ಬೆಂಗಳೂರು, ಮೇ 15: ಅಂದುಕೊಂಡಂತೆ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದೆ. ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38+1 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಬಹುಮತಕ್ಕೆ 112 ಸ್ಥಾನಗಳು ಬೇಕಾಗಿದ್ದು ಬಿಜೆಪಿ 8 ಸ್ಥಾನಗಳ ಕೊರತೆ ಅನುಭವಿಸುತ್ತಿದೆ. ಇದೇ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿ ಸರಕಾರ ರಚನೆಗೆ ಮುಂದಾಗಿವೆ. ಜೆಡಿಎಸ್ ನೇತೃತ್ವದಲ್ಲಿ ಸರಕಾರ ರಚನೆಗೆ ಕಾಂಗ್ರೆಸ್ ಮನಸ್ಸು ಮಾಡಿದೆ.
ಆದರೆ ಇದರ ಮಧ್ಯೆಯೂ ನಾವೇ ಸರಕಾರ ರಚನೆ ಮಾಡುತ್ತೇವೆ ಎಂದು ಬಿಜೆಪಿ ಹೇಳಿರುವದು ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿ ಒಂದಷ್ಟು ಕಂಪನಗಳನ್ನು ಸೃಷ್ಟಿಸಿದೆ. ತಮ್ಮ ಪಕ್ಷದ ಶಾಸಕರನ್ನು ಬಿಜೆಪಿ ಆಪರೇಷನ್ ಕಮಲ ಮಾಡಬಹುದು ಎಂಬ ಭೀತಿಯಲ್ಲಿದ್ದು, ಮತ್ತೆ ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿವೆ.
ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಕೇರಳ ರೆಸಾರ್ಟ್ ರಾಜಕಾರಣಕ್ಕೆ ಬನ್ನಿ ಎಂದು ಕರ್ನಾಟಕದ ಪಕ್ಷಗಳಿಗೆ ಆಹ್ವಾನಿಸಿದೆ. ‘ದೇವರ ಸ್ವಂತ ನಾಡಿನ ಸುರಕ್ಷಿತ ಮತ್ತು ಸುಂದರ ರೆಸಾರ್ಟ್ ಗಳಿಗೆ ನಾವು ಶಾಸಕರನ್ನು ಆಹ್ವಾನಿಸುತ್ತಿದ್ದೇವೆ’ ಎಂದು ಕೇರಳ ಟೂರಿಸಂ ಟ್ಟಿಟ್ಟರ್ ಖಾತೆಯಿಂದ ಟ್ಟೀಟ್ ಮಾಡಲಾಗಿದೆ.