ಬೆಂಗಳೂರು, ಮೇ 16: ಜೆಡಿಎಸ್‍ನೊಂದಿಗೆ ಮೈತ್ರಿ ಸರ್ಕಾರ ರಚನೆಯ ಸಾಧ್ಯತೆಗಳು ಕ್ಷೀಣಿಸಿರುವದನ್ನು ಮನಗಂಡಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಬೆಂಬಲ ಪಡೆದುಕೊಳ್ಳುವ ಕಸರತ್ತು ಆರಂಭಿಸಿದೆ. ಕಾಂಗ್ರೆಸ್‍ನಲ್ಲಿರುವ ಲಿಂಗಾಯತ ಶಾಸಕರು, ಸಚಿವ ಸ್ಥಾನ ಮತ್ತು ಉನ್ನತ ಹುದ್ದೆಗಳ ಆಕಾಂಕ್ಷಿಗಳಿಗೆ ಆಮಿಷವೊಡ್ಡಲು ಆರಂಭಿಸಿದೆ. ಹೀಗಾಗಿ ತನ್ನ ಶಾಸಕರು ಬಿಜೆಪಿಯ ತೆಕ್ಕೆಗೆ ಜಾರದಂತೆ ನೋಡಿಕೊಳ್ಳುವದು ಕಾಂಗ್ರೆಸ್‍ಗೆ ದೊಡ್ಡ ತಲೆನೋವಾಗಿದೆ. ಶಾಸಕರನ್ನು ಬೇರಾವ ಪಕ್ಷದ ಮುಖಂಡರೂ ಸಂಪರ್ಕಿಸದಂತೆ ತಡೆಯಲು ಮತ್ತು ಅವರು ಬಿಜೆಪಿಯತ್ತ ಹೊರಳದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಮುಖಂಡ ಡಿ.ಕೆ. ಶಿವಕುಮಾರ್ ಅವರಿಗೆ ಒಪ್ಪಿಸಲಾಗಿದೆ. ಕಾಂಗ್ರೆಸ್ ಸಭೆಯ ಬಳಿಕ ಎಲ್ಲ ಶಾಸಕರನ್ನೂ ಬೆಂಗಳೂರಿನ ಈಗಲ್‍ಟನ್ ರೆಸಾರ್ಟ್‍ನತ್ತ ಕರೆದೊಯ್ಯುವ ನಿರೀಕ್ಷೆಯಿದೆ. ಪ್ರಸಕ್ತ ರಾಜಕೀಯ ವಾತಾವರಣದಿಂದ ಎಲ್ಲರನ್ನೂ ದೂರವಿರಿಸಲು ಶಾಸಕರನ್ನು ಬಳಿಕ ಕೇರಳದ ಕೊಚ್ಚಿಗೆ ಕರೆದೊಯ್ಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈಗಾಗಲೇ ಜೆಡಿಎಸ್ ಶಾಸಕರನ್ನು ಕೊಚ್ಚಿಗೆ ಕರೆದೊಯ್ಯಲು ಪಕ್ಷದ ಮುಖಂಡರು ಸಿದ್ಧತೆ ನಡೆಸಿದ್ದಾರೆ.

ಕಳೆದ ವರ್ಷ ಗುಜರಾತ್‍ನಲ್ಲಿ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನಗಳು ನಡೆದಾಗ ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ಈಗಲ್‍ಟನ್ ರೆಸಾರ್ಟ್‍ನಲ್ಲಿ ಇರಿಸಲಾಗಿತ್ತು. ಆಗ ಡಿ.ಕೆ. ಶಿವಕುಮಾರ್ ಅವರೇ ಈ ಎಲ್ಲ ಶಾಸಕರ ಯೋಗ ಕ್ಷೇಮ ನೋಡಿಕೊಂಡಿದ್ದರು. ಅವರನ್ನು ಬೇರಾರೂ ಸಂಪರ್ಕಿಸದಂತೆ ಮತ್ತು ಅವರಿಗೆ ಯಾವ ತೊಂದರೆಯೂ ಆಗದಂತೆ ಇದ್ದಲ್ಲಿಗೆ ಎಲ್ಲ ಸೌಲಭ್ಯಗಳನ್ನು ಪೂರೈಸುವ ವ್ಯವಸ್ಥೆ ಕಲ್ಪಿಸಿದ್ದರು. ಈಗಲೂ ಕಾಂಗ್ರೆಸ್ ನಾಯಕರು ಬೇರೆಡೆ ಜಾರಿಕೊಳ್ಳದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಡಿ.ಕೆ. ಶಿವಕುಮಾರ್ ನಿಭಾಯಿಸುತ್ತಿದ್ದಾರೆ. ಶಾಸಕರನ್ನು ರೆಸಾರ್ಟ್‍ಗೆ ಕರೆದೊಯ್ಯುವ ಮತ್ತು ಅವರಿಗೆ ಎಲ್ಲ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಲಿದ್ದಾರೆ.