ಬೆಂಗಳೂರು, ಮೇ 16 : ಕರ್ನಾಟಕದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. ಎಚ್.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ರಾಜ್ಯಪಾಲರನ್ನು ಭೇಟಿ ಮಾಡಿ ಜೆಡಿಎಸ್ ನಾಯಕರು ಸರ್ಕಾರ ರಚನೆಯ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ.
ಬುಧವಾರ ಬೆಳಿಗ್ಗೆ ಶಾಂಗ್ರಿಲಾ ಹೋಟೆಲ್‍ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು.’ಎಚ್.ಡಿ.ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ’ ಎಂದು ಜಿ.ಟಿ.ದೇವೇಗೌಡ ಅವರು ಘೋಷಣೆ ಮಾಡಿದರು.ಸಭೆಯ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ‘ನಾಡಿನ ಎಲ್ಲಾ ಜನರಿಗೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಧನ್ಯವಾದ’ ಎಂದು ಹೇಳಿದರು. ನಾಮಪತ್ರ ಸಲ್ಲಿಸಿದ ದಿನವೇ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸುವ ದಿನ ನಿಗದಿ ಮಾಡಿಕೊಂಡಿದ್ದಾರೆ. 15 ದಿನದ ಹಿಂದೆಯೇ ಮೇ.17ರಂದು ಪ್ರಮಾಣ ವಚನ ಸ್ವೀಕರಿಸುವೆ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು. ಬಹುಮತದ ಶಾಸಕರ ಬೆಂಬಲವಿಲ್ಲದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಹೇಗೆ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ? ನನಗೆ ರೆಸಾರ್ಟ್ ರಾಜಕೀಯ ಮಾಡಲು ಆಸಕ್ತಿ ಇಲ್ಲ. ಆದರೆ, ಬಿಜೆಪಿಯವರು ಕುದುರೆ ವ್ಯಾಪಾರ ಆರಂಭಿಸಿದರೆ ನಾನು ಶಾಸಕರನ್ನು ಕಾಪಾಡಿಕೊಳ್ಳಲು ರೆಸಾರ್ಟ್ ಹೋಗುವದು ಅನಿವಾರ್ಯವಾಗಲಿದೆ. ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡಬೇಡಿ. ಅಂತಹ ಪ್ರಯತ್ನ ಮಾಡಿದರೆ ನಾವು ನಿಮ್ಮ ಪಕ್ಷದ ಡಬಲ್ ಶಾಸಕರನ್ನು ಕರೆತರಲು ಸಿದ್ಧ . ಮಂಡ್ಯ, ರಾಮನಗರ ಭಾಗದ ಜನರಿಗೆ ನಾನು ವಿಶೇಷವಾಗಿ ಧನ್ಯವಾದ ಸಲ್ಲಿಸುತ್ತೇನೆ. ರಾಜ್ಯದ ಎಲ್ಲಾ ಜನರಿಗೆ ನಾನು ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ಜೆಡಿಎಸ್‍ನಿಂದ ಮಾತ್ರ ಸಾಧ್ಯ ಎಂದು ಉತ್ತರ ಪ್ರದೇಶದ ಚುನಾವಣೆ ಬಳಿಕ ಹೇಳಿದ್ದೆ. ಅದು ಈಗ ನಿಜವಾಗಿದೆ. . ನನಗೆ ದೇಶದ ಹಲವು ನಾಯಕರು ಕರೆ ಮಾಡಿ ಈ ಬಾರಿ ನಿರ್ಧಾರ ತೆಗೆದುಕೊಳ್ಳುವಾಗ ದುಡುಕಬೇಡಿ ಎಂದು ಹೇಳಿದ್ದಾರೆ. ಈ ಹಿಂದೆ ಮಾಡಿರುವ ತಪ್ಪನ್ನು ಮತ್ತೆ ನಾನು ಎಂದಿಗೂ ಮಾಡುವದಿಲ್ಲ . ನನಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಡೆಯಿಂದ ಆಫರ್ ಇದೆ. ಆದರೆ, ತಂದೆಯವರ ಮೇಲೆ ಕಪ್ಪುಚುಕ್ಕೆ ಬರಬಾರದು