ಮಡಿಕೇರಿ, ಮೇ 15: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಗೆಲುವು ಸಾಧಿಸುತ್ತಿದ್ದಂತೆಯೇ ಇಲ್ಲಿನ ಸಂತ ಜೋಸೆಫರ ಶಾಲೆಯ ಹೊರ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಮಲ ಪಾಳೆಯದ ಕಾರ್ಯಕರ್ತರು ಅಮಿತೋತ್ಸಾಹದಿಂದ ಕುಣಿದು ಕುಪ್ಪಳಿಸಿದರು. ಮತ ಎಣಿಕೆ ಕೇಂದ್ರದಿಂದ ಹೊರಬಂದ ಅಪ್ಪಚ್ಚುರಂಜನ್ ಹಾಗೂ ಬೋಪಯ್ಯ ಅವರುಗಳಿಗೆ ಹಾರ, ತುರಾಯಿಗಳೊಂದಿಗೆ ಅಭಿನಂದಿಸಿದ ಕಾರ್ಯಕರ್ತರು ಹರ್ಷೋದ್ಘಾರಗಳ ನಡುವೆ ಇಬ್ಬರನ್ನು ಹೆಗಲುಕೊಟ್ಟು ಎತ್ತಿಕೊಳ್ಳುವ ಮೂಲಕ ಸಂಭ್ರಮಿಸಿದರು. ಅಲ್ಲದೆ ಭಾರೀ ಗಾತ್ರದ ಕೇಸರಿ ಧ್ವಜ ಹಾಗೂ ಬಿಜೆಪಿ ಪತಾಕೆಗಳನ್ನು ಹಿಡಿದು ಕೊಡಗಿನ ವಾಲಗಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸಿದರು. ಕರ್ನಾಟಕ ವಿಧಾನಸಭೆಗೆ ಐದನೇ ಬಾರಿಗೆ ಎಂ.ಪಿ. ಅಪ್ಪಚ್ಚುರಂಜನ್ ಪ್ರವೇಶಿಸಿದರೆ, ಕೆ.ಜಿ. ಬೋಪಯ್ಯ ಸತತ ನಾಲ್ಕನೇ ಗೆಲುವಿನೊಂದಿಗೆ ಸಂಭ್ರಮಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ, ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಪಕ್ಷದ ಮುಖಂಡರಾದ ಎಸ್.ಜಿ. ಮೇದಪ್ಪ, ಬೋಸ್ ದೇವಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಪ್ರಮುಖರಾದ ಗಿರೀಶ್ ಗಣಪತಿ, ಸುವಿನ್ ಗಣಪತಿ, ತಳೂರು ಕಿಶೋರ್ ಕುಮಾರ್, ಬೆಲ್ಲುಸೋಮಯ್ಯ, ರವಿಬಸಪ್ಪ, ಮಧು ದೇವಯ್ಯ, ಬಿ.ಕೆ. ಅರುಣ್, ಮಹೇಶ್ ಜೈನಿ, ಅರುಣ್ ಭೀಮಯ್ಯ ಸೇರಿದಂತೆ ಅನೇಕ ಪದಾಧಿಕಾರಿಗಳು, ಕಾರ್ಯಕರ್ತರು ಗೆಲುವಿನ ಸಂಭ್ರಮಕ್ಕೆ ಸಾಕ್ಷಿಯಾದರು.ಬಿಗಿಭದ್ರತೆ : ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸ್ವತಃ ಚುನಾವಣಾ ಎಣಿಕೆ ಪ್ರಕ್ರಿಯೆ ಗಮನಿಸುವದರೊಂದಿಗೆ, ಕರ್ತವ್ಯ ನಿರತ ಸಿಬ್ಬಂದಿ ಸಹಿತ ಮಾಧ್ಯಮ ಬಳಗಕ್ಕೂ ಎಣಿಕೆ ಕೇಂದ್ರಕ್ಕೆ ಕಟ್ಟುನಿಟ್ಟಿನ ನಿಯಮದೊಂದಿಗೆ ಮೊಬೈಲ್ ಇತ್ಯಾದಿಗೆ ಅವಕಾಶ ಕಲ್ಪಿಸದೆ ಕ್ರಮವಹಿಸಿದ್ದರು. ಅರೆಸೇನಾಪಡೆ ಕಣ್ಗಾವಲು ನಡುವೆ ಎಸ್ಪಿ ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು. ಒಟ್ಟಿನಲ್ಲಿ ಎರಡು ತಿಂಗಳಿನಿಂದ ಚುನಾವಣಾ ಪ್ರಕ್ರಿಯೆಯೊಂದಿಗೆ, ಕಟ್ಟುನಿಟ್ಟು ಕ್ರಮಗಳು ಜಾರಿಯಿದ್ದು, ಇಂದು ಜನಪ್ರತಿನಿಧಿಗಳಿಬ್ಬರ ಗೆಲುವಿನ ವಿಜಯೋತ್ಸಾಹವು ಒಂದು ರೀತಿಯ ಬಿಗಿ ಕ್ರಮಗಳು ಸಡಿಲಗೊಳ್ಳುವಂತೆ ಮಾಡುವಲ್ಲಿ ಶಾಂತಿಯುತ ತೆರೆ ಕಂಡಿತು.

