ವೀರಾಜಪೇಟೆ, ಮೇ 16: ವೀರಾಜಪೇಟೆ ಕ್ಷೇತ್ರದಲ್ಲಿ ಕೆ.ಜಿ. ಬೋಪಯ್ಯ ಅವರು ಆಯ್ಕೆಯಾಗಿರುವದು, ಅದರಲ್ಲೂ ನಿರೀಕ್ಷೆಗೂ ಮೀರಿ ಹೆಚ್ಚಿನ ಮತದಿಂದ ಆರಿಸಿ ಬಂದಿರುವದು ಅವರು ಶಾಸಕರಾಗಿ ಎರಡು ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಕ್ಕೆ ಸಂದ ಜಯ ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಕುಂಞಂಗಂಡ ಅರುಣ್ ಭೀಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಬೋಪಯ್ಯ ಅವರ ಬಗ್ಗೆ ತಾಲೂಕಿನ ಹಲವೆಡೆ ಹಲವರು ಜಾತಿಯ ವಿಷ ಬೀಜವನ್ನು ಬಿತ್ತುವ ಯತ್ನ ಮಾಡಿದ್ದರು. ಆದರೂ ಪ್ರಬುದ್ಧ ಮತದಾರರು ಇದಕ್ಕೆ ಕಿವಿಗೊಡದೆ ಬೋಪಯ್ಯ ಅವರನ್ನು ಮರು ಆಯ್ಕೆ ಮಾಡಿದ್ದಾರೆ. ಜಾತಿವಾದ ನಡೆಯದು ಎಂಬದಕ್ಕೆ ಕ್ಷೇತ್ರದ ಜನರು ಉತ್ತರ ನೀಡಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅರುಣ್ ಭೀಮಯ್ಯ ಬಣ್ಣಿಸಿದ್ದಾರೆ.