ಎಂದು ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ 38 ಶಾಸಕರನ್ನು ಇಟ್ಟುಕೊಂಡು ರಾಜ್ಯವನ್ನು ಮತ್ತೊಮ್ಮೆ ಮುನ್ನಡೆಸುವ ಅವಕಾಶ ನನಗೆ ಸಿಕ್ಕಿದೆ. ನಮ್ಮ ಕುಟುಂಬ ಶೃಂಗೇರಿ ಶಾರದಾಂಬೆ, ಮಠದ ಭಕ್ತರು. ಅವರ ಆಶೀರ್ವಾದದಿಂದಾಗಿ ಈಗ ಇಂತಹ ಪರೀಕ್ಷೆ ಎದುರಾಗಿದೆ. ದೇವೇಗೌಡರು ಅಂದು ಪ್ರಧಾನಿ ಸ್ಥಾನವನ್ನು ಬಿಟ್ಟುಕೊಟ್ಟರು. ನಮ್ಮ ಕುಟುಂಬ ಎಂದೂ ಅಧಿಕಾರಕ್ಕಾಗಿ ಆಸೆ ಪಟ್ಟಿಲ್ಲ. ಹಿಂದೆ ಕಾಂಗ್ರೆಸ್ ಪಕ್ಷದ ಜೊತೆ ಹೋಗಿದ್ದು ನಮ್ಮ ಪಕ್ಷವನ್ನು ಉಳಿಸಲು . ಶಾಸಕರಿಗೆ ಹಣದ ಆಮಿಷವೊಡ್ಡುವ ಬಿಜೆಪಿ ನಾಯಕರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ. ಜೆಡಿಎಸ್‍ನಿಂದ ಹೋದ ನಾಯಕರಿಗೆ ಕಪ್ಪು ಹಣ ನೀಡುವರೋ? ಬಿಳಿ ಹಣ ನೀಡುವರೋ? ಅಮಿತ್ ಶಾ ಅವರು ಸರ್ಕಾರ ರಚನೆ ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ. ಹಾಗಾದರೆ ಇವರಿಗೆ ಸಂವಿಧಾನದ ಆಶಯಗಳನ್ನು ಕಾಪಾಡುವ ಆಸಕ್ತಿ ಇಲ್ಲವೇ? ನೋಟುಗಳ ನಿಷೇಧ ಬಳಿಕ ಕಪ್ಪುಹಣ ಸಂಪೂರ್ಣವಾಗಿ ತೊಲಗಿದ್ದರೆ, ಬಿಜೆಪಿಯವರಿಗೆ ಶಾಸಕರಿಗೆ ನೀಡಲು ಹಣ ಎಲ್ಲಿಂದ ಬರುತ್ತದೆ? ಬಿಜೆಪಿಗೆ ಅಧಿಕಾರ ಹಿಡಿಯುವ ಅವಸರವಿದೆ. ಆದರೆ, ಅವರಿಗೆ 8 ಸೀಟುಗಳ ಕೊರತೆ ಇದೆ. ಅದಕ್ಕಾಗಿ ನಮ್ಮ ಪಕ್ಷದ ಶಾಸಕರಿಗೆ 100 ಕೋಟಿ ಹಣ, ಸಚಿವ ಸ್ಥಾನದ ಆಮಿಷವೊಡ್ಡಿದ್ದಾರೆ. ಇದು ಪ್ರಜಾಪ್ರಭುತ್ವದ ಆತಂಕಕಾರಿ ಬೆಳವಣಿಗೆಯಾಗಿದೆ. ಶಾಸಕರನ್ನು ಖರೀದಿ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಅವರಿಗೆ 100 ಕೋಟಿ ಕೊಡಲು ಹಣ ಎಲ್ಲಿಂದ ಬರುತ್ತದೆ? ನಾವು ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷದ ನೀಡಿದ ಆಹ್ವಾನವನ್ನು ಒಪ್ಪಿಕೊಂಡಿಲ್ಲ. ರಾಜ್ಯದ ಜನರ ಹಿತದೃಷ್ಠಿಯಿಂದ ಒಪ್ಪಿಕೊಂಡಿದ್ದೇವೆ ಕಾಂಗ್ರೆಸ್ ಪಕ್ಷದವರು ನಮಗೆ ಬೆಂಬಲ ಸೂಚಿಸಿದ್ದಾರೆ. ಅದಕ್ಕಾಗಿ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ 104 ಸ್ಥಾನ ಗಳಿಸುವಲ್ಲಿ ಬಿಜೆಪಿ ನಾಯಕರ ಶ್ರಮ ಏನೂ ಇಲ್ಲ. ಈ ಬಗ್ಗೆ ಬೇಕಾದರೆ ಒಟ್ಟಿಗೆ ಕುಳಿತು ಚರ್ಚೆ ಮಾಡೋಣ ಬಿಜೆಪಿಗೆ ಬಂದಿರುವ 104 ಸ್ಥಾನಗಳು ಕೆಲವು ಜನರ ತಪ್ಪಿನಿಂದ ಆಗಿದೆ. ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಕೆಲವರು ಬಿಜೆಪಿಗೆ ಮತ ಹಾಕಿದ್ದಾರೆ. ಇದು ನಮಗೆಲ್ಲಾ ಸಂತಸ ತರುವ ಫಲಿತಾಂಶವೇನಲ್ಲ. ನಾಡಿನ ಜನರ ಅಭಿವೃದ್ಧಿಗಾಗಿ ನಾನು ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಕುಮಾರಸ್ವಾಮಿ ಮುಕ್ತ ನುಡಿಯಾಡಿದರು.