ಸಿದ್ದಾಪುರ, ಮೇ 16: ವಾಹನಗಳು ತೆರಳುವ ಅದರಲ್ಲೂ ರಾಜ್ಯ ಹೆದ್ದಾರಿಯ ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬ ಇರುವುದೆಂದರೆ ನಂಬುತ್ತೀರಾ? ಹೌದು ನಂಬಲೇಬೇಕು.

ಸಿದ್ದಾಪುರ ಸಮೀಪದ ಅಭ್ಯತ್‍ಮಂಗಲ ಗ್ರಾಮದ ಒಂಟಿಯಂಗಡಿಯಲ್ಲಿ ರಸ್ತೆ ಮಧ್ಯೆ ವಿದ್ಯುತ್ ಕಂಬವಿದೆ. ಇತ್ತೀಚೆಗೆ ಒಂಟಿಯಂಗಡಿಯ ಕಿರು ಸೇತುವೆಯ ಬಳಿ ನೂತನ ಸೇತುವೆಯನ್ನು ನಿರ್ಮಿಸಲಾಗಿದೆ. ಸಿದ್ದಾಪುರದಿಂದ ಕುಶಾಲನಗರ ಹಾಗೂ ಮಡಿಕೇರಿಗೆ ತೆರಳುವ ರಸ್ತೆಯ ತಿರುವಿನಲ್ಲಿ ಈ ಸೇತುವೆ ಇದ್ದು, ನೂತನ ಸೇತುವೆಯ ಕಾಮಗಾರಿ ಮುಗಿದು ಇದೀಗ ಡಾಮರೀಕರಣದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಸೇತುವೆ ದಾಟಿದ ಕೂಡಲೇ ಸಿಗುವ ವಿದ್ಯುತ್ ಕಂಬ ರಸ್ತೆಯ ಮಧ್ಯ ಭಾಗದಲ್ಲಿದ್ದು, ಅಪಘಾತಗಳು ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಇದೆ. ಕಂಬವು ತಿರುವಿನಲ್ಲೇ ಇರುವ ಕಾರಣ ರಾತ್ರಿ ವೇಳೆಯಲ್ಲಿ ವಾಹನ ಚಾಲಕರ ಗಮನಕ್ಕೆ ಬಾರದೆ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ.