ಸೋಮವಾರಪೇಟೆ, ಮೇ 16: ಮಡಿಕೇರಿ ಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅವರು ಗೆಲುವು ದಾಖಲಿಸಿದ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ ಪಟ್ಟಣದಲ್ಲಿ ಮೆರವಣಿಗೆ ನಡೆಸುವ ಮೂಲಕ ವಿಜಯೋತ್ಸವ ಆಚರಿಸಿದರು. ನಂತರ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಅಪ್ಪಚ್ಚು ರಂಜನ್‍ರವರ ಅಭೂತ ಪೂರ್ವ ಗೆಲುವನ್ನು ಸಂಭ್ರಮಿಸಿದರು.
ಬಿಜೆಪಿ ಗೆಲುವಿನ ಕುರಿತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಮಂಜುನಾಥ್ ಪ್ರತಿಕ್ರಿಯಿಸಿ, ಕೊಡಗು ಬಿಜೆಪಿ ಭದ್ರಕೋಟೆ ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಬಿಜೆಪಿ ಮುಖಂಡ ಶುಂಠಿ ಭರತ್‍ಕುಮಾರ್, ಜಿಲ್ಲೆಯ ಮತದಾರರು ಇತರೆ ಪಕ್ಷಗಳಿಗೆ ತಕ್ಕಪಾಠ ಕಲಿಸಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರುಗಳ ಅಭಿವೃದ್ಧಿಪರ ಚಿಂತನೆಯಿಂದ ಗೆಲುವು ಸಾಧ್ಯವಾಗಿದೆ ಎಂದರು.
ಇದರೊಂದಿಗೆ ಸಮೀೀಪದ ಹಾನಗಲ್ಲು ಬಾಣೆ, ಹಾನಗಲ್ಲು, ಚೌಡ್ಲು, ಯಡೂರು, ಶಾಂತಳ್ಳಿ, ತೋಳೂರು ಶೆಟ್ಟಳ್ಳಿ, ಗೌಡಳ್ಳಿ, ನೇರುಗಳಲೆ, ಐಗೂರು, ಗಣಗೂರು ಸೇರಿದಂತೆ ಇತರ ಭಾಗಗಳಲ್ಲೂ ಪಕ್ಷದ ಕಾರ್ಯಕರ್ತರು ಬೈಕ್ ಜಾಥಾ ನಡೆಸಿ ವಿಜಯೋತ್ಸವ ಆಚರಿಸಿದರು. ಮತದಾರರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ಬೆಟ್ಟಿಂಗ್‍ನಲ್ಲೇ ಲಕ್ಷ ಪಡೆದ ಬಿಜೆಪಿಗರು: ಸೋಮವಾರಪೇಟೆ ಭಾಗದಲ್ಲಿ ಜೆಡಿಎಸ್ ಅಲೆ ಜೋರಾಗಿದ್ದ ಹಿನ್ನೆಲೆ ಮತದಾನಕ್ಕೂ ಮೊದಲೇ ಜೆಡಿಎಸ್ ಕಾರ್ಯಕರ್ತರು ಲಕ್ಷಾಂತರ ರೂಪಾಯಿಗಳ ಬೆಟ್ಟಿಂಗ್‍ಗೆ ಕರೆಯುತ್ತಿದ್ದರು. ಮೊದಮೊದಲು ಅಂಜುತ್ತಿದ್ದ ಬಿಜೆಪಿಗರು, ಚುನಾವಣಾ ಮತದಾನ ಪ್ರಕ್ರಿಯೆ ಮುಕ್ತಾಯ ಗೊಂಡಂತೆ ಸ್ವಲ್ಪ ಮನಸ್ಸು ಮಾಡಿದರು. ಇದರಿಂದಾಗಿ ಬಿಜೆಪಿ ಕಾರ್ಯಕರ್ತರು ಲಕ್ಷಾಂತರ ರೂಪಾಯಿಗಳನ್ನು ಜೇಬಿಗಿಳಿಸಿ ಕೊಂಡರು.
ಬಿಜೆಪಿ ಪಕ್ಷದ ಹಿರಿಯ ಮುಖಂಡರೋರ್ವರು ರೂ. 5 ಲಕ್ಷ ಬೆಟ್ಟಿಂಗ್ ಕಟ್ಟಿ ಭರ್ಜರಿ ಬಹುಮಾನ ಪಡೆದರೆ, ಉಳಿದವರು 10 ಸಾವಿರದಿಂದ 3 ಲಕ್ಷದವರೆಗೂ ಬೆಟ್ಟಿಂಗ್ ಕಟ್ಟಿ ಹಣ ಸಂಪಾದಿಸಿದರು. ಈ ಮಧ್ಯೆ ಕಾಂಗ್ರೆಸ್ ಪಕ್ಷದ ಕೆಲವರು ಜೆಡಿಎಸ್ ಪರ ಬೆಟ್ಟಿಂಗ್ ಕಟ್ಟಿ ಅಭ್ಯರ್ಥಿಯೊಂದಿಗೆ ಹಣವನ್ನೂ ಕಳೆದುಕೊಂಡರು.