ಕೂಡಿಗೆ, ಮೇ 16: ಹಾರಂಗಿ ಅಣೆಕಟ್ಟೆಯ ನಿರ್ಮಾಣದಿಂದ ಮುಳುಗಡೆಗೊಂಡ ಅತ್ತೂರು ಗ್ರಾಮದ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಚ್‍ಪಿ ಹೊಸ ಮಾದರಿಯ ವಿದ್ಯುದ್ಧೀಕರಣದ ಹೊಸ ಯೋಜನೆಯ ಕಾಮಗಾರಿ ನಡೆಸಲು ಟೆಂಡರ್ ಪಡೆದ ಗುತ್ತಿಗೆದಾರ ವಿದ್ಯುತ್ ಕಂಬಗಳನ್ನು ಸಮರ್ಪಕವಾಗಿ ಗಟ್ಟಿಯಾದ ಜಾಗದಲ್ಲಿ ಅಳವಡಿಸದ ಪರಿಣಾಮ 50ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಾರಂಗಿ ಜಲಾಶಯದ ನಿರ್ಮಾಣದ ಸಂದರ್ಭ ಮುಳುಗಡೆಯಾದ ಅತ್ತೂರು ಪ್ರದೇಶದ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಿ ನಿವೇಶನ ಹಾಗೂ ಬೇಸಾಯ ಮಾಡಲು ಕಲ್ಪಿಸಿದ ಜಾಗಕ್ಕೆ ಮತ್ತು ಆ ಪ್ರದೇಶದಲ್ಲಿ ಈಗಾಗಲೇ ವಾಸವಿರುವ ನೂರಾರು ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ಗ್ರಾಮಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಿತ್ತು. ಇಪ್ಪತ್ತೈದು ವರ್ಷಗಳಿಂದ ಗ್ರಾಮಸ್ಥರು ಹೋರಾಟ ಮಾಡಿದ ಫಲವಾಗಿ ಇದೀಗ ಅತ್ತೂರು ಗ್ರಾಮವು ಕಂದಾಯ ಗ್ರಾಮವಾಗಿದ್ದು, ಈ ಗ್ರಾಮಕ್ಕೆ ಹೊಸ ಯೋಜನೆಯಾದ ಹೆಚ್‍ಪಿ ಮಾದರಿಯ ವಿದ್ಯುದ್ಧೀಕರಣದ ಯೋಜನೆಯಡಿಯಲ್ಲಿ ಹಾರಂಗಿಯಿಂದ ಅತ್ತೂರಿನವರೆಗೆ ಇರುವ ಗ್ರಾಮಗಳನ್ನು ವಿದ್ಯುದ್ಧೀಕರಣ ಮಾಡುವ ಹೊಸ ಯೋಜನೆಯನ್ನು ಪ್ರಾರಂಭಿಸಿ, ಹೆಚ್‍ಪಿ ಹೊಸ ಮಾದರಿಯ ಕಾಮಗಾರಿಗೆ ಕಾವೇರಿ ನೀರಾವರಿ ನಿಗಮವು ಚೆಸ್ಕಾಂ ಇಲಾಖೆಗೆ ರೂ. 72 ಲಕ್ಷ ಹಣವನ್ನು ನೀಡಿದ್ದು, ಚೆಸ್ಕಾಂ ವತಿಯಿಂದ ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆಯಲಾಗಿ ಚಾಮರಾಜನಗರ ಜಿಲ್ಲೆಯ ಗುತ್ತಿಗೆದಾರ ರೂ. 62 ಲಕ್ಷಕ್ಕೆ ಗುತ್ತಿಗೆ ಪಡೆದಿದ್ದು, ಈಗಾಗಲೇ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.
ಹಿನ್ನೆಲೆಯಲ್ಲಿ ಹಾರಂಗಿಯಿಂದ ಅತ್ತೂರು ಗ್ರಾಮದವರೆಗೆ 11 ಕೆವಿ, ವಿದ್ಯುತ್ ತಂತಿಯನ್ನು ಎಳೆಯಲು 400ಕ್ಕೂ ಹೆಚ್ಚು ಕಂಬಗಳನ್ನು ನಿಲ್ಲಿಸಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಾಗಿ 50ಕ್ಕೂ ಅಧಿಕ ಕಂಬಗಳು ನೆಲಕ್ಕುರುಳಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ರಸ್ತೆ, ಚರಂಡಿ ತೆಗೆದ ಬಲಭಾಗಕ್ಕೆ ಕಂಬಗಳು ನೆಲಕ್ಕೆ ಬಿದ್ದಿವೆ. ಎಡ ಭಾಗದಲ್ಲಿರುವ ಮನೆಗಳ ಮೇಲೆ ಬಿದ್ದಿದ್ದರೆ ಭಾರಿ ಅನಾಹುತಗಳಾಗುತ್ತಿತ್ತು ಎಂದು ಹೇಳಿದ್ದಾರೆ.
ಅದೇ ರೀತಿಯಿಂದ ಗುಡ್ಡೆಹೊಸೂರಿನಿಂದ ಅತ್ತೂರಿನವರೆಗೆ ವಿದ್ಯುತ್ ಕಂಬ ಅಳವಡಿಸಿ, ತಂತಿಗಳನ್ನು ಜೋಡಿಸಿ ವಿದ್ಯುತ್ ನೀಡುವ ವ್ಯವಸ್ಥೆಗೆ ಭಾರಿ ಹಣದ ಟೆಂಡರ್ ಆಗಿದ್ದರೂ ಗುತ್ತಿಗೆದಾರ ಮನಬಂದಂತೆ ಕಂಬಕ್ಕೆ ತಂತಿ ಎಳೆಯುವ ಜಾಗದಲ್ಲಿ ಮರದ ರೆಂಬೆಗಳನ್ನು ಕಟಾವು ಮಾಡದೇ, ನೂತನ ರಸ್ತೆಯ ಬದಿಯಲ್ಲಿ ಭದ್ರತೆಗಾಗಿ ಹಾಕಿದ್ದ ಮಣ್ಣಿನ ಮೇಲೆ ಕಂಬಗಳನ್ನು ನಿಲ್ಲಿಸಿರುವದು ಸರಿಯಾದ ಕ್ರಮವಲ್ಲ. ಇದಕ್ಕೆ ಸಂಬಂಧಪಟ್ಟಂತೆ ಮೇಲುಸ್ತುವಾರಿ ವಹಿಸಿರುವ ನೀರಾವರಿ ಇಲಾಖೆ ಹಾಗೂ ಕುಶಾಲನಗರ ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಇದರತ್ತ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಲವನಂಜಪ್ಪ, ಹೆಚ್.ಎಂ. ಯೋಗೇಶ್, ಸಚಿನ್, ಶ್ರೀನಿವಾಸ್, ರಾಜಮಣಿ, ದಿವಾಕರ್ ಆರೋಪಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕುಶಾಲನಗರ ಚೆಸ್ಕಾಂ ಅಧಿಕಾರಿಯನ್ನು ಸಂಪರ್ಕಿಸಿದಾಗ ಬಹುಮುಖ್ಯವಾದ ವಿದ್ಯುತೀಕರಣ ಕಾಮಗಾರಿ ಇದಾಗಿರುವದಿಂದ ಗುತ್ತಿಗೆದಾರರಿಗೆ ಸಮರ್ಪಕವಾಗಿ ಕಾಮಗಾರಿ ನಡೆಸಲು ಸೂಚಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
- ಕೆ.ಕೆ.ನಾಗರಾಜಶೆಟ್ಟಿ