ಮಡಿಕೇರಿ, ಮೇ 15: ಕೈ ಹಿಡಿಯಲಿಲ್ಲ, ಮಹಿಳೆ ತೆನೆಹೊರಲಿಲ್ಲ, ಕಮಲ ಅಲುಗಾಡಲಿಲ್ಲ, ಈ ಶೀರ್ಷಿಕೆಯನ್ನು ಗಮನಿಸಿಯೇ ಜನತೆ ಫಲಿತಾಂಶವನ್ನು ಊಹಿಸಿಕೊಳ್ಳಬಹುದು. 2018ರ ಮೇ 15ನೇ ಮಂಗಳವಾರದ ಈ ದಿನವನ್ನು ಕೊಡಗಿನ ಜನತೆ ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುವಂತದ್ದಾಗಿದೆ. ರಾಜ್ಯ ವಿಧಾನಸಭೆಗೆ ನಡೆದ ಈ ಬಾರಿಯ ಪ್ರತಿಷ್ಠಿತವಾದ, ಅದರಲ್ಲೂ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಮತ ಸಮರದ ಫಲಿತಾಂಶ ಹೊರ ಬಿದ್ದಿದೆ. ಅನೇಕಾನೇಕ ಕಾರಣಗಳಿಂದಾಗಿ ಕೊಡಗು ಜಿಲ್ಲೆಯ ಮಟ್ಟಿಗೆ ತೀವ್ರ ಕುತೂಹಲ ಕೆರಳಿಸಿದ ಈ ಬಾರಿಯ ಚುನಾವಣೆಯ ಫಲಿತಾಂಶ ಹಲವರಿಗೆ ನಿರೀಕ್ಷಿತ... ಇನ್ನು ಹಲವರಿಗೆ ಅನಿರೀಕ್ಷಿತ... ಉಳಿದಂತೆ ಬಹುತೇಕ ಮಂದಿಗೆ ಇದು ಅಚ್ಚರಿದಾಯಕವಾಗಿ ಹೊರ ಬಿದ್ದಿರುವದಂತೂ ಸತ್ಯ.2008ರಲ್ಲಿ ಕೊಡಗು ಜಿಲ್ಲೆ ಎರಡು ವಿಧಾನ ಸಭಾ ಕ್ಷೇತ್ರಗಳಾಗಿ ಸೀಮಿತಗೊಂಡ ಬಳಿಕದ ಮೂರನೇ ಚುನಾವಣೆ ಇದಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿರುವ ಅಭ್ಯರ್ಥಿಗಳು ‘ಹ್ಯಾಟ್ರಿಕ್’ ಗೆಲುವಿನೊಂದಿಗೆ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದಲ್ಲೂ ಗಮನ ಸೆಳೆದಿದ್ದಾರೆ.
ಹೀಗಾಗಬಹುದು - ಹಾಗಾಗಬಹುದು ಎಂಬ ಎಲ್ಲಾ ಊಹಾಪೋಹಗಳಿಗೆ ಈ ಇಬ್ಬರು ಅಭ್ಯರ್ಥಿಗಳು ತಕ್ಕುದಾದ ಉತ್ತರವನ್ನು ನೀಡಿದ್ದು, ಈ ಹಿಂದಿನ ಚುನಾವಣೆಗಳಿಗಿಂತಲೂ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ಅಭೂತಪೂರ್ವವಾದ ಜಯವನ್ನು ತಮ್ಮದಾಗಿಸಿಕೊಂಡಿದ್ದಾರಲ್ಲದೆ, ತಾವು ಪ್ರತಿನಿಧಿಸುತ್ತಿರುವ ಪಕ್ಷದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಮಡಿಕೇರಿ ಕ್ಷೇತ್ರ ಹಾಗೂ ವೀರಾಜಪೇಟೆ ಕ್ಷೇತ್ರ ಈ ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದವರು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಅಭ್ಯರ್ಥಿಗಳಾದ ಮಂಡೇಪಂಡ ಪಿ. ಅಪ್ಪಚ್ಚುರಂಜನ್ ಹಾಗೂ ಕೊಂಬಾರನ ಜಿ. ಬೋಪಯ್ಯ ಅವರಗಳು. ಮಡಿಕೇರಿ ಅಭ್ಯರ್ಥಿ ಅಪ್ಪಚ್ಚುರಂಜನ್ ಅವರ ಗೆಲುವಿನ ಅಂತರ 16015 ಮತಗಳಾದರೆ, ವೀರಾಜಪೇಟೆಯ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರ ಗೆಲುವಿನ ಅಂತರ 13,657 ಮತಗಳು.
