ನಾಪೋಕ್ಲು, ಮೇ 16: ಕೊಡವ ಕುಟುಂಬಗಳ ನಡುವಿನ 22ನೇಯ ವರ್ಷದ ಕೌಟುಂಬಿಕ ಹಾಕಿ ಪಂದ್ಯಾಟ ಚುನಾವಣೆಯ ಭರಾಟೆ - ದಿನಂಪ್ರತಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಪ್ರಸಕ್ತ ವರ್ಷ ಹೆಚ್ಚು ಸಂಭ್ರಮ-ಸಡಗರಗಳಿಂದ ಗುರುತಿಸಿಕೊಳ್ಳದೆ ಮುಕ್ತಾಯದ ಹಂತದತ್ತ ತಲಪಿದೆ. ದಾಖಲೆಯ 333 ಕುಟುಂಬಗಳು ಭಾಗಿಯಾಗಿದ್ದ ಈ ಪಂದ್ಯಾವಳಿ ಪೂರ್ಣಗೊಳ್ಳಲು ಕೇವಲ ಮೂರು ದಿನಗಳಷ್ಟೆ ಬಾಕಿ ಉಳಿದಿವೆ.ಜಿಲ್ಲೆಯ ಇತರೆಡೆಗಳಿಗೆ ಕುಲ್ಲೇಟಿರ ಕಪ್ ಹಾಕಿ ಉತ್ಸವ ಹೆಚ್ಚು ಪ್ರಚಾರ ಕಾಣದಿದ್ದರೂ ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಮೂರನೇ ಪಂದ್ಯಾವಳಿಯ ಸವಿಯನ್ನು ಹಾಕಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
(ಮೊದಲ ಪುಟದಿಂದ) 333 ತಂಡಗಳ ಪೈಕಿ ಈಗಾಗಲೇ 325 ತಂಡಗಳು ನಿರ್ಗಮಿಸಿದ್ದು, ಕೇಲವ 8 ತಂಡಗಳು ಮಾತ್ರ ಕಪ್ ಗೆಲ್ಲುವ ಪೈಪೋಟಿಯಲ್ಲಿವೆ. ಈ ತನಕ ಕಪ್ ಗೆದ್ದಿರುವ ಹಾಗೂ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಹಲವು ಪ್ರತಿಷ್ಠಿತ ತಂಡಗಳು ಈ ಸಾಲಿನ ಪಂದ್ಯಾವಳಿಯಿಂದ ಹೊರಬಿದ್ದಿವೆ. ತೀವ್ರ ಮಳೆಯ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ಪಂದ್ಯಾಟ ಪೂರ್ಣಗೊಳಿಸಲು ಸಂಘಟಕರು ಪ್ರಯಾಸ ಪಡುತ್ತಿದ್ದಾರೆ. ಪಂದ್ಯಾವಳಿ ಈಗಾಗಲೇ ಕ್ವಾರ್ಟರ್ ಫೈನಲ್ ಹಂತ ತಲಪಿದ್ದು, ತಾ. 17ರಂದು (ಇಂದು) ಕ್ವಾರ್ಟರ್ ಫೈನಲ್ ನಡೆಯಲಿದೆ.
ಕ್ವಾರ್ಟರ್ ಫೈನಲ್ ಹಂತಕ್ಕೆ ಪಳಂಗಂಡ, ಚೇಂದಂಡ, ಅಂಜಪರುವಂಡ, ಬೊವೇರಿ ಯಂಡ, ಪರದಂಡ, ಸೋಮೆಯಂಡ ಹಾಗೂ ಚೆಪ್ಪುಡಿರ ತಂಡಗಳು ಅರ್ಹತೆ ಪಡೆದಿವೆ. ಆತಿಥೇಯ ಕುಲ್ಲೇಟಿರ ಹಾಗೂ ಕೂತಂಡ ತಂಡಗಳ ನಡುವಿನ ಪಂದ್ಯಾಟ ಬಾಕಿ ಉಳಿದಿದ್ದು, ಈ ಪಂದ್ಯದ ವಿಜೇತರು ಮತ್ತೊಂದು ತಂಡವಾಗಿ ಕ್ವಾರ್ಟರ್ ಫೈನಲ್‍ಗೆ ರಹದಾರಿ ಪಡೆಯಲಿದೆ. ಈ ಪಂದ್ಯ ತಾ. 16ರಂದು ನಡೆಯ ಬೇಕಿತ್ತಾದರೂ, ಮಳೆಯಿಂದಾಗಿ ಅನಿವಾರ್ಯವಾಗಿ ಮುಂದೂಡ ಲ್ಪಟ್ಟಿದ್ದು, ತಾ. 17ರಂದು ಈ ಪಂದ್ಯ ಜರುಗಲಿದೆ. ಮಾತ್ರವಲ್ಲದೆ ವಿಜೇತರು ಒಂದೇ ದಿನ ಎರಡು ಪಂದ್ಯವನ್ನಾಡಬೇಕಿದೆ.
ತಾ.16ರಂದು ನಡೆದ ಮಚ್ಚಂಡ ಮತ್ತು ಮುಕ್ಕಾಟಿರ (ಬೋಂದ) ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಟೈಬ್ರೇಕರ್‍ನಲ್ಲಿ ಮಚ್ಚಂಡ ತಂಡವನ್ನು 5-3 ಗೋಲಿನ ಅಂತರದಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ನಂತರ ನಡೆದ ಹಾಲಿ ಚಾಂಪಿಯನ್ ಚೇಂದಂಡ ತಂಡದ ನಡುವಿನ ಪಂದ್ಯದಲ್ಲಿ ಚೇಂದಂಡ ತಂಡವು 2-0 ಗೋಲಿನಿಂದ ಮುಕ್ಕಾಟಿರ ತಂಡವನ್ನು ಮಣಿಸಿತು. ಚೇಂದಂಡ ತಂಡದ ಪರ ಸೋನು, ಮೋಕ್ಷಿತ್ ತಲಾ ಒಂದೊಂದು ಗೋಲು ದಾಖಲಿಸಿದರು.
ಮುರುವಂಡ ಮತ್ತು ಮಾಜಿ ಚಾಂಪಿಯನ್ ಪಳಂಗಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಳಂಗಂಡ ತಂಡವು ಟೈಬ್ರೇಕರ್‍ನಲ್ಲಿ ಮುರುವಂಡ ತಂಡವನ್ನು 3-2 ಗೋಲಿನ ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಚೇಂದಿರ ಮತ್ತು ಸೋಮೆಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸೋಮೆಯಂಡ ತಂಡವು ಚೇಂದಿರ ತಂಡವನ್ನು 1-0 ಗೋಲಿನಿಂದ ಪರಾಭವಗೊಳಿಸಿ ಕ್ವಾರ್ಟರ್ ಫೈನಲ್ ತಲುಪಿತು. ಸೋಮೆಯಂಡ ತಂಡದ ಪರ ಅಪ್ಪಯ್ಯ ಒಂದು ಗೋಲು ದಾಖಲಿಸುವದರ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಅಂಜಪರವಂಡ, ಚೆಪ್ಪುಡಿರ, ಪರದಂಡ ಹಾಗೂ ಬೊವೇರಿ ಯಂಡ ತಂಡಗಳು ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
- ಪಿ.ವಿ.ಪ್ರಭಾಕರ್