ಕ್ರೀಡೆ ಎಂಬದೇ ರೋಚಕ, ಇದು ಆರೋಗ್ಯದ ದ್ಯೋತಕ. ಕ್ರೀಡೆ ಎಂಬದಿದ್ದರೆ ಮಾನವನಿಗೆ ಮನೋರಂಜನೆ, ಆರೋಗ್ಯದ ಪಾಲನೆ. ಕ್ರೀಡೆಗಳು ಸ್ಪರ್ಧೆ ಅಭ್ಯಾಸ, ಆಸಕ್ತಿ, ಹುರುಪು, ತಲ್ಲೀನತೆ, ಏಕಾಗ್ರತೆ, ತಾಳ್ಮೆ ಇಂತಹ ಒಳ್ಳೆಯ ಗುಣಗಳನ್ನು ಮಾನವನಿಗೆ ಕಲಿಸುವದು, ಕ್ರೀಡೆಗಳಲ್ಲೂ ವೈವಿಧ್ಯತೆಯಿದೆ, ರೋಚಕತೆಯಿದೆ, ಸಾಹಸಗಳ ಲೇಪನವಿದೆ, ಸವಾಲು, ಸಾಹಸಗಳ ಸರಮಾಲೆಯೇ ಇದೆ. ಬೆವರು ಹರಿದರೆ ದೇಹ ಕಬ್ಬಿಣದಂತೆ ಗಟ್ಟಿಯಾಗಿ ಆರೋಗ್ಯದ ನೆಲೆಯಾಗುವದು.

ಬೀಚ್ ವಾಲಿವಾಲ್ ಆಟ ಎಂದಾಗ ಅದು ವಾಲಿಬಾಲ್ ಆಟದೊಡನೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ಅರಿವಿಗೆ ಬರುವದು ವಾಲಿಬಾಲ್ ಆಟದ ಕೌಶಲ್ಯಗಳೆಲ್ಲ ಬೀಚ್ ವಾಲಿಬಾಲ್‍ನಲ್ಲಿದೆ. ಈ ಆಟ ತೀರಾ ಸರಳವಾದುದು ಹಾಗೂ ತುಂಬಾ ಕ್ರಿಯಾಶೀಲವು ಆಗಿದೆ, ವಿಶಿಷ್ಟ ಸ್ಥಾನಮಾನವನ್ನು ಗಳಿಸಿ ವಿಶೇಷವೆಂದೆನ್ನಿಸಿಕೊಂಡಿದೆ. ಇಲ್ಲಿ ಭುಜ ಬಲ, ಮುಂಗೈಗಳ ಅಧಿಕ ಶಕ್ತಿಯ ಬಲದ ಅವಶ್ಯಕತೆಯಿದೆ. ಆಟಗಾರರಾಗಿ ಕ್ಷಮತೆ ಹೊಂದಲು ಶಕ್ತಿ, ವೇಗ, ಮೈಮಣಿತ, ಚಪಲತೆ, ಕಷ್ಟ ಸಹಿಷ್ಣುತೆಗಳ ಅವಶ್ಯಕತೆ ಬಹಳಷ್ಟಿದೆ.

ಬೀಚ್‍ವಾಲಿಬಾಲ್‍ನ್ನು 1915ರಲ್ಲಿ ಹವಾಯಿಯದ ವೈಕಿಕಿ ಬೀಚ್‍ನ ಓಡ್ರಿಗರ್ ಕ್ಯಾನೋ ಕ್ಲಬ್‍ನಲ್ಲಿ ಮೊದಲು ಆಡಲಾಯಿತು. ಓಡ್ರಿಗರ್ ಕ್ಯಾನೋ ಕ್ಲಬ್‍ನ ಸದಸ್ಯರಾದ ಜಾರ್ಜ್ ಡೇವಿಡ್‍ರವರು ಈ ಆಟದ ಮೂಲ ನಿಯಮಗಳನ್ನು ರೂಪಿಸಿದರು. 1920ರಲ್ಲಿ ಸಾಂಟಾ ಮೋನಿಕಾದಲ್ಲಿರುವ ವಿಶಾಲವಾದ ಮರಳು ಪ್ರದೇಶದಲ್ಲಿ ಈ ಆಟವನ್ನು ಸಾರ್ವಜನಿಕರಿಗೆ ಮನೋರಂಜನೆಗಾಗಿ ಆಡಲೂ ಹಾಗೇ ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು. 1922ರಲ್ಲಿ ಈ ಆಟ ಕ್ಯಾಲಿಫೋರ್ನಿಯಾದ ಎಲ್ಲಾ ಸಮುದ್ರಗಳ ದಂಡೆಗಳಲ್ಲಿ ಅಭಿವೃದ್ಧಿ ರೂಪದಲ್ಲಿ ಆಡಲಾಯಿತು. ಹಾಗೇ ಜನಪ್ರಿಯತೆಯು ಹೆಚ್ಚ ತೊಡಗಿ, ಈ ಆಟಕ್ಕೆ ನೆಟ್‍ನ್ನು ಬಳಕೆ ಮಾಡಿ ಆಡಲಾಯಿತು. 1924ರಲ್ಲಿ ಮೊಟ್ಟ ಮೊದಲ ಅಂತರ್‍ಕ್ಲಬ್‍ಗಳ ನಡುವೆ ಸ್ಪರ್ಧೆಗಳು ವ್ಯವಸ್ಥಿತವಾಗಿ ರೋಚಕವಾಗಿ ನಡೆದವು.

