ಮಡಿಕೇರಿ, ಮೇ 16: ರಾಜ್ಯ ವಿಧಾನ ಸಭೆಗೆ ಈ ಬಾರಿ ನಡೆದ ಚುನಾವಣೆಯ ಕಾವು ಹಾಗೂ ಫಲಿತಾಂಶ ಪ್ರಕಟಗೊಂಡಿರುವ ಬೆನ್ನಲ್ಲೇ ಮತ್ತೊಂದು ಚುನಾವಣೆಯೂ ನಿಗದಿಯಾಗಿದೆ. ರಾಜ್ಯ ವಿಧಾನ ಪರಿಷತ್‍ನ ಶಿಕ್ಷಕರ ಕ್ಷೇತ್ರದ ಮೂವರು ಹಾಗೂ ಪದವೀಧರ ಕ್ಷೇತ್ರದ ಮೂವರು ಅಭ್ಯರ್ಥಿಗಳು ಸೇರಿ ಒಟ್ಟು ಆರು ಮಂದಿಯ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದು, ಚುನಾವಣಾ ಆಯೋಗದಿಂದ ಈ ಚುನಾವಣೆಗೆ ಈಗಾಗಲೇ ಮುಹೂರ್ತ ನಿಗದಿ ಆಗಿದೆ. ಜೂನ್ 21ಕ್ಕೆ ಇವರ ಅಧಿಕಾರಾವಧಿ ಕೊನೆ ಗೊಳ್ಳುತ್ತಿದ್ದು, ಈ ಸ್ಥಾನದ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಗೊತ್ತುಪಡಿಸಿದೆ. ಆರು ಸ್ಥಾನಗಳ ಪೈಕಿ ಕೊಡಗು ಜಿಲ್ಲೆಯ ವ್ಯಾಪ್ತಿಯನ್ನು ಒಳಗೊಂಡಿರುವಂತೆ ಎರಡು ಅಭ್ಯರ್ಥಿಗಳ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಯಬೇಕಿದೆ. ದಕ್ಷಿಣ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಇದೇ ವಿಭಾಗದ ಪದವೀಧರ ಕ್ಷೇತ್ರದಿಂದ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ವಿಧಾನ ಪರಿಷತ್‍ನ ಸಭಾಪತಿಗಳೂ ಆಗಿರುವ ಡಿ.ಎಚ್. ಶಂಕರಮೂರ್ತಿ ಅವರುಗಳ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದೆ.

ಚುನಾವಣಾ ಆಯೋಗದಿಂದ ಈ ಚುನಾವಣೆಗಾಗಿ ಈಗಾಗಲೇ ಅಧಿಸೂಚನೆಯೂ

(ಮೊದಲ ಪುಟದಿಂದ) ಪ್ರಕಟಗೊಂಡಿದ್ದು, ಮತದಾನಕ್ಕೆ ದಿನಾಂಕವೂ ನಿಗದಿಯಾಗಿದೆ. ಮೇ 15 ರಂದೇ ಅಧಿಸೂಚನೆ ಪ್ರಕಟಗೊಂಡಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮೇ 22 ಕೊನೆಯ ದಿನಾಂಕವಾಗಿದೆ. ತಾ. 23 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ತಾ. 25 ಕೊನೆಯ ದಿನಾಂಕವಾಗಿದೆ. ಜೂನ್ 8 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4ರ ತನಕ ನಿಗದಿತ ಕೇಂದ್ರಗಳಲ್ಲಿ ಮತದಾನ ನಡೆಯಲಿದೆ. ಈ ಚುನಾವಣೆಯ ಫಲಿತಾಂಶ ಜೂನ್ 12 ರಂದು ಹೊರಬೀಳಲಿದೆ.

ಕೊಡಗು ಸೇರಿದ ವ್ಯಾಪ್ತಿ

ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಂಗಳೂರು ಹಾಗೂ ದಾವಣಗೆರೆ ಜಿಲ್ಲೆಯ ಎರಡು ತಾಲೂಕುಗಳಾದ ಚೆನ್ನಗಿರಿ ಹಾಗೂ ಹೊನ್ನಾಳಿ ಸೇರಿದಂತೆ ಒಟ್ಟು ಐದು ಜಿಲ್ಲೆ ಮತ್ತು ಎರಡು ತಾಲೂಕುಗಳÀ ಕಾರ್ಯವ್ಯಾಪ್ತಿ ಒಳಪಡಲಿವೆ. ಈ ಕ್ಷೇತ್ರದಿಂದ ಚುನಾಯಿತರಾಗುವವರು ಈ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳಾಗಿರುತ್ತಾರೆ.

ಕೊಡಗಿನ ಮತದಾರರ ವಿವರ

ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ನೋಂದಾಯಿತರಾಗಿರುವ ಮತದಾರರ ಪಟ್ಟಿಯನ್ನು ಜಿಲ್ಲಾಡಳಿತ ತಯಾರಿಸಿದೆ. ಈ ಎರಡು ಕ್ಷೇತ್ರಗಳಿಗೆ ಜಿಲ್ಲೆಯಲ್ಲಿ ನಿಗದಿತ ಕೇಂದ್ರಗಳಾದ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಹಾಗೂ ವೀರಾಜಪೇಟೆಯಲ್ಲಿ ಮತದಾನ ನಡೆಯಲಿದೆ.