ವಿವಿಧೆಡೆ ವಿಜಯೋತ್ಸವ

ಮಡಿಕೇರಿಯಲ್ಲಿ ವಿಜಯೋತ್ಸವ ಬಳಿಕ ಅಭ್ಯರ್ಥಿ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಪ್ರಮುಖರು ಮೂರ್ನಾಡು, ಮರಗೋಡು ಮುಂತಾದೆಡೆ ತೆರಳಿ ನೆರೆದಿದ್ದ ಅಲ್ಲಿನ ಕಾರ್ಯಕರ್ತರು, ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸುವ ಮೂಲಕ ಸಂಭ್ರಮಿಸಿದರು.

ಅತ್ತ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಕೆ.ಜಿ. ಬೋಪಯ್ಯ ಹಾಗೂ ಮುಖಂಡರು ನಗರದಿಂದ ವೀರಾಜಪೇಟೆಗೆ ತೆರಳುವದರೊಂದಿಗೆ, ಅಪಾರ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಗೆಲುವಿನ ಹರ್ಷ ಹಂಚಿಕೊಂಡರು. ಮುಂದೆ ಗೋಣಿಕೊಪ್ಪಲು ಹಾಗೂ ಇತರೆಡೆಗಳಲ್ಲಿ ಬಿರುಸಿನ ಓಡಾಟ ಮುಖಾಂತರ ವಿಜಯೋತ್ಸವ ನಡೆಸಿದರು.

ಇಬ್ಬರು ಜನಪ್ರತಿನಿಧಿಗಳು ಇಂದು ಸಂಜೆಗತ್ತಲೆ ನಡುವೆ ಅಪಾರ ಸಂಖ್ಯೆಯಲ್ಲಿ ಅಲ್ಲಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಭೇಟಿ ಮಾಡುವದರೊಂದಿಗೆ ಪಕ್ಷದ ಮುಖಂಡರೊಡಗೂಡಿ ಪಕ್ಷದ ಗೆಲುವಿಗಾಗಿ ಸಂತಸ ಹಂಚಿಕೊಂಡ ಬಗ್ಗೆ ಮಾಹಿತಿ ಲಭಿಸಿದೆ. ಚುನಾವಣೆಯಲ್ಲಿ ಬಿಜೆಪಿ ಗೆಲುವಿನೊಂದಿಗೆ ವಿಜಯೋತ್ಸವ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮದೊಂದಿಗೆ ಭದ್ರತೆ ಕೈಗೊಳ್ಳಲಾಗಿತ್ತು.

ಶನಿವಾರಸಂತೆ

ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವು ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಯಿತು.

ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚುರಂಜನ್ ಗೆಲುವಿನ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡರು. 11 ಗಂಟೆಯ ತನಕ ಮಡಿಕೇರಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚುರಂಜನ್ ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಅವರಿಗಿಂತ ಸುಮಾರು ಏಳೂವರೆ ಸಾವಿರ ಮತಗಳ ಅಂತರದಿಂದ ಹಿನ್ನಡೆಯಾಗುತ್ತಿರುವ ಬಗ್ಗೆ ಪ್ರಸಾರವಾಗುತ್ತಿದ್ದ ಕಾರಣದಿಂದ ಶನಿವಾರಸಂತೆ ಪಟ್ಟಣದಲ್ಲಿ ಒಬ್ಬನೆ ಒಬ್ಬ ಬಿಜೆಪಿ ಪ್ರಮುಖರಾಗಲಿ ಪಕ್ಷದ ಕಾರ್ಯಕರ್ತರಾಗಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಮಧ್ಯಾಹ್ನ 12 ಗಂಟೆಯ ನಂತರ ಬಿಜೆಪಿ ಅಭ್ಯರ್ಥಿ ಜೆಡಿಎಸ್ ಅಭ್ಯರ್ಥಿಗಿಂತ 11 ಸಾವಿರ ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆಂಬ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಕರ್ತರು ವಿಜಯೋತ್ಸವ ನಡೆಸಿದರು. ಪಟ್ಟಣದ ಬನ್ನಿಮಂಟಪದಲ್ಲಿ ಸೇರಿಕೊಂಡ ಮುಖಂಡರು ಹಾಗೂ ಅಕ್ಕಪಕ್ಕದ ಗ್ರಾಮಗಳಿಂದ ಬಂದ ನೂರಾರು ಕಾರ್ಯಕರ್ತರು ಪಕ್ಷದ ಧ್ವಜಹಿಡಿದು ಟೋಪಿ ಮತ್ತು ಪ್ರಧಾನಿ ನರೇಂದ್ರಮೋದಿ ಅವರ ಮುಖವಾಡವನ್ನು ಧರಿಸಿ ಪಟ್ಟಣದ ಕೆಆರ್‍ಸಿ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಈ ಸಂದರ್ಭ ಪ್ರಧಾನಿ ನರೇಂದ್ರಮೋದಿ, ಪಕ್ಷದ ಅಧ್ಯಕ್ಷ ಅಮಿತ್‍ಶಾ, ರಾಜ್ಯದ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಡಿಕೇರಿ ಬಿಜೆಪಿ ಅಭ್ಯರ್ಥಿ ಅಪ್ಪಚ್ಚುರಂಜನ್, ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಕೆ.ಜಿ.ಬೋಪಯ್ಯ ಪರವಾಗಿ ಜಯಕಾರದ ಘೋಷಣೆಗಳನ್ನು ಕೂಗಿದರು. ಕೆಆರ್‍ಸಿ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಕೂಡಿಗೆ-ಹೆಬ್ಬಾಲೆ

ಕೂಡಿಗೆ: ವಿಧಾನ ಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಕೂಡಿಗೆ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಕ್ಷದ ನೂರಾರು ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ನಂತರ ಕೂಡುಮಂಗಳೂರು,ಕೂಡ್ಲೂರು,ಕೂಡಿಗೆ ಹೆಬ್ಬಾಲೆ ವ್ಯಾಪ್ತಿಯ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಕುಶಾಲನಗರದ ಮುಖ್ಯ ಬೀದಿಗಳಲ್ಲಿ ಸಾಗಿ ಹರ್ಷ ವ್ಯಕ್ತಪಡಿಸಿದರು. ತೆರೆದ ವಾಹನದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣಿಪ್ರಸಾದ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಎಂ.ವಿಜಯ, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಕುಮಾರ್ ಹಾಗೂ ಪ್ರಮುಖರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.

ಹೆಬ್ಬಾಲೆ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎಸ್.ಶ್ರೀನಿವಾಸ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ತೊರೆನೂರು,ಶಿರಂಗಾಲ,ಸಿದ್ದಲಿಂಗಪುರ,ಚಿಕ್ಕಾಳುವಾರ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.