1930ರಲ್ಲಿ ಹೆಚ್ಚಿನ ಬೆಳವಣಿಗೆ ಕಂಡ ಈ ಆಟ ಯುರೋಪ್ ಖಂಡದ ಸಮುದ್ರದ ಮರಳಿನ ತಟದಲ್ಲಿ ಕಾಣಿಸಿಕೊಂಡು ಆಸಕ್ತಿ ಮೂಡಿಸಿತು. 1940ರಲ್ಲಿ ಈ ಆಟವನ್ನು ಡಬಲ್ಸ್ ಪಂದ್ಯವಾಗಿ ಸಾಂಟಾ ಮೊನಿಕಾದಲ್ಲಿ ಪ್ರಾರಂಭಿಸಲಾಯಿತು. ಕ್ರಮೇಣ ಬಹಳಷ್ಟು ಪಂದ್ಯಾವಳಿಗಳು ನಡೆದು 1948 ರಿಂದ ಕಪ್ ಬಹುಮಾನ, ಪದಕಗಳನ್ನು ನೀಡಿ ಪ್ರೋತ್ಸಾಹಿಸುವ ಮಟ್ಟದ ಬೆಳವಣಿಗೆಗೆ ಪಾತ್ರವಾಯಿತು. 1960ರಲ್ಲಿ ಈ ಆಟ ವೃತ್ತಿಪರ ಬೀಚ್ ವಾಲಿಬಾಲ್ ಲೀಗ್ ಆಗಿ ಆಕರ್ಷಣೆ ಹೊಂದಿ ಸಾಂಟಾ ಮೊನಿಕಾದಲ್ಲಿ ಪ್ರಾರಂಭವಾಯಿತು. ಸುಮಾರು 30,000ದಷ್ಟು ಪ್ರೇಕ್ಷಕರು ಈ ಪಂದ್ಯಾವಳಿಗಳನ್ನು ವೀಕ್ಷಿಸುವ ಮಟ್ಟಕ್ಕೆ ಈ ಬೀಚ್‍ವಾಲಿಬಾಲ್ ಬೆಳೆದು ನಿಂತಿತು. ‘‘ವಿಂಬಲ್ಡನ್ ಸಮುದ್ರ ತೀರದ ವಾಲಿಬಾಲ್’’ ಎಂದು ಹೆಸರು ಗಳಿಸಿತು. 1960ರಲ್ಲಿ ಲಾಸ್‍ಏಂಜಲೀಸ್‍ನಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯಾವಳಿಯನ್ನು ಅಂದಿನ ಅಮೇರಿಕಾ ಅಧ್ಯಕ್ಷರಾದ ಜಾನ್, ಎಫ್ ಕೆನಡಿಯವರು ವೀಕ್ಷಿಸಿದರು. ನಂತರ 1987ರಲ್ಲಿ ಎಫ್.ಐ.ವಿ.ಬಿ ಇವರ ಸಹಯೋಗದಲ್ಲಿ ಅನೇಕ ಪಂದ್ಯಗಳು ನಡೆದವು. ವಿಶ್ವ ಮಟ್ಟದಲ್ಲೂ ಅನೇಕ ಪಂದ್ಯಾವಳಿಗಳು ನಡೆದವು. 1996ರಲ್ಲಿ ಅಟ್ಲಾಂಟಿಕ್ ಒಲಂಪಿಕ್ಸ್‍ನಲ್ಲಿ ಮೊದಲ ಬಾರಿ ಈ ಆಟವನ್ನು ಸೇರ್ಪಡೆ ಮಾಡಿದರು. 1998ರಿಂದ ಮಹಿಳಾ ವೃತ್ತಿ ಪರ ಪಂದ್ಯಾವಳಿಗಳನ್ನು ಏರ್ಪಡಿಸಲಾಯಿತು. ಹೀಗೆ ಈ ಬೀಚ್ ವಾಲಿಬಾಲ್ ವಿಶ್ವ ಮಟ್ಟದಲ್ಲಿ ಬೆಳೆಯಿತು.

