ಮಡಿಕೇರಿ, ಮೇ 16 : ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ (ಲಿವಿಂಗ್ ಎಂಟಿಟಿ ವಿದ್ ಲೀಗಲ್ ಪರ್ಸನ್ ಸ್ಟಟಸ್)ಕ್ಕಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ವಾಹನ ಜಾಥಾ ಮೇ 24ರಂದು ತಲಕಾವೇರಿಯಿಂದ ಆರಂಭವಾಗಲಿದೆ ಎಂದು ಸಿಎನ್‍ಸಿ ಅಧ್ಯಕ್ಷರಾದ ಎನ್.ಯು.ನಾಚಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. 24ರಂದು ತಲಕಾವೇರಿ ಯಲ್ಲಿ ಆರಂಭವಾಗಲಿರುವ ಜಾಥಾ ಜಲಾನಯನ ಪ್ರದೇಶದ ಜಿಲ್ಲೆಗಳಾದ ಕೊಡಗು, ಮೈಸೂರು, ಮಂಡ್ಯ, ಧರ್ಮಪುರಿ, ಸೇಲಂ, ಈರೋಡ್, ತಿರುಚರಾಪಳ್ಳಿ, ತಂಜಾವೂರು, ಶ್ರೀರಂಗಂ ಮೂಲಕ ಹಾದು ಅಂತಿಮವಾಗಿ ಕಾವೇರಿ ಮತ್ತು ಬಂಗಾಳಕೊಲ್ಲಿ ಸಂಗಮಿಸುವ ಪೂಂಪುಹಾರ್‍ನಲ್ಲಿ ಸಮಾರೋಪ ಗೊಳ್ಳಲಿದೆ ಎಂದರು. ಕಾವೇರಿ ನದಿ ಹರಿಯುವ ಜಿಲ್ಲೆಗಳಲ್ಲಿ ಪ್ರತಿನಿತ್ಯ ಕೈಗೊಳ್ಳಬೇಕಾಗುತ್ತದೆ ಎಂದು ಪ್ರತಿಪಾದಿಸಿದರು.ಕಾವೇರಿ ನದಿ ವೇದ ಕಾಲದ ಏಳು ಪವಿತ್ರ ಜೀವನದಿಗಳಲ್ಲಿ ಒಂದಾಗಿದ್ದು, ವೇದ ಕಾಲದ ಸಪ್ತ ನದಿಗಳ ಕುರಿತಾಗಿರುವ ಸಂಸ್ಕøತ ಶ್ಲೋಕದಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ. ಭಾರತದಲ್ಲೂ ಹಿಂದೂ ದೇವತೆಗಳಿಗೆ ನೀಡಿರುವ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನವನ್ನು ಗಂಗಾ, ಯಮುನಾ ನದಿಗಳಿಗೆ ಉತ್ತರಾಖಂಡ ಸರಕಾರ ಹಾಗೂ ನರ್ಮದೆಗೆ ಮಧ್ಯಪ್ರದೇಶ ಸರಕಾರಗಳು ನೀಡಿದ್ದು, ಅದೇ ಮಾದರಿಯಲ್ಲಿ ಕಾವೇರಿ ನದಿಗೂ ಅಂತಹ ಶಾಸನಬದ್ಧ ಸ್ಥಾನಮಾನ ನೀಡಬೇಕು ಎಂದು ನಾಚಪ್ಪ ತಿಳಿಸಿದರು.
ಭಾರತೀಯರಿಗೆ ನದಿಗಳು ಕೇವಲ ನದಿಗಳಲ್ಲ. ಅವು ಅವರ ಮನೋಭೂಮಿಕೆಯಲ್ಲಿ ಮನುಷ್ಯ ರೂಪದಲ್ಲಿ ಸಾಕಾರಗೊಳ್ಳುವ ದೇವತೆಗಳಾಗಿದ್ದು, ಭಾರತೀಯ ನ್ಯಾಯ ಶಾಸ್ತ್ರದ ಪ್ರಕಾರ ಹಿಂದೂ ದೇವತೆಗಳು ‘ಲೀಗಲ್ ಪರ್ಸನಲ್’ಗಳಾಗಿವೆ. ಲೀಗಲ್ ಪರ್ಸನ್ ಅಂದರೆ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿರುವ ವ್ಯಕ್ತಿ ಎಂದರ್ಥವಾಗಿದ್ದು, ಅದರಂತೆ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ದೊರೆತಲ್ಲಿ ಕೊಡಗಿಗೆ ಹಲವಾರು ಪ್ರಯೋಜನ ಗಳನ್ನು ಪಡೆಯಬಹುದಾಗಿದೆ ಎಂದರು.
ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು 2017ರ ಮಾರ್ಚ್‍ನಲ್ಲೇ ಸಂಘಟನೆ ವಿಶ್ವಸಂಸ್ಥೆಯ ನದಿ ನೀರು ಹಂಚಿಕೆ ನ್ಯಾಯಮಂಡಳಿ ಯಿಂದ ಹಿಡಿದು ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಗೃಹಸಚಿವರು ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಜ್ಞಾಪನಾಪತ್ರ ರವಾನಿಸಿದ್ದು, ಇದೀಗ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಿಂದ ಸಮುದ್ರ ಸೇರುವ ಪೂಂಪ್‍ಹಾರ್‍ವರೆಗೆ ವಾಹನ ಜಾಥಾ ಆಯೋಜಿಸಲಾಗಿದೆ ಎಂದು ನಾಚಪ್ಪ ಮಾಹಿತಿ ನೀಡಿದರು.
ಸಿಎನ್‍ಸಿ ಸಂಘಟನೆಯ ಈ ಜಾಥಾ ಕಾವೇರಿಗೆ ಶಾಸನಬದ್ಧ ಸ್ಥಾನಮಾನ ಕೊಡಿಸುವದರೊಂದಿಗೆ ಅದರ ಸಂರಕ್ಷಣೆಗೆ ಕಾನೂನಿನ ಅಡಿಯಲ್ಲೇ ನಡೆಸುವ ಹೋರಾಟ ವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಬಾಚರಣಿಯಂಡ ಚಿಪ್ಪಣ್ಣ, ಪುಲ್ಲೇರ ಕಾಳಪ್ಪ, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶರಿನ್ ಹಾಗೂ ಅಪ್ಪೇಂಗಡ ಮಾಲೆ ಉಪಸ್ಥಿತರಿದ್ದರು.