ನೆಲ್ಲಿಹುದಿಕೇರಿ

ಶ್ರೀ ಮುತ್ತಪ್ಪ ದೇವಸ್ಥಾನದಿಂದ ಜಯಘೋಷಗಳನ್ನು ಹಾಕುತ್ತಾ,ಚಂಡೆ ಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರೊಂದಿಗೆ ಮೆರವಣಿಗೆ ಸಾಗಿ ಶಾಸಕ ರಂಜನ್ ವಿಜಯೋತ್ಸವ ಆಚರಿಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ ಲೋಕೇಶ್, ಸ್ಥಾನಿಯ ಸಮಿತಿ ಅಧ್ಯಕ್ಷ ಕೆ.ಟಿ ಷಾಜಿ, ಗ್ರಾ.ಪಂ. ಸದಸ್ಯರಾದ ಬಿಂದು, ಶೈಲಾ, ಯೋಗೇಶ್ ಪ್ರಮುಖರಾದ ಸುರೇಶ್, ದಿಲೀಪ್, ಚೀಯಣ್ಣ, ಅಚ್ಚಯ್ಯ ಮತ್ತಿತರರು ಹಾಜರಿದ್ದರು.

ಸುಂಟಿಕೊಪ್ಪ

ಪಟ್ಟಣದ ಕನ್ನಡ ವೃತ್ತದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಈ ಸಂದರ್ಭ ಬಿಜೆಪಿ ನಗರ ಅಧ್ಯಕ್ಷ ಪಿ.ಆರ್. ಸುನೀಲ್‍ಕುಮಾರ್, ಕಾರ್ಯದರ್ಶಿ ಪ್ರಶಾಂತ್ [ಕೊಕ] ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಐ. ಭವಾನಿ, ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಾಲಾವತಿ, ಮಾಜಿ ಬಿಜೆಪಿ ನಗರ ಅಧ್ಯಕ್ಷ ಬಿ.ಕೆ.ಮೋಹನ, ಯುವ ಮೋರ್ಚ ಅಧ್ಯಕ್ಷ ರಂಜೀತ್‍ಕುಮಾರ್, ಅಂದಗೋವೆ ಗ್ರಾಮದ ಬಿಜೆಪಿ ಹಿರಿಯ ಮುಖಂಡ ಚಿಕ್ಕಂಡ ಉತ್ತಪ್ಪ, ಹಿಂದುಳಿದ ವರ್ಗದ ಅಧ್ಯಕ್ಷ ನಾಗೇಶ್ ಪೂಜಾರಿ, ಬಿಜೆಪಿ ಮಾಜಿ ಯುವ ಮೋರ್ಚಾ ಅಧ್ಯಕ್ಷ ಧನುಕಾವೇರಪ್ಪ, ಬಿಜೆಪಿ ಮುಖಂಡರುಗಳಾದ ಜಿ.ರಾಜನ್, ಶಾರದ ಮಹಾಬಲರೈ, ಟಿ.ಆರ್. ವಿನೋದ್ [ಚೇಟಾಯಿ], ಬಿ.ಕೆ.ಗಿರೀಶ, ಮಹಿಳಾ ಸಮಾಜದ ಅಧ್ಯಕ್ಷೆ ಲೀಲಾ ಮೇದಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎಂ.ಸುರೇಶ [ಪುಟ್ಟ] ಸಿ.ಚಂದ್ರ, ಗೀತಾ ವಿಶ್ವನಾಥ, ಮಾಜಿ ಸದಸ್ಯ ಎಸ್.ಪಿ. ಸಂದೀಪ್ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

ಗುಡ್ಡೆಹೊಸೂರು

ಅಪ್ಪಚ್ಚು ರಂಜನ್ ಅವರು ಗುಡ್ಡೆಹೊಸೂರಿಗೆ ಆಗಮಿಸಿದ ಸಂದರ್ಭ ಬಿ.ಜೆ.ಪಿ. ಕಾರ್ಯಕರ್ತರಿಂದ ಭವ್ಯ ಸ್ವಾಗತ ದೊರೆಯಿತು.

ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಎಂ.ಆರ್. ಉತ್ತಪ್ಪ, ಪುಲಿಯಂಡ ರಾಮ್ ದೇವಯ್ಯ, ಕುಡೆಕಲ್ ನಿತ್ಯ, ಬಸಪ್ಪ, ಬಿ.ವಿ.ಮೊಹನ್ ಮುಂತಾದವರು ಹಾಜರಿದ್ದು ಸಿಹಿಹಂಚಿ ಸಂಭ್ರಮಿಸಿದರು.

