ಬೆಂಗಳೂರು, ಮೇ 16: ತಾ. 17 ರಂದು, ರಾಯರ ದಿನ. ಗುರುವಾರ ವಿಧಾನ ಸೌಧದಲ್ಲಿ ಪ್ರಮಾಣವಚನ ಸ್ವೀಕರಿಸುವದಾಗಿ ಹೇಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಬಿರು ಬೇಸಿಗೆಯಲ್ಲೂ ಚಳಿ ನಡುಕ ಹುಟ್ಟಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಲೆಕ್ಕಾಚಾರಗಳು ಸಂಪೂರ್ಣ ಉಲ್ಟಾ ಆಗಿವೆ. ಗುರುವಾರ ದಂದೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುವದಾಗಿ ಹೇಳಿದ್ದಾರೆ. ಇದೇ ಮಾತನ್ನು ಚುನಾವಣೆಗೂ ಮೊದಲು ಅವರು ಹೇಳಿದ್ದರು. ಜ್ಯೋತಿಷಿಗಳ ಅಣತಿಯಂತೆ ತಾ. 17 ರಂದೇ ಅವರು ಮುಹೂರ್ತ ಗುರುತು ಹಾಕಿಕೊಂಡಿದ್ದರು. ಮತ್ತೊಂದು ಭರ್ಜರಿ ‘ಆಪರೇಷನ್ನಿಗೆ’ ಟೇಬಲ್ ಸಿದ್ಧವಾಗಿದೆಯಾ? ಆದರೆ, ಕೇವಲ 104 ಸ್ಥಾನಗಳಿರುವ ಯಡಿಯೂರಪ್ಪನವರು ಹೇಗೆ ಬಹುಮತ ಸಾಬೀತುಪಡಿಸುತ್ತಾರೆ? ಬಹುಮತ ಸಾಬೀತುಪಡಿಸಲು ಬೇಕಾಗಿರುವದು ಇನ್ನೂ 8 ಸ್ಥಾನಗಳು. ಇಬ್ಬರು ಸ್ವತಂತ್ರ ಅಭ್ಯರ್ಥಿಗಳನ್ನು ಬಿಟ್ಟರೆ ಬೇರೆ ಯಾರೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಇದಕ್ಕೂ ತಂತ್ರಗಾರಿಕೆ ರೂಪಿಸಲಾಗಿದೆ. ಕರ್ನಾಟಕ ರಾಜಕೀಯ ಅಂಗಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ‘ಸಸ್ಪೆನ್ಸ್ ಥ್ರಿಲ್ಲರ್’ ಸಿನೆಮಾದಂತೆ ಕಂಡುಬರುತ್ತಿವೆ. ಲೆಕ್ಕಾಚಾರಗಳು ಬದಲಾಗುತ್ತಿವೆ, ನಿಷ್ಠೆಗಳು ಬದಲಾಗುತ್ತಿವೆ, ರಹಸ್ಯ ಚಟುವಟಿಕೆಗಳು ಬಯಲಾಗುತ್ತಿವೆ, ಮುಂದೆ ಏನಾಗುವದೋ ಎಂದು ರಾಜ್ಯದ ಜನರು ಉಸಿರು ಬಿಗಿಹಿಡಿದು ನೋಡುವಂತಾಗಿದೆ.