ಬೆಂಗಳೂರು, ಮೇ 16: ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುವ ಭರವಸೆಯನ್ನು ರಾಜ್ಯಪಾಲರು ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯಪಾಲರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ನಿಯೋಗ ಭೇಟಿಯಾಗಿ ಬಂದ ನಂತರ ಅವರು ಮಾಧ್ಯಮಗಳಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹೊಸದಾಗಿ ಆಯ್ಕೆಯಾಗಿರುವ ಶಾಸಕರ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ಎರಡೂ ಪಕ್ಷಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರತಿಯನ್ನು ಪರಮೇಶ್ವರ್ ಮತ್ತು ನಮ್ಮ ಪಕ್ಷದ ವತಿಯಿಂದ ಜಂಟಿಯಾಗಿ ರಾಜ್ಯಪಾಲರಿಗೆ ನೀಡಿದ್ದೇವೆ. (ಮೊದಲ ಪುಟದಿಂದ) ಇಬ್ಬರೂ ಚುನಾವಣಾ ನಂತರದ ಮೈತ್ರಿ ಮಾಡಿಕೊಂಡಿರುವದನ್ನು ಮತ್ತು ಸ್ಥಿರ ಸರಕಾರ ರಚಿಸಲು 117 ಶಾಸಕರ ಬೆಂಬಲ ಇರುವ ಸಹಿಯ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿದ್ದೇವೆ. ಈಗಾಗಲೇ ಹಲವಾರು ರಾಜ್ಯದಲ್ಲಿ ಅತೀ ದೊಡ್ಡ ಪಕ್ಷವನ್ನು ಸರಕಾರ ರಚಿಸಲು ಆಹ್ವಾನಿಸದೇ, ಮೈತ್ರಿಯಲ್ಲಿ ಸರಕಾರ ರಚಿಸುವ ಶಕ್ತಿ ಇರುವ ಪಕ್ಷವನ್ನು ಆಹ್ವಾನಿಸಿದ್ದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ,” ಎಂದಿದ್ದಾರೆ.
ಈ ಸಂದರ್ಭ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, “ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದು ಅದರಲ್ಲಿ ನಾವು ಜೆಡಿಎಸ್ಗೆ ಬೆಂಬಲ ನೀಡುವ ನಿರ್ಣಯ ತೆಗೆದುಕೊಂಡಿದ್ದೆವು. ಆ ನಿರ್ಣಯವನ್ನು ರಾಜ್ಯಪಾಲರಿಗೆ ಕೊಟ್ಟಿದ್ದೇವೆ. ರಾಜ್ಯಪಾಲರು ನಾನು ಕಾನೂನಿನ ಪ್ರಕಾರ, ಸುಪ್ರೀಂ ಕೋರ್ಟ್ ಆದೇಶ ಮತ್ತು ಸಂವಿಧಾನಾತ್ಮಕವಾಗಿ ಮತ್ತು ಗೋವಾ, ಮಿಜೋರಾಂ, ಮಣಿಪುರದಲ್ಲಿ ಬೇರೆ ಬೇರೆ ಸನ್ನಿವೇಶದಲ್ಲಿ ತೆಗೆದುಕೊಂಡ ತೀರ್ಮಾನದ ಹಿನ್ನೆಲೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ,” ಎಂದು ತಿಳಿಸಿದ್ದಾರೆ.