ರಂಜಾನ್ ಇದು ಮುಸಲ್ಮಾನರ ಅನುಗ್ರಹೀತ ಮಾಸ. ವರ್ಷದ ಹನ್ನೆರಡು ತಿಂಗಳುಗಳ ನೇತಾರ ಈ ರಮಲಾನ್ (ರಂಜಾನ್) ಇಸ್ಲಾಮಿಕ್ ಕ್ಯಾಲೆಂಡರಿನ ಒಂಭತ್ತನೇ ತಿಂಗಳಾದ ರಂಜಾನ್, ಮುಸ್ಲಿಮರ ಪಾಲಿಗೆ ಪುಣ್ಯಗಳ ಕೊಯ್ಲು ಕಾಲವಾಗಿದೆ. ಇತರ 11 ತಿಂಗಳುಗಳಿಗಿಲ್ಲದ ವಿಶೇಷತೆ ಪವಿತ್ರ ರಂಜಾನ್‍ಗಿದೆ. ಪವಿತ್ರ ಗ್ರಂಥ ಕುರ್‍ಆನ್ ಅವತೀರ್ಣಗೊಂಡ ಪುನೀತ ತಿಂಗಳು ಇದಾಗಿದೆ.

ರಮಲಾನ್ ತಿಂಗಳಲ್ಲಿ ಹಗಲು ಹೊತ್ತಿನಲ್ಲಿ ಮುಸ್ಲಿಮರು ಉಪವಾಸ ಆಚರಿಸುತ್ತಾರೆ. ಅದು ಸೆಕೆ ಕಾಲವಾದರೂ, ಚಳಿಯಾದರೂ, ಮಟಮಟ ಮಧ್ಯಾಹ್ನ ಸುಡು ಬಿಸಿಲಿನಲ್ಲಿ ದಾಹದಿಂದ ಬಳಲಿದರೂ, ಮಳೆಗಾಲವಾದರೂ, ಹಸಿವಿನಿಂದ ಕಂಗೆಟ್ಟರೂ ಮುಸ್ಲಿಮರು ಕಡ್ಡಾಯವಾಗಿ ಉಪವಾಸ ಆಚರಿಸುತ್ತಾರೆ. ಸತ್ಯ ವಿಶ್ವಾಸದ ಸಬಲೀಕರಣಕ್ಕೆ ಇದು ಸಕಾಲವಾಗಿದೆ. ಹಗಲು ಪೂರ್ತಿ ಸರ್ವಶಕ್ತನ ತೃಪ್ತಿಗಾಗಿ ಅನ್ನಹಾರಗಳನ್ನು ತ್ಯಜಿಸಿ ವ್ರತಾಚರಿಸುವ, ರಾತ್ರಿಗಳಲ್ಲಿ ನಮಾಝ್, ಪ್ರಾರ್ಥನೆಗಳಲ್ಲಿ ನಿದ್ದೆಗೆಟ್ಟು ಆರಾಧನಾ ಕರ್ಮಗಳಲ್ಲಿ ಮಗ್ನರಾಗುವ ಸತ್ಯ ವಿಶ್ವಾಸಿಗಳು ತಮ್ಮ ಆತ್ಮಶುದ್ಧಿ ಯನ್ನು ಮಾಡಿಕೊಳ್ಳುವಂತಹ ಸುವರ್ಣಾವಕಾಶವನ್ನು ಈ ಪುಣ್ಯ ಮಾಸ ನೀಡಿದೆ.

ಪರಲೋಕದಲ್ಲಿ ದೇವನ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು, ಅಗತ್ಯವಾದ ಪುಣ್ಯಗಳ ಭಾರವನ್ನು ಹೆಚ್ಚಿಸಿ ಪಾಪಗಳ ಭಾರವನ್ನು ತಗ್ಗಿಸಲು ಉಪವಾಸದೊಂದಿಗೆ ಎಲ್ಲ ದುಷ್ಕøತ್ಯ, ಪಾಪಗಳಿಂದ ದೂರವಿರಬೇಕು. ಒಂದು ಸತ್ಕರ್ಮಕ್ಕೆ ಕನಿಷ್ಠ ಎಪ್ಪತ್ತು ಪಟ್ಟು ಪುಣ್ಯ ಲಭಿಸುವ ಈ ಪವಿತ್ರ ತಿಂಗಳು ಈಗ ಸಮಾಗಮವಾಗಿದೆ. ಉಪವಾಸದ ಉದ್ದೇಶ ಹೃದಯದ ಶುದ್ಧೀಕರಣ. ಆದ್ದರಿಂದ ಅನ್ನಹಾರ ತ್ಯಜಿಸಿ ಆರಾಧನೆಯಲ್ಲಿ ಮಗ್ನರಾದೊಡನೆ ಆ ಉಪವಾಸ ಸಿಂಧುವಾಗದು. ಚಾಡಿ, ಪರನಿಂದೆ, ಅಸಭ್ಯ ನುಡಿ, ಗೇಲಿಮಾತು, ಸುಳ್ಳು, ಮೋಸ, ಬಡ್ಡಿ ವ್ಯವಹಾರ, ವ್ಯಭಿಚಾರ, ಕಳ್ಳತನ ಮುಂತಾದ ಯಾವುದೇ ನಿಷಿದ್ಧ ಕಾರ್ಯಗಳನ್ನು ಮಾಡಿದಲ್ಲಿ ವ್ರತಭಂಗವಾಗುತ್ತದೆ.