ಅಪ್ಪಚ್ಚುರಂಜನ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಎ. ಜೀವಿಜಯ ಅವರ ವಿರುದ್ಧ ಗೆಲುವು ಸಾಧಿಸಿದರೆ, ಕೆ.ಜಿ. ಬೋಪಯ್ಯ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ಅವರ ಎದುರು ಈ ವಿಜಯ ಸಾಧಿಸಿದ್ದಾರೆ. ಈ ವಿಜೇತ ಅಭ್ಯರ್ಥಿಗಳ ನಡುವೆ ಸ್ಪರ್ಧೆಯಲ್ಲಿದ್ದ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಹಾಗೂ ವೀರಾಜಪೇಟೆ ಕ್ಷೇತ್ರದ ಜೆಡಿಎಸ್ನ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರುಗಳು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇನ್ನು ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧೆಯಲ್ಲಿದ್ದ ಎಂಇಪಿ ಪಕ್ಷದ ಅಭ್ಯರ್ಥಿ ರಷೀದಾ ಬೇಗಂ ಸೇರಿದಂತೆ ಇತರ 7 ಮಂದಿ ಪಕ್ಷೇತರರು ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧೆಯಲ್ಲಿದ್ದ ಮಾಜಿ ಶಾಸಕ ಎಂಇಪಿಯ ಹೆಚ್.ಡಿ. ಬಸವರಾಜು ಸೇರಿದಂತೆ ಇತರ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಠೇವಣಿ ಕಳೆದು ಕೊಂಡಿದ್ದಾರೆ.
ಏನೇನಾಯಿತು... ಯಾರಿಗೆ ಎಷ್ಟು ಮತ
ಮೇ 12 ರಂದು ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ತಾ. 15 ರಂದು ಮಡಿಕೇರಿಯ ಸಂತಜೋಸೆಫರ ಶಾಲಾ ಆವರಣದಲ್ಲಿ ಕಟ್ಟುನಿಟ್ಟಿನ ಭದ್ರತೆಯ ನಡುವೆ ನಡೆಯಿತು. ಎರಡೂ ಕ್ಷೇತ್ರಗಳ ಪೈಕಿ ಮಡಿಕೇರಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ನೇರ ಸ್ಪರ್ಧೆ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ನೇರ ಸ್ಪರ್ಧೆ ಎಂಬ ವಿಶ್ಲೇಷಣೆ, ಚರ್ಚೆಗಳು ಚುನಾವಣೆಗೆ ಮುಂಚಿತವಾಗಿಯೂ ಇತ್ತಲ್ಲದೆ, ಮತ ಸಮರದ ಬಳಿಕವೂ ಇದೇ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿತ್ತು. ಎರಡು ಕ್ಷೇತ್ರದಲ್ಲೂ ಯಾರೇ ಗೆದ್ದರೂ ಅದು ಸಣ್ಣ ಅಂತರದ ಗೆಲುವು ಮಾತ್ರ ಎಂಬ ಮಾತು ಎಲ್ಲರ ಬಾಯಲ್ಲಿ ಇತ್ತು. ಈ ಕಾರಣದಿಂದಾಗಿ ಈ ಹಿಂದಿನ ಚುನಾವಣೆಗಳಲ್ಲಿ ಕಂಡುಬಂದಿದ್ದ ಭದ್ರತೆ ಇನ್ನೂ ಬಿಗಿಯಾಗಿತ್ತು. ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ ದೊರೆತರೂ ಜಯ - ಅಪಜಯದ ಬಗ್ಗೆ ಯಾರು ನಿಖರವಾಗಿ ಹೇಳಲು ಸಾಧ್ಯವಿಲ್ಲದಂತಿದ್ದ ಪರಿಸ್ಥಿತಿಯಿಂದ ಆರಂಭದಲ್ಲಿ ಹೆಚ್ಚಿನ ಉತ್ಸಾಹ ಯಾರಲ್ಲೂ ಕಂಡು ಬಾರಲಿಲ್ಲ.
