ಬೆಂಗಳೂರು, ಮೇ 15: ಕರ್ನಾಟಕದಲ್ಲಿ ಪ್ರಸಕ್ತ ಚುನಾವಣೆ ಒಂದೆಡೆ ವಿರೋಧ ಪಕ್ಷವಾಗಿದ್ದ ಬಿಜೆಪಿಗೆ ಆಡಳಿತಾರೂಢ ಕಾಂಗ್ರೆಸ್‍ಗಿಂತ ಅಧಿಕ ಸ್ಥಾನ ಗಳಿಸಿಕೊಟ್ಟಿದ್ದರೂ ಸರ್ಕಾರ ರಚನೆ ಅಗತ್ಯವಾದ ಸರಳ ಬಹುಮತ ದೊರಕಿಲ್ಲ. ಚುನಾವಣೆ ನಡೆದ 222 ಕ್ಷೇತ್ರಗಳ ಪೈಕಿ ಬಿಜೆಪಿ 103-104ರ ವ್ಯಾಪ್ತಿಯೊಳಗೆ ಜಯಗಳಿಸಿದ್ದು, ಬಹುಮತಕ್ಕೆ ಅಗತ್ಯವಾಗಿದ್ದ ಪ್ರಮಾಣದಲ್ಲಿ ಸುಮಾರು 8-9 ರಷ್ಟು ಸಂಖ್ಯೆ ಕಡಿಮೆಯಾಗಿದೆ.ಆದರೂ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರದಿಂದ ಈಗಷ್ಟೇ ಆಯ್ಕೆ ಆಗಿರುವ ಬಿ.ಎಸ್. ಯಡಿಯೂರಪ್ಪ ಅವರು ಇಂದು ತುರ್ತಾಗಿ ರಾಜ್ಯಪಾಲರನ್ನು ಭೇಟಿಯಾಗಿ ಅಧಿಕ ಸಂಖ್ಯೆಯಲ್ಲಿ ಜಯಗಳಿಸಿರುವ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡುವಂತೆ ಕೋರಿದ್ದಾರೆ. ಸದನದಲ್ಲಿಯೇ ಬಹುಮತ ಸಾಬೀತು ಪಡಿಸಲು ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಅಗತ್ಯವಾದಂತಹ ಸುಪ್ರೀಂಕೋರ್ಟ್ ತೀರ್ಪು ಸಹಿತ ಕಾನೂನಾತ್ಮಾಕ ದಾಖಲಾತಿಗಳನ್ನು ರಾಜ್ಯಪಾಲರಿಗೆ ಮನವಿಯೊಂದಿಗೆ ಸಲ್ಲಿಸಲಾಗಿದೆ.

ಆಶ್ಚರ್ಯವೆಂಬಂತೆ ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿಯಾಗಿ ಹಿಂತಿರುಗುತ್ತಿದ್ದಂತೆ 38 ಸ್ಥಾನಗಳಿಸಿರುವ ಜೆಡಿಎಸ್‍ನ ರಾಜ್ಯಾಧ್ಯಕ್ಷ ಹಾಗೂ ಪ್ರಸ್ತುತ ವಿಧಾನ ಸಭೆಗೆ ಆಯ್ಕೆ ಆಗಿರುವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ತತ್ಪೂರ್ವ ಮುಖ್ಯಮಂತ್ರಿ ಹಾಗೂ ನೂತನ ಶಾಸಕರಾಗಿ ಆಯ್ಕೆ ಆಗಿರುವ ಸಿದ್ದರಾಮಯ್ಯ ಇವರುಗಳು ಒಟ್ಟಿಗೆ ರಾಜ್ಯಪಾಲರನ್ನು ಭೇಟಿಯಾಗಲು ಆಗಮಿಸಿದರು. ಜೆಡಿಎಸ್ ಪಕ್ಷವು ರಾಜ್ಯದಲ್ಲಿ ನೂತನ ಸರ್ಕಾರ ರಚಿಸಲು 78 ಸ್ಥಾನಗಳಿಸಿರುವ ಕಾಂಗ್ರೆಸ್ ಪಕ್ಷವು ಪೂರ್ಣ ಬೆಂಬಲ ನೀಡಲು ಎಐಸಿಸಿ ಹಸಿರು ನಿಶಾನೆ ತೋರಿರುವದಾಗಿ ಕುಮಾರಸ್ವಾಮಿ ಸಮ್ಮುಖದಲ್ಲಿಯೇ ಸಿದ್ದರಾಮಯ್ಯ ಘೋಷಿಸಿದರು. ಕಾಂಗ್ರೆಸ್‍ನ ಎಲ್ಲಾ ಶಾಸಕರ ಸಮ್ಮತಿಯೊಂದಿಗೆ ಈ ನಿರ್ಧಾರ ತಳೆದಿರುವದಾಗಿ ಅವರು ಪ್ರಕಟಿಸಿದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ರಾಜಕೀಯ ವಿದ್ಯಾಮಾನಗಳು ಗೊಂದಲ ಮೂಡಿಸುವಂತಿದ್ದು, ಮುಂದೆ ಆಡಳಿತ ಸೂತ್ರವನ್ನು ಯಾರು ಹಿಡಿಯುತ್ತಾರೊ ಎನ್ನುವದು ಇನ್ನೂ ಕೂಡ ಕುತೂಹಲಭರಿತವಾಗಿದೆ.