್ಯಮಿ ವ್ಯಾಂಡಮ್ ಎಂಟರ್‍ಪ್ರೈಸಸ್ ದಾಮೋದರ್ ಅವರು ತಿಳಿಸಿದ್ದಾರೆ. ನಿನ್ನೆ ಒಂದು ದಿನದಲ್ಲೇ ಮಡಿಕೇರಿ ನಗರಕ್ಕೆ 2.17 ಇಂಚಿನಷ್ಟು ಮಳೆಯಾಗಿದೆ.
ಕುಶಾಲನಗರ, ಕೂಡಿಗೆ, ಭಾಗಮಂಡಲ ಸೇರಿದಂತೆ ಇನ್ನೂ ಹಲವೆಡೆಗಳಲ್ಲಿ ತಾ. 11ರಂದು ಮಳೆಯಾಗಿರುವ ಕುರಿತು ‘ಶಕ್ತಿ’ಗೆ ತಿಳಿದುಬಂದಿದೆ. ತಾ. 12ರಂದು (ಇಂದು) ಮತದಾನ ನಡೆಯಲಿದ್ದು, ವಾತಾವರಣ ಹೇಗಿರುತ್ತದೆಯೋ ಎಂಬ ಆತಂಕ ಜನತೆಯಲ್ಲಿ ಮನೆ ಮಾಡಿದೆ.
ಸುಂಟಿಕೊಪ್ಪ : ಇಲ್ಲಿಗೆ ಸಮೀಪದ ಕಾನ್‍ಬೈಲು ಬೈಚನ ಹಳ್ಳಿ ಗ್ರಾಮದ ಅನ್ನು ನಾಯ್ಕ ಅವರ ಕೊಟ್ಟಿಗೆ ಮೇಲೆ ನೇರಳೆ ಮರ ಬಿದ್ದು ಕೊಟ್ಟಿಗೆಯ ಮೇಲೆ ಅಳವಡಿಸಿದ್ದ 5 ಶೀಟು ಒಡೆದು ಹೋಗಿದ್ದು, ಕೊಟ್ಟಿಗೆಯ ಗೋಡೆ ಬಿರುಕು ಬಿಟ್ಟು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ಹೆಚ್.ಕೆ.ಶಿವಪ್ಪ, ಗ್ರಾಮ ಲೆಕ್ಕಾಧಿಕಾರಿ ಯಶವಂತ್ ಪÀರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಿದ್ದಾಪುರ : ಸಿದ್ದಾಪುರದಲ್ಲಿ ಶುಕ್ರವಾರ ಅಪರಾಹ್ನ 3 ಗಂಟೆಯ ನಂತರ ಸಂಜೆಯವರೆಗೂ ಗುಡುಗು ಸಿಡಿಲು ಸಹಿತ ಧಾರಕಾರ ಮಳೆ ಸುರಿಯಿತು. ಮಳೆಯಿಂದಾಗಿ ಚುನಾವಣೆಯ ಪ್ರಚಾರ ಸಂಬಂಧಿಸಿ ಮನೆ ಮನೆಗೆ ತೆರಳಬೇಕಾದ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ತಾ. 12ರಂದು (ಇಂದು) ನಡೆಯುವ ಚುನಾವಣೆಯ ಕೊನೆಯ ದಿನದಂದು ಮತಯಾಚನೆ ತೆರಳುವ ಕಾರ್ಯಕರ್ತರಿಗೆ ಧಾರಕಾರ ಮಳೆಯು ಅಡ್ಡಿಪಡಿಸಿತು. ಈತನ್ಮಧ್ಯೆ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಆತಂಕ ಮನೆ ಮಾಡಿದೆ. ಮಳೆಯ ರಭಸದಿಂದಾಗಿ ಮತಯಾಚನೆಗೆ ತೆರಳುವ ಮಂದಿ ಗ್ರಾಮಗಳಿಗೆ ತೆರಳದೇ ಪಟ್ಟಣ ವ್ಯಾಪ್ತಿಯ ಅಂಗಡಿಗಳ ಬಳಿ ಸುತ್ತಾಡುತ್ತಿರುವ ದೃಶ್ಯ ಕಂಡು ಬಂತು.
- ವರದಿ : ವಿನ್ಸೆಂಟ್, ವಾಸು, ಶಶಿ ಸೋಮಯ್ಯ