ಬಿಜೆಪಿ ಅಭ್ಯರ್ಥಿಗಳಾದ ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಮತ್ತು ಕಾಂಗ್ರೆಸ್ನ ಅರುಣ್ ಮಾಚಯ್ಯ ಹಾಗೂ ಸಂಕೇತ್ ಪೂವಯ್ಯ ಅವರುಗಳು ತಮ್ಮ ಬೆಂಬಲಿಗರೊಂದಿಗೆ ಮತ ಎಣಿಕಾ ಕೇಂದ್ರದಲ್ಲಿ ಕಂಡು ಬಂದರು. ಕೆ.ಪಿ. ಚಂದ್ರಕಲಾ ಹಾಗೂ ಬಿ.ಎ. ಜೀವಿಜಯ ಅವರುಗಳು ಎಲ್ಲೂ ಗೋಚರಿಸಲಿಲ್ಲ.
ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಶ್ರೀ ವಿದ್ಯಾ ನೇತೃತ್ವದ ತಂಡ ಎಸ್ಪಿ ರಾಜೇಂದ್ರ ಪ್ರಸಾದ್ ಮುಂದಾಳತ್ವದ ರಕ್ಷಣಾ ಪಡೆಯ ಬಿಗಿ ಉಸ್ತುವಾರಿಯಲ್ಲಿ ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಆರಂಭದಲ್ಲಿ ಮಾಧ್ಯಮದವರಿಗೆ ಕೆಲವು ಹೊತ್ತು ಸೂಕ್ತ ಮಾಹಿತಿ ದೊರಕದಿದ್ದುದು ಹಾಗೂ ಕಿರಿ ಕಿರಿ ಎನಿಸುವಷ್ಟರ ಭದ್ರತೆಯಿಂದ ಮಾಧ್ಯಮದವರು ಹಾಗೂ ಅಧಿಕಾರಿಗಳ ನಡುವೆ ಬಿಸಿ ಬಿಸಿ ಮಾತುಕತೆ ನಡೆದ ಪ್ರಸಂಗವೂ ನಡೆಯಿತು.
ಫಲಿತಾಂಶ ಹೊರ ಬೀಳಲಾರಂಭ
ಈ ಬೆಳವಣಿಗೆ ತಿಳಿಯಾಗುತ್ತಿದ್ದಂತೆ ಫಲಿತಾಂಶ ನಿಧಾನ ಗತಿಯಲ್ಲಿ ಪ್ರಕಟಗೊಳ್ಳತೊಡಗಿತು. ಎರಡು ಕ್ಷೇತ್ರಗಳ ಮತ ಎಣಿಕೆ ವಿವಿಧ ಸುತ್ತುಗಳಂತೆ ಭಿತ್ತರಗೊಳ್ಳುತ್ತಿದ್ದಂತೆ ಎಲ್ಲರೂ ಈ ಬಗ್ಗೆ ಕುತೂಹಲಭರಿತರಾದರು.
