ಸೋಮವಾರಪೇಟೆ,ಮೇ.16: ಶನಿವಾರಸಂತೆ ಸಮೀಪದ ಮಾದೇಗೋಡು ಗ್ರಾಮದ ಮಾರಿಯಮ್ಮ ದೇವಾಲಯದ ಹಿಂಭಾಗದಲ್ಲಿ, ಮದ್ಯದಂಗಡಿ ಮಾಲೀಕರೊಬ್ಬರು ಖಾಲಿ ಬಾಟಲಿಗಳನ್ನು ಸಂಗ್ರಹಿಸಿದ್ದು, ಅದನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ದೇವಾಲಯದಲ್ಲಿ ಪೂಜೆ ಸಲ್ಲಿಸಲು ದೇವಾಲಯದ ಪಕ್ಕದ ಕಾಫಿ ತೋಟದ ಮಾಲೀಕರು ಅಡ್ಡಿಪಡಿಸುತ್ತಿದ್ದಾರೆ. ಗ್ರಾಮದ ಕೆರೆಗೆ ತ್ಯಾಜ್ಯ ವಸ್ತುಗಳು ಹಾಕುತ್ತಿದ್ದಾರೆ. ಪಕ್ಕದಲ್ಲಿರುವ ಸ್ಮಶಾನದ 8 ಸೆಂಟ್ ಜಾಗವನ್ನು ಅತಿಕ್ರಮಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವ ಗ್ರಾಮಸ್ಥರು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶನಿವಾರಸಂತೆ ಪೊಲೀಸ್ ಠಾಣೆಗೆ ತೆರಳಿ ಠಾಣಾಧಿಕಾರಿಯನ್ನು ಒತ್ತಾಯಿಸಿದರು.

ಮಾದೇಗೋಡು ಗ್ರಾಮದಲ್ಲಿ ಕುಂಬಾರ ಜನಾಂಗಕ್ಕೆ ಸೇರಿದ 45 ಕುಟುಂಬಗಳು ವಾಸ ಮಾಡುತ್ತಿವೆ. ನಮಗೆ ಸೇರಿದ ಹಳೆಯದಾದ ದೇವಾಲಯವಿದ್ದು, ಈ ಜಾಗದಲ್ಲಿ ಗ್ರಾಮದ ನಿವಾಸಿಯೋರ್ವರು ಮದ್ಯದ ಖಾಲಿ ಬಾಟಲಿಯನ್ನು ಸಂಗ್ರಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನ್ಯಾಯ ಒದಗಿಸಬೇಕು. ತಕ್ಷಣ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರಾದ ಎಂ.ಬಿ. ರಘು, ಎಂ.ಎಚ್.ರಘು, ಎಂ.ಪಿ.ದಯಾನಂದ, ಎಚ್.ಡಿ.ಮಧು, ಎಂ.ಎನ್. ನಂದೀಶ್, ಎಂ.ಎಸ್. ವಸಂತ್ ಕುಮಾರ್, ಎಂ.ಎಚ್. ರಾಜು ಮತ್ತಿತರರು ಒತ್ತಾಯಿಸಿದರು.