ಮಡಿಕೇರಿ, ಮೇ 16 : ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಕಾಂಗ್ರೆಸ್ಸಿಗರಿಂದ ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಅವರಿಗೆ ಸೋಲಾಗಿದೆ ಎಂದು ಆರೋಪಿಸಿರುವ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ವಿ.ನಾಗೇಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷರು ಚುನಾವಣಾ ಕಾರ್ಯತಂತ್ರ ರೂಪಿಸುವಲ್ಲಿ ವಿಫಲರಾಗಿರುವದು ಕೂಡ ಪಕ್ಷದ ಹಿನ್ನಡೆಗೆ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರು ಹಣದ ಹೊಳೆಯಲ್ಲಿ ತೇಲಿ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಜೆಡಿಎಸ್ ಅಭ್ಯರ್ಥಿಗೆ ಮಡಿಕೇರಿ ಕ್ಷೇತ್ರದಲ್ಲಿ ಬರಬಹುದಾಗಿದ್ದ ಹೆಚ್ಚಿನ ಮತಗಳನ್ನು ವೈಯಕ್ತಿಕ ರಾಜ ಕಾರಣಕ್ಕಾಗಿ ಕಾಂಗ್ರೆಸ್ಸಿಗರು ಬಿಜೆಪಿಯೆಡೆಗೆ ತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ವೈಫಲ್ಯವೆ ಬಿಜೆಪಿಯ ಗೆಲುವಿಗೆ ಕಾರಣವಾಗಿದೆ ಎಂದು ನಾಗೇಶ್ ಆರೋಪಿಸಿದರು.
ಜಿಲ್ಲೆಯ ಎರಡೂ ಕ್ಷೇತ್ರಗಳ ನೂತನ ಶಾಸಕರುಗಳಿಗೆ ಅಭಿನಂದನೆ ಸಲ್ಲಿಸುವದಾಗಿ ತಿಳಿಸಿದ ನಾಗೇಶ್, ದ್ವೇಷ ರಾಜಕಾರಣವನ್ನು ಬಿಟ್ಟು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡರೆ ಶಾಸಕರುಗಳಿಗೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆಯೆಂದು ಸ್ಪಷ್ಟಪಡಿಸಿದರು. ಜೆಡಿಎಸ್ ಆಡಳಿತ ಹೊರತು ಪಡಿಸಿದಂತೆ ಉಳಿದ ಎಲ್ಲಾ ಸರ್ಕಾರಗಳು ಕೊಡಗನ್ನು ನಿರ್ಲಕ್ಷಿಸುತ್ತಾ ಬಂದಿವೆ. ಆದರೆ, ಕೊಡಗಿನ ಮತದಾರರು ಹಲವು ನಿರೀಕ್ಷೆಗಳೊಂದಿಗೆ ಮತ್ತೆ ಹಾಲಿ ಶಾಸಕರನ್ನೆ ಆಯ್ಕೆ ಮಾಡಿದ್ದಾರೆ. ಜನರ ವಿಶ್ವಾಸಕ್ಕೆ ತಕ್ಕಂತೆ ಶಾಸಕರುಗಳು ಕಾರ್ಯನಿರ್ವಹಿಸಲಿ ಎಂದು ನಾಗೇಶ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ರಾಜ್ಯ ಕಾರ್ಯದರ್ಶಿ ಹೆಚ್.ಎನ್.ಯೋಗೇಶ್ಕುಮಾರ್, ಪ್ರಮುಖರಾದ ನಾಸೀರ್, ರಫೀಕ್ ಹಾಗೂ ಷಂಶುದ್ದೀನ್ ಉಪಸ್ಥಿತರಿದ್ದರು.