ಕುಶಾಲನಗರ

ರಂಜನ್ ಜಯಗಳಿಸಿದ ಹಿನೆÀ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಕುಶಾಲನಗರದಲ್ಲಿ ವಿಜಯೋತ್ಸವ ನಡೆಸಿದರು.

ನೂರಾರು ಬೈಕ್‍ಗಳಲ್ಲಿ ಬಿಜೆಪಿ ಬಾವುಟ ಹಿಡಿದು ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬಿಜೆಪಿ ಹಾಗೂ ರಂಜನ್ ಪರ ಘೋಷಣೆಗಳನ್ನು ಕೂಗಿ ಸಂಭ್ರಮ ವ್ಯಕ್ತಪಡಿಸಿದರು.

ವೀರಾಜಪೇಟೆ

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಅತ್ಯಧಿಕ ಮತಗಳಿಂದ ಶಾಸಕ ಸಭೆಗೆ ಅಯ್ಕೆಯಾದ ಕೆ.ಜಿ. ಬೋಪಯ್ಯ ವೀರಾಜಪೇಟೆ ನಗರದ ಮೂರ್ನಾಡು ರಸ್ತೆಯಲ್ಲಿರುವ ಪಕ್ಷದ ಕಛೇರಿಗೆ ಭೇಟಿ ನೀಡಿದ ಸಂದರ್ಭ ಪಕ್ಷದ ಕಾರ್ಯಕರ್ತರು ಭಾರೀ ಗಾತ್ರದ ಹೂವಿನ ಹಾರ ಹಾಕುವ ಮೂಲಕ ಬರಮಾಡಿಕೊಂಡರು, ತೆರೆದ ಜೀಪಿನಲ್ಲಿ ಮೂರ್ನಾಡು ರಸ್ತೆಗಾಗಿ ಮುಖ್ಯ ರಸ್ತೆ ಮತ್ತು ಖಾಸಗಿ ಬಸ್ಸು ನಿಲ್ದಾಣದವರೆಗೆ ವಿಜಯೋತ್ಸವ ಆಚರಿಸಿದರು. ಪಕ್ಷದ ತಾಲೂಕು ಅಧ್ಯಕ್ಷ ಅರುಣ್ ಭೀಮಯ್ಯ, ಜಿಲ್ಲಾ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಕಾಫಿ ಮಂಡಳಿಯ ಸದಸ್ಯೆ ರೀನಾ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ ಜೀವನ್ ನಗರ ಅಧÀ್ಯಕ್ಷ ಅನಿಲ್ ಮಂದಣ್ಣ ಮತ್ತು ಮಹಿಳಾ ಸದಸ್ಯರು, ಕಾರ್ಯಕರ್ತರು ಮೆರೆವಣಿಗೆಯಲ್ಲಿ ಸಾಗಿದರು.

ಚೆಟ್ಟಳ್ಳಿ

ಚೆಟ್ಟಳ್ಳಿಯ ಬಿಜೆಪಿ ಕಾರ್ಯಕರ್ತರು ಅಪ್ಪಚ್ಜುರಂಜನ್ ಅವರನ್ನು ಜಯಘೋಷಗಳೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಚೆಟ್ಟಳ್ಳಿಯ ಜನಪರ ಹೋರಾಟ ಸಮಿತಿಯ ಸಂಚಾಲಕ ಹಾಗೂ ಬಿಜೆಪಿಯ ಹಿರಿಯ ಕಾರ್ಯಕರ್ತ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಲ್ಲಾರಂಡ ಕಂಠಿ ಕಾರ್ಯಪ್ಪ, ಕಾರ್ಯದರ್ಶಿ ಬಿ.ಆರ್. ಚೇತನ್, ಹಿರಿಯ ಬಿ. ಮುಳ್ಳಂಡ ಸನ್ನಿ ಅಯ್ಯಪ್ಪ, ಬಿ.ಆರ್. ವಿಮಲಾಕ್ಷಿ ಬಿಜೆಪಿಯ ಕಾರ್ಯಕರ್ತರು ಹಾಜರಿದ್ದರು.