ಮಡಿಕೇರಿ ಕ್ಷೇತ್ರ: ಮಡಿಕೇರಿ ಕ್ಷೇತ್ರದ ಮತ ಎಣಿಕೆ ಒಟ್ಟು 20 ಸುತ್ತುಗಳಲ್ಲಿ ನಡೆಯಿತು. ಆರಂಭದ 8 ಸುತ್ತುಗಳ ತನಕ ಜೆಡಿಎಸ್ನ ಬಿ.ಎ. ಜೀವಿಜಯ ಅವರು 5,262 ಮತಗಳಿಂದ ಮುಂದಿದ್ದರು. ನಂತರದ ಎಣಿಕೆಯಲ್ಲಿ ಈ ಅಂತರ ಕುಂಠಿತವಾಗತೊಡಗಿತ್ತಲ್ಲದೆ,
(ಮೊದಲ ಪುಟದಿಂದ) 13ನೇ ಸುತ್ತಿನಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ 1179 ಮತಗಳ ಮುನ್ನಡೆಗಳಿಸಿದರು. ಉಳಿದ 7 ಸುತ್ತಿನಲ್ಲಿ ಈ ಅಂತರ 16015ಕ್ಕೆ ಏರಿದಾಗ ಜೆಡಿಎಸ್ ಗೆಲುವಿನ ನಿರೀಕ್ಷೆಯಲ್ಲಿದ್ದ ಬೆಂಬಲಿಗರು ಹಪಹಪಿಸುತ್ತಾ ಸ್ಥಳದಿಂದ ತೆರಳುತ್ತಿ ದ್ದುದು ಕಂಡು ಬಂದಿತು.
ವೀರಾಜಪೇಟೆ ಕ್ಷೇತ್ರ
ವೀರಾಜಪೇಟೆ ಕ್ಷೇತ್ರದಲ್ಲಿ ಆರಂಭದ ಸುತ್ತಿನಿಂದಲೇ ಕೆ.ಜಿ. ಬೋಪಯ್ಯ ಅವರು ಮುನ್ನಡೆಗಳಿಸ ಲಾರಂಭಿಸಿದರು. ಕೊನೆ ತನಕವೂ ಬೋಪಯ್ಯ ಮುನ್ನಡೆ ಅಬಾಧಿತವಾಗಿ ಕೊನೆಗೆ 13,657 ಮತಗಳಿಂದ ಜಯಶಾಲಿಯಾದರು. ಬೋಪಯ್ಯ ಗೆಲುವು ಬಹುತೇಕ ಆರಂಭದಲ್ಲೇ ಖಚಿತವಾದಂತಿತ್ತು.ಜಯಕಾರ ಮೊಳಗಿತು : ಮತ ಎಣಿಕೆ ಸಂದರ್ಭ ಆಗಮಿಸಿದ್ದ ಕಾರ್ಯಕರ್ತರನ್ನು ಸಂತ ಜೋಸೆಫರ ಶಾಲಾ ಮೈದಾನದಲ್ಲಿ ತಡೆ ಹಿಡಿಯಲಾಗಿತ್ತು. ಬಿಜೆಪಿ ಅಭ್ಯರ್ಥಿಗಳ ಗೆಲುವು ಖಾತರಿಗೊಳ್ಳುತ್ತಿದ್ದಂತೆ ಬಿಜೆಪಿ ಮುಖಂಡರುಗಳ ಮೊಗದಲ್ಲಿ ಮಂದಹಾಸ ಮಿನುಗಿದರೆ, ಮಾಹಿತಿ ಪಡೆದ ಬೆಂಬಲಿಗರಿಂದ ಅಭ್ಯರ್ಥಿಗಳ ಪರ ಜಯ ಘೋಷಗಳು ಬ್ಯಾಂಡ್ ವಾದನದ ನಡುವೆ ಕೇಳಲಾರಂಭಿಸಿತು. ಸೋಲು ಖಚಿತವಾದರೂ ಅರುಣ್ ಮಾಚಯ್ಯ ಹಾಗೂ ಸಂಕೇತ್ ಪೂವಯ್ಯ ಅವರುಗಳು ಕೊನೆ ತನಕವೂ ಮತ ಎಣಿಕಾ ಕೇಂದ್ರದಲ್ಲಿ ಕಂಡು ಬಂದಿದ್ದು, ವಿಶೇಷವಾಗಿತ್ತು.