ಹಗಲಿಡೀ ಬೆವರು ಹರಿಸಿ, ಮೈಮುರಿದು ದುಡಿದು, ಕಂಗೆಟ್ಟು ಸಂಜೆ ಕೂಲಿಯಿಲ್ಲದೆ ಬರಿಗೈಲಿ ಮನೆಗೆ ಮರಳುವ ಪರಿಸ್ಥಿತಿ ಒಮ್ಮೆ ಊಹಿಸಿ! ಅಂತೆಯೇ ಉಪವಾಸವಿದ್ದು, ನಮ್ಮ ನಾಲಗೆಯನ್ನೊಳಗೊಂಡಂತೆ ಇಂದ್ರಿಯ ನಿಗ್ರಹವನ್ನು ಮಾಡದಿದ್ದರೆ ಉಪವಾಸದ ಯಾವ ಪ್ರತಿಫಲವನ್ನೂ ಪಡೆಯಲಾಗದು. ಪವಿತ್ರ ಕುರ್‍ಆನ್ ಅವತೀರ್ಣಗೊಂಡಿದ್ದು, ಈ ಪುಣ್ಯಮಾಸದಲ್ಲಾದ ಕಾರಣ ಆದಷ್ಟು ಕುರ್‍ಆನ್ ಪಾರಾಯಣದಲ್ಲಿ ತಮ್ಮನ್ನು ತೊಡಗಿಸಿ, ಸತ್ಕರ್ಮಗಳನ್ನು ಮಾಡಿ ಪುಣ್ಯವನ್ನು ಬಾಚುವಂತಹ ಸುವರ್ಣ ಅವಕಾಶವನ್ನು ಪ್ರತಿಯೊಬ್ಬ ಮುಸ್ಲಿಮನು ಪಡೆದುಕೊಳ್ಳಬಹುದಾಗಿದೆ.

ಇದು ಕ್ಷಮೆ ಮತ್ತು ಸಹನೆಯ ತಿಂಗಳು. ಸ್ವರ್ಗದ ಬಾಗಿಲುಗಳು ತೆರೆಯಲ್ಪಟ್ಟು, ನರಕದ ಕದಗಳು ಮುಚ್ಚಲ್ಪಡುವ ಕಾಲ. ನಿರಂತರ ಅನುಗ್ರಹ ವರ್ಷಿಸುವ ನಿಮಿಷಗಳು ಕೆಡುಕಿನಿಂದ ದೂರವಾದ ಹೃದಯಗಳು ನಿರ್ಮಲವಾಗುತ್ತದೆ. ಒಳಿತುಗಳ ಒರತೆ ಮನದಾಳದಿಂದ ಚಿಮ್ಮಿ ಆರಾಧನೆಯ ಅನಿರ್ವಚನೀಯ ಮಧುರಾನುಭೂತಿ ಸವಿಯುವ ಸುಸಮಯವಾಗಿದೆ.

ನಿರ್ಗತಿಕರ ಹಸಿವೆಯ ಬವಣೆಯನ್ನು ಅರಿಯಲು ಶ್ರೀಮಂತರಿಗೆ ಈ ಮಾಸ ಸಹಾಯಕವಾಗಿದೆ. ನೊಂದ ಜನರ ಕಣ್ಣಲ್ಲಿ ಈ ಮಾಸದ ದಾನಧರ್ಮಗಳು ಆಶಾಕಿರಣ ಮೂಡಿಸುತ್ತದೆ.

ಸತ್ಕರ್ಮಗಳ ಪೈಕಿ ದಾನಕ್ಕೆ ವಿಶೇಷ ಮಹತ್ವವಿದೆ. ಅದರಲ್ಲೂ ರಮಲಾನಿನಲ್ಲಿ ನೀಡುವ ದಾನಕ್ಕೆ ಹೆಚ್ಚು ಪ್ರತಿಫಲವಿದೆ. ದಾನಧರ್ಮವು ಸ್ವರ್ಗದ ಹಾದಿಯನ್ನು ಸುಗಮಗೊಳಿಸುತ್ತದೆ. ಒಂದು ಖರ್ಜೂರದ ತುಂಡನ್ನಾದರೂ ದಾನ ನೀಡುವ ಮೂಲಕ ನೀವು ನರಕದಿಂದ ವಿಮೋಚಿತರಾಗಿ ಎಂದು ಪ್ರವಾದಿ ವಚನವಿದೆ.

ಪಾಪಗಳನ್ನು ತೊಳೆದುಕೊಳ್ಳಲು ಇದು ಸಕಾಲವಾಗಿದೆ. ಮನುಷ್ಯನಲ್ಲಿ ಪಾಪಪ್ರಜ್ಞೆ ಮೂಡಿಸಿ, ಪಶ್ಚಾತ್ತಾಪದಿಂದ ಕಣ್ಣೀರು ಹರಿಸಿ ಕ್ಷಮೆ ಕೇಳಿದಲ್ಲಿ ಕರುಣಾಮಯನಾದ ಅಲ್ಲಾಹನಿಂದ ಪಾಪ ವಿಮೋಚನೆಯನ್ನು ಪಡೆದುಕೊಳ್ಳಬಹುದು.

ರಂಜಾನ್ ಸಹನೆಯ ತಿಂಗಳು. ಸಹನೆಯ ಪ್ರತಿಫಲ ಸ್ವರ್ಗ. ಸಹೋದರತೆಯನ್ನು ಬಲಪಡಿಸುವ ಹಾಗೂ ಪರಸ್ಪರ ಸಹಕಾರ ವಿನಿಮಯದ ಈ ಮಾಸ ಸತ್ಯವಿಶ್ವಾಸಿಗಳ ಸತ್ಕರ್ಮಗಳಲ್ಲಿ ಮಾತ್ರವಲ್ಲ ಆಹಾರ ಸಾಮಗ್ರಿಗಳಲ್ಲೂ ಸಮೃದ್ಧಿಯನ್ನುಂಟುಮಾಡುತ್ತದೆ.