ಬೀಚ್ ವಾಲಿಬಾಲ್ ಆಟ ಗುಂಪು ಕ್ರೀಡೆಯಾಗಿದೆ. ಇಲ್ಲಿ ಪ್ರತೀ ತಂಡದಲ್ಲಿ ಇಬ್ಬರು ಆಟಗಾರರಿರುತ್ತಾರೆ. ಬದಲಾವಣೆಗೆ ಅವಕಾಶವಿಲ್ಲ. ಯಾವ ತಂಡ 21 ಅಂಕವನ್ನು 2 ಅಂಕಗಳ ವ್ಯತ್ಯಾಸದಿಂದ ತಲುಪವರೋ ಅವರು ಜಯಶಾಲಿಗಳಾಗುತ್ತಾರೆ. 16 ಮೀ. ಉದ್ದ, 8 ಮೀ. ಅಗಲವಿರುವ ಅಂಕಣದಲ್ಲಿ ಈ ಆಟ ಆಡಲಾಗುತ್ತದೆ. 3 ಸೆಟ್‍ಗಳ ಆಟವಿದ್ದು, ನಿರ್ಣಾಯಕ ಸೆಟ್‍ನ್ನು 15 ಅಂಕಗಳಿಗೆ ಆಡಿಸಲಾಗುವದು. 1996ರಲ್ಲಿ ಒಲಂಪಿಕ್ಸ್‍ನಲ್ಲಿ ಯು.ಎಸ್.ಎ., 2000 ಸಿಡ್ನಿ ಒಲಂಪಿಕ್ಸ್‍ನಲ್ಲಿ ಯು.ಎಸ್.ಎ., 2004ರಲ್ಲಿ ಅಥೆನ್ಸ್ ಒಲಂಪಿಕ್ಸ್‍ನಲ್ಲಿ ಬ್ರೆಜಿಲ್, 2008 ಯು.ಎಸ್.ಎ., 2012 ಲಂಡನ್ ಒಲಂಪಿಕ್ಸ್‍ನಲ್ಲಿ ಜರ್ಮನಿ, 2016ರಲ್ಲಿ ಬ್ರೆಜಿಲ್ ಒಲಂಪಿಕ್ಸ್‍ನಲ್ಲಿ ಬ್ರೆಜಿಲ್ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಜಯಿಸಿದ್ದಾರೆ. ಒಲಂಪಿಕ್ಸ್‍ನಲ್ಲಿ ಮಹಿಳಾ ಬೀಚ್‍ವಾಲಿಬಾಲ್‍ನಲ್ಲಿ 2012ರಲ್ಲಿ ಯು.ಎಸ್.ಎ., 2016ರಲ್ಲಿ ಬ್ರೆಜಿಲ್‍ನಲ್ಲಿ ಜರ್ಮನಿ ಜಯಗಳಿಸಿದ್ದಾರೆ. ಬೀಚ್ ವಾಲಿಬಾಲ್ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದೆ. ಭಾರತದಲ್ಲಿ ಆಟವಾಡುತ್ತಿದ್ದರೂ, ಹೆಚ್ಚಿನ ಜನಪ್ರಿಯತೆಗಳಿಸಬೇಕಾಗಿದೆ. ಕಡಿಮೆ ಖರ್ಚಿನಲ್ಲಿ ಬೀಚ್‍ಗಳಲ್ಲಿ ಕಡಿಮೆ ಸ್ಥಳಾವಕಾಶದಲ್ಲಿ ಈ ಆಟವಾಡಬಹುದಾಗಿದ್ದು, ಒಲಂಪಿಕ್ಸ್ ವಿಶ್ವಮಟ್ಟದಲ್ಲಿ ಭಾರತ ಕೂಡ ಸ್ಪರ್ಧಿಸುವ ಪ್ರಯತ್ನ ಮಾಡಬಹುದಾಗಿದೆ. ಬೀಚ್‍ವಾಲಿಬಾಲ್ ಮರಳಿನ ಅಂಕಣದಲ್ಲಿ ಆಡುವದರಿಂದ ದೇಹಕ್ಕೂ ಉತ್ತಮ ವ್ಯಾಯಾಮ ದೊರೆಯುವದು.

?ಹರೀಶ್ ಸರಳಾಯ,

ಮಡಿಕೇರಿ.