ಶಿಕ್ಷಕರ ಕ್ಷೇತ್ರಕ್ಕೆ 1102 ಮತದಾರರು

ಶಿಕ್ಷಕರ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ ಸೋಮವಾರಪೇಟೆ ವಿಭಾಗದಲ್ಲಿ 183, ಕುಶಾಲನಗರ 296, ಮಡಿಕೇರಿ 258 ಹಾಗೂ ವೀರಾಜಪೇಟೆ ವಿಭಾಗದಲ್ಲಿ 365 ಮತದಾರರು ಸೇರಿದಂತೆ ಒಟ್ಟು 1102 ಮತದಾರರಿದ್ದಾರೆ.

ಪದವೀಧರ ಕ್ಷೇತ್ರ

ಪದವೀಧರ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ ಸೋಮವಾರಪೇಟೆ ವಿಭಾಗದಲ್ಲಿ 438, ಕುಶಾಲನಗರ 306, ಮಡಿಕೇರಿ 416 ಹಾಗೂ ವೀರಾಜಪೇಟೆ ವಿಭಾಗದಲ್ಲಿ 352 ಮತದಾರರು ಸೇರಿ ಸದ್ಯಕ್ಕೆ ಒಟ್ಟು 1512 ಮಂದಿ ನೋಂದಾಯಿತ ಮತದಾರರಿದ್ದಾರೆ. ಎರಡೂ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ತಾ. 22 ರಂದು ಅಂತಿಮಗೊಳ್ಳಲಿದೆ.

ನಾಮಪತ್ರ ಎಲ್ಲಿ..?

ಈ ಚುನಾವಣೆಗೆ ಸಂಬಂಧಿಸಿದಂತೆ ಮೈಸೂರಿನ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿರುತ್ತಾರೆ. ಸ್ಪರ್ಧಿಸುವ ಅಭ್ಯರ್ಥಿಗಳು ಮೈಸೂರಿನಲ್ಲೇ ನಾಮಪತ್ರ ಸಲ್ಲಿಸಬೇಕಾಗಿದೆ.

ಪಕ್ಷವಾರು ಚುನಾವಣೆ - ಅಭ್ಯರ್ಥಿಗಳು ಯಾರು?

ಈ ಚುನಾವಣೆ ವಿವಿಧ ರಾಜಕೀಯ ಪಕ್ಷ ಆಧಾರಿತವಾಗಿಯೇ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳಾಗಿ ಬಿಜೆಪಿಯಿಂದ ಕ್ಯಾ|| ಗಣೇಶ್ ಕಾರ್ಣಿಕ್, ಕಾಂಗ್ರೆಸ್‍ನಿಂದ ಕೊಡಗಿನವರಾದ ಹೊಸೂರು ರಮೇಶ್ ಜೋಯಪ್ಪ, ಜೆಡಿಎಸ್‍ನಿಂದ ಪಂಚಾಕ್ಷರಿ ಅಧಿಕೃತ ಅಭ್ಯರ್ಥಿಗಳಾಗಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೊಡಗಿನವರಾದ ಕೆ.ಕೆ. ಮಂಜುನಾಥ್ ಕುಮಾರ್ ಅವರು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಗಣೇಶ್ ಕಾರ್ಣಿಕ್ ಎದುರು ಮಂಜುನಾಥ್‍ಕುಮಾರ್ ಅವರು ಕೇವಲ 160 ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಈ ಬಾರಿ

ಪ್ರಸಕ್ತ ವರ್ಷ ನಡೆಯಲಿರುವ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಕೆ. ಮಂಜುನಾಥ್‍ಕುಮಾರ್ ಅವರು ಸ್ಪರ್ಧಿಸಲಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ಗಣೇಶ್ ಕಾರ್ಣಿಕ್ ಅವರೇ ಸ್ಪರ್ಧೆ ಮಾಡಲಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಹಾಗೂ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಅವರು ಇದನ್ನು ಖಚಿತಪಡಿಸಿದ್ದಾರೆ. ಜೆಡಿಎಸ್‍ನಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂದು ಇನ್ನೂ ತಿಳಿದು ಬಂದಿಲ್ಲ.

ಪದವೀಧರ ಕ್ಷೇತ್ರ

ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಈ ಬಾರಿ ಆಯನೂರು ಮಂಜುನಾಥ್ ಅವರು ಸ್ಪರ್ಧಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡಿದ್ದ ಎಸ್.ಪಿ. ದಿನೇಶ್ ಅವರೇ ಈ ಬಾರಿಯೂ ಸ್ಪರ್ಧೆ ಮಾಡಲಿದ್ದಾರೆ ಎಂದು ಜಿಲ್ಲೆಯ ಬಿಜೆಪಿ ಹಾಗೂ ಕಾಂಗ್ರೆಸ್ ಅಧ್ಯಕ್ಷರುಗಳು ತಿಳಿಸಿದ್ದಾರೆ.