ಮಡಿಕೇರಿ, ಮೇ 17: ಒಂದು ವರ್ಷದ ಹಿಂದೆ ಮಂಜಿನನಗರಿ ಮಡಿಕೇರಿಯ ರಸ್ತೆಗಳು ಬಹುತೇಕ ಸುಧಾರಣೆ ಕಂಡುಕೊಂಡಿದ್ದವು. ಇದ್ದಕ್ಕಿದ್ದಂತೆ ರಸ್ತೆ ಮಧ್ಯೆ ಜೆಸಿಬಿ ನರ್ತನವಾಡಿ ಕಾಂಕ್ರಿಟ್ ರಸ್ತೆಗಳಿಂದ ಹಿಡಿದು ಎಲ್ಲಾ ರಸ್ತೆಗಳನ್ನು ಬಗೆದು ಪುಡಿಗಟ್ಟಿತು. ಇದೀಗ ಮಳೆ ಕೂಡ ಸುರಿಯುತ್ತಿದ್ದು, ರಸ್ತೆಗಳಲ್ಲಿ ವಾಹನಗಳು ಸಾಗುವದಿರಲಿ, ನಡೆದಾಡಲೂ ಕೂಡ ಪರದಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಳಚರಂಡಿ ಕಾಮಗಾರಿಗಾಗಿ ರಸ್ತೆಗಳನ್ನು ಬಗೆಯಲಾಗುತ್ತಿದ್ದು, ಒಂದು ರೀತಿಯಲ್ಲಿ ಅಭಿವೃದ್ಧಿ ‘ಕಾಮಗಾರಿ’ ಎಂದು ಹೇಳಲಾಗುತ್ತಿದ್ದರೆ ಜನತೆಗೆ ಇದು ‘ಕಿರಿಕಿರಿ’ಯಾಗಿದೆ.(ಮೊದಲ ಪುಟದಿಂದ) ಜಲಮಂಡಳಿ ಮೂಲಕ ನಗರದಲ್ಲಿ ಒಳಚರಂಡಿ ಕಾಮಗಾರಿ ಕಳೆದೊಂದು ವರ್ಷದಿಂದ ನಡೆಯುತ್ತಿದೆ. ಬಹುತೇಕ ಎಲ್ಲಾ ರಸ್ತೆಗಳನ್ನು ಈಗಾಗಲೇ ಅಗೆದು ಪೈಪ್ಗಳನ್ನು ಅಳವಡಿಸಲಾಗಿದೆ. ಇನ್ನೂ ಕೂಡ ಈ ಕೆಲಸ ನಡೆಯುತ್ತಲೇ ಇದೆ. ರಸ್ತೆ ಅಗೆದು ಪೈಪ್ ಅಳವಡಿಸಿದ ಬಳಿಕ ಅದನ್ನು ಮುಚ್ಚಲಾಗುತ್ತಿದ್ದು, ಮುಚ್ಚಿದ ಜಾಗ ದಿನೇ ದಿನೇ ಕುಸಿದು ಗುಂಡಿಗಳಾಗುತ್ತಿವೆ. ಅಧಿಕಾರಿಗಳ ಪ್ರಕಾರ ಗುಂಡಿ ತೋಡಿದ ಬಳಿಕ ಅದು ಸಹಜ ಸ್ಥಿತಿಗೆ ಬರಲು 6 ತಿಂಗಳು ಬೇಕಂತೆ. ಆದರೆ 6 ತಿಂಗಳು ಮಳೆ ಬೀಳುವ ಈ ಜಿಲ್ಲೆಯಲ್ಲಿ ಈ ಗುಂಡಿ ‘ಸೆಟ್’ ಆಗಲು ಇನ್ನೆಲ್ಲಿ ಸಾಧ್ಯ? ಅದೂ ಅಲ್ಲದೆ ಮಳೆ ಬೀಳುತ್ತಿದ್ದರೂ ಅದರ ಪರಿವೆಯೇ ಇಲ್ಲದೆ ಗುಂಡಿ ತೋಡುತ್ತಿರುವದರಿಂದ ಇನ್ನಷ್ಟು ಅನಾನುಕೂಲವಾಗುತ್ತಿದೆ.
ಇದೀಗ ಪ್ರತಿನಿತ್ಯ ಮಳೆ ಬೀಳುತ್ತಿದ್ದು, ಗುಂಡಿ ತೆಗೆದ ಜಾಗದಲ್ಲಿ ಹಾಕಿರುವ ಕಲ್ಲು- ಮಣ್ಣುಗಳು ಕೊಚ್ಚಿಹೋಗಿ ರಸ್ತೆ ಮೇಲೆಲ್ಲ ಹರಡಿಕೊಳ್ಳುತ್ತಿವೆ. ದ್ವಿಚಕ್ರವಾಹನ ಸವಾರರಿಗೆ ಇದು ‘ಯಮದಾರಿ’ಯಾಗಿ ಪರಿಣಮಿಸುತ್ತಿದೆ. ಅದಕ್ಕೆ ಸರಿಯಾಗಿ ನಗರಸಭೆಯಿಂದ ನಿರ್ಮಿಸುತ್ತಿರುವ ‘ಅವೈಜ್ಞಾನಿಕ’ ಕಾಂಕ್ರಿಟ್ ಚರಂಡಿಗಳೂ ಕೂಡ ಸಹಕರಿಸುತ್ತಿವೆ. ರಸ್ತೆಗಿಂತ ಮೇಲ್ಭಾಗದಲ್ಲೇ ಚರಂಡಿಗಳಿದ್ದು, ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತಿರುವದರಿಂದ ರಸ್ತೆ ಇನ್ನಷ್ಟು ಹಾಳಾಗುತ್ತಿವೆ.
ಇತ್ತ ಮಳೆಗಾಲ ಆರಂಭವಾದರೂ ಚರಂಡಿ, ತೋಡುಗಳನ್ನು ಸ್ವಚ್ಛಮಾಡುವ ಕೆಲಸ ಆರಂಭವಾಗಿಲ್ಲ. ಇದರಿಂದಾಗಿ ಅಲ್ಲಲ್ಲಿ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹಣೆಗೊಂಡು ಮಳೆ ನೀರು ರಸ್ತೆಗೆ ಬರುತ್ತಿದೆ. ಸದ್ಯಕ್ಕಂತೂ ಈ ಸಮಸ್ಯೆ ಬಗೆಹರಿಯುವ ದಾರಿ ಕಾಣುತ್ತಿಲ್ಲವೆನ್ನಬಹುದು...! -ಸಂತೋಷ್.