ಜನರ ಆಶೀರ್ವಾದ: ರಂಜನ್ಕಾ ರ್ಯಕರ್ತರ ಶ್ರಮ, ಕೇಂದ್ರ ಸರಕಾರದ ಸಾಧನೆಗಳಿಂದಾಗಿ ಜನತೆ ತನಗೆ ಆಶೀರ್ವಾದ ಮಾಡಿದ್ದು, ನಿರೀಕ್ಷೆಗಿಂತ ಹೆಚ್ಚಿನ ಮತಗಳು ಲಭಿಸಿದೆ. ಜಾತಿ ಲೆಕ್ಕಾಚಾರವೂ ಚುನಾವಣೆಯಲ್ಲಿ ಕೆಲವೆಡೆ ಕೆಲಸ ಮಾಡಿದೆ. ಆದರೂ ಮೇಲುಗೈ ಸಾಧಿಸಿರುವ ತಾನು, ಸರ್ವರ ಅಭಿವೃದ್ಧಿಗಾಗಿ ಕೆಲಸ ಮಾಡುವದಾಗಿ ಮಡಿಕೇರಿ ಕ್ಷೇತ್ರದ ವಿಜೇತ ಅಭ್ಯರ್ಥಿ ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ. ಜಿಲ್ಲೆಯ ಸ್ವಾಭಿಮಾನದ ಗೆಲುವು: ಕೆ.ಜಿ.ಬಿ.

ಕೊಡಗಿನಲ್ಲಿ ಡೋಂಗಿ ಜಾತಿ, ರಾಜಕೀಯ ನಡೆಯುವದಿಲ್ಲ ಎಂಬದು ಸಾಬೀತಾಗಿದೆ. ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿಯವರ ಕೆಲಸವನ್ನು ಜನ ಮೆಚ್ಚಿದ್ದಾರೆ. ಇನ್ನು ಮುಂದೆಯಾದರೂ ಡೋಂಗಿ ಜಾತಿ ರಾಜಕೀಯ ಜಿಲ್ಲೆಯಲ್ಲಿ ಕೊನೆಗೊಳ್ಳಬೇಕು. ಕೇಂದ್ರ ಸರಕಾರದ ಕೆಲಸವೂ ಬಿಜೆಪಿಗೆ ವರದಾನವಾಗಿದ್ದು, ತನ್ನ ಗೆಲುವು ಕೊಡಗಿನ ಸ್ವಾಭಿಮಾನದ ಗೆಲುವು. ಸಿದ್ದರಾಮಯ್ಯ ನೇತೃತ್ವದ ಸರಕಾರದ ದುರಾಡಳಿತವನ್ನು ಜನ ತಿರಸ್ಕರಿಸಿದ್ದು, ಕಾರ್ಯಕರ್ತರ ಸಮಾರೋಪಾದಿ ಕೆಲಸದಿಂದ ಜಯಗಳಿಸಲು ಸಾಧ್ಯವಾಯಿತು. ಇದೀಗ ಕೊಡಗು ಕಾಂಗ್ರೆಸ್ ಮುಕ್ತವಾಗಿದೆ ಎಂದು ವೀರಾಜಪೇಟೆ ಕ್ಷೇತ್ರದಲ್ಲಿ ವಿಜೇತ ಅಭ್ಯರ್ಥಿ ಬಿಜೆಪಿಯ ಕೆ.ಜಿ. ಬೋಪಯ್ಯ ಹೇಳಿದರು.

ಗೆದ್ದವರು ಉತ್ತಮ ಸೇವೆ ಮಾಡಲಿ: ಸಂಕೇತ್

ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಜನರಿಂದ ಆಯ್ಕೆ ಆದವರು ಉತ್ತಮವಾಗಿ ಜನಸೇವೆ ಮಾಡುವಂತಾಗಲಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ವೀರಾಜಪೇಟೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಸಂಕೇತ್ ಪೂವಯ್ಯ ಹೇಳಿದ್ದಾರೆ. ಜೆಡಿಎಸ್ ಚುನಾವಣಾ ಕೇಂದ್ರೀಕೃತ ರಾಜಕೀಯ ಮಾಡುವದಿಲ್ಲ. ಮುಂದಿನ ದಿನಗಳಲ್ಲಿಯು ಜನಪರ ಕೆಲಸವನ್ನು ಮಾಡಲಾಗುತ್ತದೆ ಎಂದು ಸಂಕೇತ್ ನುಡಿದರು.

ಸೋಲನ್ನು ಗೌರವಯುತವಾಗಿ ಸ್ವೀಕರಿಸುತ್ತೇನೆ: ಅರುಣ್

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರದ ಉತ್ತಮ ಕೆಲಸಗಳು, ಸಿದ್ದರಾಮಯ್ಯ ಅವರ ಜನಪರ ಯೋಜನೆಗಳಿಗೆ ಮತದಾರರು ಬೆಂಬಲಿಸುವ ನಿರೀಕ್ಷೆಯಿತ್ತು. ಆದರೆ ಅದು ಫಲಕೊಡಲಿಲ್ಲ. ಹೀಗಿದ್ದರೂ ತಾನು ತನ್ನ ಸೋಲನ್ನು ಗೌರವಯುತವಾಗಿ ಸ್ವೀಕರಿಸುತ್ತೇನೆ ಎಂದು ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್‍ನ ಪರಾಜಿತ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ಹೇಳಿದರು.

ಅಭ್ಯರ್ಥಿ ಘೋಷಣೆ ವಿಳಂಬ: ಶಿವು ಮಾದಪ್ಪ

ಕಾಂಗ್ರೆಸ್‍ನಿಂದ ಕೊಡಗಿನಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳಾಗಿತ್ತು. ಜನರ ಒಲವು ಕೂಡ ಕಾಂಗ್ರೆಸ್ ಪರವಾಗಿತ್ತು. ಆದರೆ ಅಭ್ಯರ್ಥಿಗಳನ್ನು ಘೋಷಿಸುವಲ್ಲಿ ಅನುಸರಿಸಲಾದ ವಿಳಂಬ ಧೋರಣೆಯಿಂದ ಹಿನ್ನೆಡೆ ಉಂಟಾಯಿತು. ಪ್ರಚಾರ ಕಾರ್ಯ ಚುರುಕುಗೊಳಿಸಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ ಸಿಗಲಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಹೇಳಿದರು.

ಅಭಿವೃದ್ಧಿಗೆ ಸಿಕ್ಕ ಜಯ: ಭಾರತೀಶ್

ಕೊಡಗು ಬಿಜೆಪಿಯ ಭದ್ರಕೋಟೆ ಎಂಬದು ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿ ಶಾಸಕರುಗಳು ಜಿಲ್ಲೆಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳೇ ಅವರುಗಳಿಗೆ ಗೆಲುವನ್ನು ತಂದುಕೊಟ್ಟಿದೆ. ಕೇಂದ್ರ ಸರಕಾರ ಸಾಧನೆಗಳೇ ಬಿಜೆಪಿಗೆ ಶ್ರೀರಕ್ಷೆಯಾಗಿದ್ದು, ಈ ಫಲಿತಾಂಶ 2019ರ ಲೋಕಸಭಾ ಚುನಾವಣೆಗೆ ಮುನ್ನುಡಿಯಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಹೇಳಿದ್ದಾರೆ.

ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರುಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದು, ಲಭ್ಯವಾಗಲಿಲ್ಲ.